ಟೋಕಿಯೊ ಒಲಂಪಿಕ್ಸ್‌ಗೆ ಚಾಲನೆ-‌ದೇಶದಲ್ಲಿ ಮೊಳಗುತ್ತಿದೆ ಚಿಯರ್ ಫಾರ್ ಇಂಡಿಯಾ ಘೋಷಣೆ!

1 min read

ಜಗತ್ತಿನ ಅತಿ ದೊಡ್ಡ ಕ್ರೀಡಾ ಉತ್ಸವ ಒಲಿಂಪಿಕ್ಸ್-‌2020 ಕ್ಕೆ ವಿದ್ಯುಕ್ತ ಚಾಲನೆ ದೊರೆತು, ಕ್ರೀಡಾಕೂಟ ಆರಂಭಗೊಂಡಿದೆ. ಜಪಾನಿನ ಟೋಕಿಯೋ ನಗರ ಬೃಹತ್ ಕ್ರೀಡಾಕೂಟ ಆಯೋಜನೆಗೊಂಡಿದ್ದು, ಕೋವಿಡ್ ನಿಯಮಪಾಲನೆಯೊಂದಿಗೆ ಈ ಬಾರಿಯ ಒಲಿಂಪಿಕ್ಸ್ ಪ್ರೇಕ್ಷಕರಿರದ ಒಲಿಂಪಿಕ್ಸ್ ಎನ್ನುವ ಖ್ಯಾತಿಗೂ ಒಳಗಾಗಿದೆ. ಭಾರತದಿಂದ 126 ಮಂದಿ ಕ್ರೀಡಾಳುಗಳು ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುತ್ತಿದ್ದು, ಕ್ರೀಡಾಳುಗಳ ಮೇಲೆ ಭರವಸೆ, ಆಶಾವಾದ ದ್ವಿಗುಣಗೊಂಡಿದೆ. ನಿರೀಕ್ಷಿತ ಮಟ್ಟದಲ್ಲಿ ಪ್ರದರ್ಶನ ನೀಡಿ ದೇಶಕ್ಕಾಗಿ ಹೆಚ್ಚಿನ ಪದಕ ಗೆಲ್ಲುವ ತವಕದಲ್ಲಿದ್ದಾರೆ ಭಾರತೀಯ ಕ್ರೀಡಾಳುಗಳು. ಭಾರತ ಸರಕಾರವು ದೇಶದ ಯುವ ಸಮೂಹದಲ್ಲಿ ಕ್ರೀಡಾ ಉತ್ಸಾಹವನ್ನು ಇಮ್ಮಡಿಗೊಳಿಸುವ ಹಲವು ಕಾರ್ಯಕ್ರಮಗಳನ್ನು ಕಳೆದ ಕೆಲ ವರ್ಷಗಳಿಂದ ಹಮ್ಮಿಕೊಂಡಿದ್ದು, ಇದರ ಪ್ರತಿಫಲನ ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಆಗುವ ಎಲ್ಲಾ ಸಾಧ್ಯತೆಗಳಿವೆ.

