ಬೆಲೆ ಏರಿಕೆಯಿಂದ ಜನರ ಆಕ್ರೋಶ ಮನದೊಳಗೆ ಕುದಿಯುತ್ತಿದೆ- ಸಿದ್ದರಾಮಯ್ಯ!
1 min readಬೆಂಗಳೂರು : ಬೆಲೆ ಏರಿಕೆಯಿಂದ ಜನರ ಆಕ್ರೋಶ ಒಳಗೊಳಗೆ ಕುದಿಯುತ್ತಿದೆ. ಈ ಸರ್ಕಾರ ತೊಲಗಿದರೆ ಸಾಕು, ಮತ್ತೆ ಚುನಾವಣೆ ಬಂದರೆ ಸಾಕು ಎಂದು ಕಾಯುತ್ತಿದ್ದಾರೆ. ಒಬ್ಬ ಯಡಿಯೂರಪ್ಪ ಅಲ್ಲ, ಯಡಿಯೂರಪ್ಪ ಅವರಂತಹ ನೂರು ಜನ ಬಂದರೂ ಬಿಜೆಪಿಯನ್ನು ಉಳಿಸಲಿಕ್ಕೆ ಸಾಧ್ಯವಿಲ್ಲ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ಸರ್ಕಾರ ಕೇಸ್ ಹಾಕುತ್ತದೆ ಎಂಬ ಕಾರಣಕ್ಕೆ ಇದನ್ನೆಲ್ಲ ಸಹಿಸಿಕೊಂಡು ಜನ ಸುಮ್ಮನಿದ್ದಾರೆ. ನರೇಂದ್ರ ಮೋದಿ, ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಯಾರಿಂದಲೂ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರಲು ಸಾಧ್ಯವಿಲ್ಲ. ಮುಂದಿನ ಚುನಾವಣೆಯಲ್ಲಿ ಜನ ಬಿಜೆಪಿಯನ್ನು ಮನೆಗೆ ಕಳಿಸಿ, ತಕ್ಕ ಪಾಠ ಕಲಿಸುತ್ತಾರೆ ಎಂದು ಅವರು ಹೇಳಿದ್ದಾರೆ.
ಕೇಂದ್ರ ಸರಕಾರದ ನಿರಂತರ ಇಂಧನ ಬೆಲೆ ಹೆಚ್ಚಳ ಹಾಗೂ ತತ್ಪರಿಣಾಮವಾಗಿ ದಿನ ಬಳಕೆ ವಸ್ತುಗಳ ದರ ಏರಿಕೆ ಖಂಡಿಸಿ ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಿಂದ ವಿಧಾನಸೌಧದವರೆಗೆ ನಡೆದ ಸೈಕಲ್ ಜಾಥಾದಲ್ಲಿ ಭಾಗವಹಿಸಿದ ಸಿದ್ದರಾಮಯ್ಯ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಸರ್ಕಾರ ಕೇಸ್ ಹಾಕುತ್ತೆ ಎಂಬ ಕಾರಣಕ್ಕೆ ಬೆಲೆಯೇರಿಕೆ ವಿರುದ್ಧ ಮಾತನಾಡದೆ ಜನ ಸುಮ್ಮನಿದ್ದಾರೆ. ಆದರೆ, ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಪಕ್ಷವನ್ನು ಉಳಿಸಲು ಸಾಧ್ಯವಿಲ್ಲ ಎಂದು ಸಿದ್ದರಾಮಯ್ಯ ಅವರು ಅಭಿಪ್ರಾಯ ಪಟ್ಟಿದ್ದಾರೆ.
ನರೇಂದ್ರ ಮೋದಿ ಅವರು ದೇಶದ ಪ್ರಧಾನಿಯಾದ ಮೇಲೆ ಅಗತ್ಯ ವಸ್ತುಗಳ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿದೆ. ಜನರ ಜೇಬಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೈಹಾಕಿವೆ.
