ಪಿಯುಸಿ ಫಲಿತಾಂಶ ಪ್ರಕಟ: ಶೇ.29.91 ವಿದ್ಯಾರ್ಥಿಗಳು ತೇರ್ಗಡೆ; ಬಾಲಕಿಯರೇ ಮೇಲುಗೈ

1 min read

ಬೆಂಗಳೂರು,ಸೆ.20-ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಫಲಿತಾಂಶ ಇಂದು ಪ್ರಕಟಗೊಂಡಿದೆ. ಶೇಕಡ 29.91 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ.
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಫಲಿತಾಂಶವನ್ನು ಪ್ರಕಟಿಸಿದ್ದು, ಪರೀಕ್ಷೆಗೆ ಹಾಜರಾದ ಒಟ್ಟು 18,413 ವಿದ್ಯಾರ್ಥಿಗಳಲ್ಲಿ 5,507 (ಶೇ.29.91) ತೇರ್ಗಡೆಯಾಗಿದ್ದಾರೆ. ಒಟ್ಟು ವಿದ್ಯಾರ್ಥಿಗಳ ಪೈಕಿ ಬಾಲಕಿಯರು ಮೇಲುಗೈ ಸಾಧಿಸಿದ್ದು, ಶೇ.36.72ರಷ್ಟು ಉತ್ತೀರ್ಣರಾಗಿದ್ದರೆ, ಬಾಲಕರು ಶೇ.26.06ರಷ್ಟು ತೇರ್ಗಡೆಯಾಗಿದ್ದಾರೆ ಎಂದು ಮಾಹಿತಿ ನೀಡಿದರು.
ವಿಜ್ಞಾನ ವಿಭಾಗದಲ್ಲಿ ಶೇ.70.83, ವಾಣಿಜ್ಯ- ಶೇ.24.98, ಕಲಾ ವಿಭಾಗದಲ್ಲಿ ಶೇ.32.06 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಒಟ್ಟು ತೇರ್ಗಡೆಯಾದವರಲ್ಲಿ ಗ್ರಾಮೀಣ ಶೇ.32.59, ನಗರ ಶೇ.28.62ರಷ್ಟು ವಿದ್ಯಾರ್ಥಿಗಳಿದ್ದಾರೆ.
ಇನ್ನು ಕೊರೊನಾ ಹಿನ್ನೆಲೆಯಲ್ಲಿ ಈ ಬಾರಿ ದ್ವಿತೀಯ ಪಿಯುಸಿ ಎಲ್ಲ ವಿದ್ಯಾರ್ಥಿಗಳನ್ನು ಸರ್ಕಾರ ಪಾಸ್ ಮಾಡಿತ್ತು. ಆದರೆ, ಇದನ್ನು ಚಾಲೆಂಜ್ ಮಾಡಿದ 592 ವಿದ್ಯಾರ್ಥಿಗಳು ಪರೀಕ್ಷೆ ಬರೆದೇ ಇನ್ನೂ ಉತ್ತಮ ಅಂಕಗಳಿಸುತ್ತೇವೆ ಎಂದು ಪರೀಕ್ಷೆಗೆ ಹಾಜರಾಗಿದ್ದರು.
ಪರೀಕ್ಷೆ ಬರೆದ ಒಟ್ಟು 592 ಹೊಸಬರಲ್ಲಿ 556 ತೇರ್ಗಡೆ (93.92%) ಹೊಂದಿದ್ದು, 36 ವಿದ್ಯಾರ್ಥಿಗಳು ಫೇಲ್ ಆಗಿದ್ದಾರೆ. ಪುನರಾವರ್ತಿತ 351 ರಲ್ಲಿ 183 ಪಾಸ್ (52.29%), 168. ಫೇಲ್, ಖಾಸಗಿ 17,470 ರಲ್ಲಿ 4,768 ಉತ್ತೀರ್ಣ (27.29%), 12,906 ವಿದ್ಯಾರ್ಥಿಗಳು ಫೇಲ್ ಆಗಿದ್ದಾರೆ.
ಮರು ಮೌಲ್ಯಮಾಪನಕ್ಕೆ 1,670 ರೂ. ಶುಲ್ಕ ನಿಗದಿಪಡಿಸಿದ್ದು, ಅಕ್ಟೋಬರ್ 5 ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಬಿ.ಸಿ.ನಾಗೇಶ್ ವಿವರಿಸಿದರು. ಇಲಾಖೆಯ ಪ್ರಧಾನ ಕಾರ್ಯದರ್ಶಿ ಉಮಾಶಂಕರ್, ಪಿಯು ಮಂಡಳಿ ನಿರ್ದೇಶಕಿ ಆರ್.ಸ್ನೇಹಲ್ ಇದ್ದರು.
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ರಿಂದ ಪಿಯುಸಿ ಫಲಿತಾಂಶ ಪ್ರಕಟ. ಶೇ.29.91 ವಿದ್ಯಾರ್ಥಿಗಳು ತೇರ್ಗಡೆ. ಬಾಲಕಿಯರೇ ಮೇಲುಗೈ.

About Author

Leave a Reply

Your email address will not be published. Required fields are marked *