ಸಿಡ್ನಿ ಒಲಿಂಪಿಕ್ಸ್‌ನಿಂದ ಹಿಡಿದು ಕಳೆದ ರಿಯೋ ಒಲಿಂಪಿಕ್ಸ್ ತನಕ ಭಾರತದ ಸಾಧನೆ ಹಂತ ಹಂತವಾಗಿ ಉತ್ತಮಗೊಳ್ಳುತ್ತಲಿದೆ. ಕರ್ಣಂ ಮಲ್ಲೇಶ್ವರಿ, ಅಭಿನವ ಬಿಂದ್ರಾ, ರಾಜವರ್ಧನ ರಾಥೋಡ್, ಯೋಗೇಶ್ವರ ದತ್ತ್, ಪಿ.ವಿ ಸಿಂಧೂ, ಸೈನಾ ನೆಹ್ವಾಲ್, ಮೇರಿ ಕೋಮ್ಹೀಗೆ ಹಲವು ಭಾರತೀಯ ಒಲಿಂಪಿಕ್ಸ್ ಸಾಧಕರ ಪಟ್ಟಿಯನ್ನು ಎರಡು ದಶಕಗಳ ತರುವಾಯದಲ್ಲಿ ಹೆಸರಿಸಬಹುದು. ಬಹಳ ಹಿಂದೆ ಕೇವಲ ಹಾಕಿ ಮಾತ್ರ ಭಾರತೀಯರ ಶಕ್ತಿ ಎಂದರೆ, ನಂತರ ಮಿಲ್ಖಾ ಸಿಂಗ್ ಹಾಗೆಯೇ ಪಿ.ಟಿ ಉಷಾ ಒಲಿಂಪಿಕ್ಸ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ಓಟಗಾರರೆಂದು ಬಿಂಬಿತವಾಗಿದ್ದರು. ಬಹಳ ಕಾಲದ ತನಕ ಇವರದ್ದೆ ಗುಣಗಾನ ಕೇಳುವ ಕಾಲವಿತ್ತು. ನಂತರ ಲಾಂಗ್ ಜಂಪರ್ ಅಂಜು ಬಾಬಿ ಜೋರ್ಜ್ ಕೂಡಾ ಅಂತಹ ಪಟ್ಟಿಗೆ ಸೇರುತ್ತಾರೆ. ಪ್ರಸ್ತುತ ಕಾಲಘಟ್ಟದಲ್ಲಿ ಹಲವು ಮಂದಿ ಕ್ರೀಡಾಳುಗಳು ಈ ಸಾಧಕರ ಪಟ್ಟಿಯಲ್ಲಿದ್ದಾರೆ ಮಾತ್ರವಲ್ಲ ಹೆಚ್ಚಿನ ಭಾರತೀಯ ಯುವ ಸಮೂಹಕ್ಕೆ ಹೆಮ್ಮೆ ಮೂಡಿಸಿ, ಕ್ರೀಡೆಯಲ್ಲಿ ತೊಡಗುವಂತೆ ಮಾಡುವ ಕಾರ್ಯವೂ ಇತ್ತೀಚಿನ ಕ್ರೀಡಾಪಟುಗಳ ಸ್ಫೂರ್ತಿ, ಪ್ರಭಾವದಿಂದ ಆಗುತ್ತಿದೆ. ನಿರಂತರ ಅಭ್ಯಾಸ, ಕಠಿಣ ಸವಾಲು ಎದುರಿಸುವ ಚಾಕಚಕ್ಯತೆ, ಮನೋಬಲ ಹೀಗೆ ಹಲವು ಆಯಾಮಗಳು, ಸವಾಲುಗಳು ದೊಡ್ಡ ಕ್ರೀಡಾಕೂಟಗಳಲ್ಲಿರುತ್ತವೆ. ಇಂತಹ ಎಲ್ಲವುಗಳನ್ನು ಮೆಟ್ಟಿ ನಿಲ್ಲುವ ತಾಕತ್ತು ಭಾರತೀಯರಲ್ಲಿ ಇತ್ತೀಚಿನ ದಿನಗಳಲ್ಲಿ ನೋಡಬಹುದಾಗಿದೆ.