ಈ ಹಿಂದೆ ಯು.ಪಿ.ಎ ಸರ್ಕಾರದ ಅವಧಿಯಲ್ಲಿ ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ 120 ಡಾಲರ್ ಗಿಂತ ಹೆಚ್ಚಿದ್ದರೂ ದೇಶದಲ್ಲಿ ಡೀಸೆಲ್ ಬೆಲೆ ರೂ.47 ಇತ್ತು, ಹಾಗಾಗಿ ಅಗತ್ಯ ವಸ್ತುಗಳ ಬೆಲೆ ಕಡಿಮೆಯಿತ್ತು. ಪೆಟ್ರೋಲ್ ಬೆಲೆ ಕೂಡ ರೂ. 75 ರ ಗಡಿಯೊಳಗೆ ಇತ್ತು.
ನರೇಂದ್ರ ಮೋದಿ ಅವರು ಪ್ರಧಾನಿಯಾದ ಮೇಲೆ ಕಚ್ಚಾತೈಲ ದರ ಇಳಿಮುಖವಾದರೆ, ಸರ್ಕಾರ ವಿಧಿಸುತ್ತಿದ್ದ ಅಬಕಾರಿ ಸುಂಕ ಏರಿಕೆಯಾಯಿತು.
2014 ರಿಂದ ಈ ವರೆಗೆ ಕಚ್ಚಾತೈಲ ದರ ಸುಮಾರು 50 ಡಾಲರ್ ಆಸುಪಾಸಿನಲ್ಲಿದ್ದರು ಕೂಡ ಅದರ ಲಾಭ ಗ್ರಾಹಕರಿಗೆ ಸಿಗಲಿಲ್ಲ. ಯು.ಪಿ.ಎ ಸರ್ಕಾರದ ಅವಧಿಯಲ್ಲಿ ಡೀಸೆಲ್ ಮೇಲೆ 3 ರೂಪಾಯಿ 45 ಪೈಸೆ ಹಾಗೂ ಪೆಟ್ರೋಲ್ ಮೇಲೆ 9ರೂಪಾಯಿ 20 ಪೈಸೆ ಅಬಕಾರಿ ಸುಂಕ ಇತ್ತು, ನರೇಂದ್ರ ಮೋದಿ ಅವರ ಏಳು ವರ್ಷಗಳ ಆಡಳಿತದಲ್ಲಿ ಅಬಕಾರಿ ಸುಂಕ ಡೀಸೆಲ್ ಮೇಲೆ 31 ರೂಪಾಯಿ 84 ಪೈಸೆ, ಪೆಟ್ರೋಲ್ ಮೇಲೆ 32 ರೂಪಾಯಿ 98 ಪೈಸೆಗೆ ಏರಿಕೆಯಾಗಿದೆ. ಇದರಲ್ಲಿ ಶೇ. 50 ಕಡಿಮೆ ಮಾಡಲಿ.
ನರೇಂದ್ರ ಮೋದಿ ಅವರ ಸರ್ಕಾರ ಡೀಸೆಲ್, ಪೆಟ್ರೋಲ್ ಹಾಗೂ ಗ್ಯಾಸ್ ಮೇಲಿನ ಅಬಕಾರಿ ಸುಂಕದ ಮೂಲಕ ಒಟ್ಟು ರೂ. 23 ಲಕ್ಷ ಕೋಟಿ ತೆರಿಗೆ ಸಂಗ್ರಹ ಮಾಡಿದೆ.
2020-21 ರ ಸಾಲಿನಲ್ಲಿ ರೂ. 3 ಲಕ್ಷ 35 ಸಾವಿರ ಕೋಟಿ ಅಬಕಾರಿ ಸುಂಕ ಸಂಗ್ರಹಿಸಲಾಗಿದೆ. ಕಳೆದ ಏಳು ವರ್ಷಗಳಲ್ಲಿ ಕರ್ನಾಟಕ ರಾಜ್ಯವೊಂದರಿಂದಲೇ 1 ಲಕ್ಷದ 20 ಸಾವಿರ ಕೋಟಿ ತೆರಿಗೆ ಸಂಗ್ರಹವಾಗಿದೆ.
ಮುಖ್ಯಮಂತ್ರಿಗಳು ಪೆಟ್ರೋಲ್, ಡೀಸೆಲ್ ಬೆಲೆಯೇರಿಕೆಗೆ ತೈಲ ಬಾಂಡ್ ಕಾರಣ ಎಂಬ ಉತ್ತರ ನೀಡಬಹುದು ಆದರೆ 2006 ರಿಂದ 2010 ರವರೆಗೆ ಒಟ್ಟು ರೂ. 1 ಲಕ್ಷದ 40 ಸಾವಿರ ಕೋಟಿ ತೈಲ ಬಾಂಡ್ ಖರೀದಿ ಮಾಡಲಾಗಿದೆ. ಆಮೇಲೆ ತೈಲ ಬಾಂಡ್ ತೆಗೆದುಕೊಳ್ಳುವುದನ್ನು ನಿಲ್ಲಿಸಲಾಯಿತು.
ಈ ಸರ್ಕಾರ ತೈಲ ಬಾಂಡ್ ಗೆ ಕಟ್ಟಿರುವ ಹಣ ಕೇವಲ ರೂ. 3,500 ಕೋಟಿ. ಪ್ರತೀ ವರ್ಷದ ಬಡ್ಡಿಯಂತೆ ಕಳೆದ ಏಳು ವರ್ಷಗಳಲ್ಲಿ ರೂ.70,000 ಕೋಟಿ ಕೊಟ್ಟಿದ್ದಾರೆ.
ಈ ಸರ್ಕಾರ ತೀರಿಸಬೇಕಾದ ಬಾಂಡ್ ಹಣ ರೂ. 1,30,923 ಕೋಟಿ. ರೂ. 5,762 ಕೋಟಿ ತೈಲಬಾಂಡ್ ಮೇಲಿನ ಸಾಲವನ್ನು ಮನಮೋಹನ್ ಸಿಂಗ್ ಅವರ ಸರ್ಕಾರವೇ ತೀರಿಸಿದೆ.
ನರೇಂದ್ರ ಮೋದಿ ಅವರ ಸರ್ಕಾರ ಒಂದೇ ವರ್ಷದಲ್ಲಿ ಸಂಗ್ರಹಿಸಿರುವ ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಅಬಕಾರಿ ಸುಂಕದಲ್ಲಿ ಒಟ್ಟು ಸಾಲವೇ ತೀರಿಹೋಗುತ್ತದೆ. ಹಾಗಾಗಿ ತೆರಿಗೆಯನ್ನು ಶೇ. 50 ಕಡಿತಗೊಳಿಸಬೇಕು ಎಂದು ಒತ್ತಾಯಿಸುತ್ತೇನೆ.
ತಮಿಳುನಾಡಿನ ಮುಖ್ಯಮಂತ್ರಿ ಸ್ಟಾಲಿನ್ ಅವರು ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ತೆರಿಗೆಯಲ್ಲಿ ರೂ. 3 ಕಡಿಮೆ ಮಾಡಿದ್ದಾರೆ. ನಮ್ಮ ರಾಜ್ಯ ಸರ್ಕಾರ ಯಾಕೆ ಈ ರೀತಿ ತೆರಿಗೆ ಕಡಿತಗೊಳಿಸಬಾರದು?
ಈ ರೀತಿ ತೆರಿಗೆ ಕಡಿತ ಮಾಡಿದರೆ ಪೆಟ್ರೋಲ್, ಡೀಸೆಲ್ ಬೆಲೆ ಇಳಿಯುವ ಜೊತೆಗೆ ಕಬ್ಬಿಣ, ಸಿಮೆಂಟ್, ಬಸ್ ಪ್ರಯಾಣದರ, ಅಗತ್ಯ ವಸ್ತುಗಳ ಬೆಲೆ, ಹೋಟೆಲ್ ಬಿಲ್ ಎಲ್ಲವೂ ಕಡಿಮೆಯಾಗುತ್ತದೆ.
ಬೆಲೆಯೇರಿಕೆ ಇಂದ ಜನರ ಜೇಬು ತೂತಾಗಿದೆ. ಮನೆಯಲ್ಲಿದ್ದ ಬಂಗಾರವನ್ನು ಅಡ ಇಟ್ಟು ಜೀವನ ಸಾಗಿಸಬೇಕಾದ ಪರಿಸ್ಥಿತಿ ಇದೆ.
ಜಿ.ಎಸ್.ಟಿ ಬಂದಮೇಲೆ ರಾಜ್ಯಗಳಿಗಿದ್ದ ತೆರಿಗೆ ಸಂಗ್ರಹದ ಹಕ್ಕು ಈಗ ಇಲ್ಲವಾಗಿದೆ. ಕೇಂದ್ರ ಸರ್ಕಾರ ಜಿ.ಎಸ್.ಟಿ ಪರಿಹಾರವನ್ನು ಸರಿಯಾಗಿ ಕೊಡದೆ, ಸಾಲ ತಗೊಳ್ಳಿ ಎನ್ನುತ್ತಿದೆ.
15ನೇ ಹಣಕಾಸು ಆಯೋಗದಿಂದ ರಾಜ್ಯಕ್ಕೆ ಅನ್ಯಾಯವಾಗಿದೆ, ರಾಜ್ಯದ ಪಾಲನ್ನು 4.71% ಇಂದ 3.64% ಗೆ ಇಳಿಸಲಾಗಿದೆ. ಹಿಂದೆ ರಾಜ್ಯದ ಪಾಲು, ವಿಶೇಷ ಅನುದಾನ ಸೇರಿ ಒಟ್ಟು ರೂ. 80,000 ಕೋಟಿ ರಾಜ್ಯಕ್ಕೆ ಬರುತ್ತಿತ್ತು, ಆದರೆ ಈಗ ಅದು ರೂ. 38,000 ಮಾತ್ರ ಬರುತ್ತಿದೆ. ಇದಕ್ಕೆ ಯಾರು ಹೊಣೆ?
15ನೇ ಹಣಕಾಸು ಆಯೋಗ ರಾಜ್ಯಕ್ಕೆ ಶಿಫಾರಸು ಮಾಡಿದ್ದ ರೂ. 5,495 ವಿಶೇಷ ಅನುದಾನವನ್ನು ಕೂಡ ರದ್ದು ಮಾಡಿದರು, ಅದನ್ನು ಕೇಳುವ ಧೈರ್ಯವಿಲ್ಲದ ಭಂಡ ಸರ್ಕಾರ ಬಿಜೆಪಿಯದು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಪೆಟ್ರೋಲ್, ಡೀಸೆಲ್ ಬೆಲೆ ಕಡಿಮೆ ಮಾಡುತ್ತಾರೆ ಎಂಬ ನಿರೀಕ್ಷೆ ಇಲ್ಲ. ಭಂಡ ಸರ್ಕಾರ ಇದು. ಇವತ್ತು ಆಟೋ ಚಾಲಕರು, ಕ್ಯಾಬ್ ಚಾಲಕರು, ಟ್ರ್ಯಾಕ್ಟರ್ ಇರುವ ರೈತರು, ಬಸ್ ಮಾಲೀಕರು, ಲಾರಿ ಮಾಲೀಕರು ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾರೆ.
ಈ ಬಗ್ಗೆ ಮಾಧ್ಯಮಗಳು ಹೆಚ್ಚಿನ ಒತ್ತು ಕೊಟ್ಟು, ಸುದ್ದಿ ಪ್ರಸಾರ ಮಾಡಬೇಕು ಎಂದು ಸಿದ್ದರಾಮಯ್ಯ ಅವರು ಹೇಳಿದರು.