ಮೋದಿಯಿಂದ ಶುಭಾಶಯ ಸಲ್ಲಿಕೆ

ಈ ಬಾರಿ ನಡೆಯುವ ಟೋಕಿಯೋ ಒಲಿಂಪಿಕ್ಸ್ ಭಾರತೀಯ ಕ್ರೀಡಾಳುಗಳಿಗೆ ಹೆಚ್ಚು ಪದಕ ಗೆಲ್ಲುವ ಅವಕಾಶವನ್ನು ನೀಡುತ್ತಿದೆ, ಮಾತ್ರವಲ್ಲ ಹೆಚ್ಚಿನ ಯುವ ಕ್ರೀಡಾಪಟುಗಳು ಭಾಗವಹಿಸುತ್ತಿರುವ ಪ್ರತಿಷ್ಠಿತ ಕ್ರೀಡಾಕೂಟವೂ ಹೌದು. ಒಂದು ಒಲಿಂಪಿಕ್ಸ್‌ ಪದಕ ಓರ್ವ ಕ್ರೀಡಾಳುವಿನ ಬದುಕನ್ನು ಅವಿಸ್ಮರಣೀಯವಾಗಿಸುತ್ತದೆ. ತನ್ನ ಸಾಧನೆಯ ಕೀರ್ತಿ ಶಿಖರದ ಮೂಲಕ ಗೆದ್ದ ಆ ಒಂದು ಪದಕವು ದೇಶದ ಕೀರ್ತಿಯನ್ನು ಹೆಚ್ಚಿಸುತ್ತದೆ. ಆ ಮೂಲಕ ಕ್ರೀಡಾ ಸಾಧಕ ಮತ್ತೋರ್ವನಿಗೆ ಸ್ಪೂರ್ತಿಯ ಚಿಲುಮೆಯಾಗುತ್ತಾನೆ. ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವುದೇ ಒಂದು ಸಾಧನೆ, ಪದಕ ಗೆಲ್ಲುವುದು ಒಂದು ಮಹತ್ಸಾಧನೆಯೂ ಹೌದು. ಒಲಿಂಪಿಕ್ಸ್‌ ಭಾಗವಹಿಸಿದ ಪ್ರತಿಯೋರ್ವ ಆಟಗಾರ, ಕ್ರೀಡಾಳುವಿಗೂ ಒಲಿಂಪಿಯನ್‌ ಎಂಬ ವಿಶೇಷ ಸಂಬೋಧನೆ ದೊಡ್ಡ ಕ್ರೀಡಾಕೂಟದ ಮಹತ್ವವನ್ನು ತಿಳಿಸುತ್ತದೆ. ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ಕ್ರೀಡಾ ಉತ್ಸವ ಟೊಕಿಯೋ ನಗರದಲ್ಲಿ ಗರಿಗೆದರಿದೆ, ಕೊರೊನಾ ಕಾರಣ ಒಂದು ವರ್ಷ ಮುಂದೂಲ್ಪಟ್ಟ ಟೋಕಿಯೋ 2020 ಒಲಿಂಪಿಕ್ಸ್‌ 2021 ಜುಲೈ ತಿಂಗಳಿನ ಜುಲೈ 23 ರಂದು ಆರಂಭಗೊಂಡಿದೆ. ಕೊವಿಡ್‌ ನಿಯಮಗಳಿಗನುಸಾರವಾಗಿ ಈ ಬಾರಿಯ ಕ್ರೀಡಾಕೂಟ ನಡೆಯಲಿದ್ದು. ಟೊಕಿಯೊ, ಫುಕುಶಿಮಾ ನಗರಗಳಲ್ಲಿ ನಡೆಯುವ ಸ್ಪರ್ಧೆಗಳಿಗೆ ಯಾವುದೇ ಪ್ರೇಕ್ಷಕರಿರುವುದಿಲ್ಲ. ಮಿಯಾಗಿ, ಶಿಸುವೊಕ ನಗರಗಳಲ್ಲಿ ಕೇವಲ ಬೆರಳೆಣಿಕೆಯಷ್ಟು ಪ್ರೇಕ್ಷಕರಿಗೆ ನೋಡುವ ಅವಕಾಶ ಕಲ್ಪಿಸಲಾಗಿದೆ. ಜಪಾನ್‌ ಎರಡನೇ ಬಾರಿ ಬಹುದೊಡ್ಡ ಕ್ರೀಡಾಕೂಟವನ್ನು ಆಯೋಜಿಸುತ್ತಿದೆ. ಈ ಹಿಂದೆ 1964 ರಲ್ಲಿ ಜಪಾನ್‌ ಒಲಿಂಪಿಕ್ಸ್‌ ಆಯೋಜಿಸಿತ್ತು. ಸಂದಿಗ್ದತೆಯ ಮಧ್ಯೆ ಜಪಾನ್‌ ನಗರಗಳಲ್ಲಿ ಕ್ರೀಡೆಯ ಆಯೋಜನೆ ಶ್ಲಾಘನೀಯವಾಗಿದೆ ಮಾತ್ರವಲ್ಲ ಪುಟ್ಟ ದೇಶದ ಸಾಮರ್ಥ್ಯವನ್ನು ಸ್ಮರಣೀಯವಾಗಿಸುತ್ತಿದೆ. ಎರಡು ದಿನಗಳ ಹಿಂದೆಯಷ್ಟೇ ಕ್ರೀಡಾಕೂಟವನ್ನು ನಿಲ್ಲಿಸುವ ಬಗ್ಗೆ ಊಹಾಪೋಹಗಳು ಇದ್ದರೂ, ಇಂತಹ ಯಾವುದಕ್ಕೂ ಬಗ್ಗದ ಜಪಾನ್‌ ಒಲಿಂಪಿಕ್ಸ್‌ ಆಯೋಜಿಸುತ್ತಿರುವುದು ಪ್ರಶಂಸನೀಯವೇ ಸರಿ. ಒಲಿಂಪಿಕ್ಸ್ ಗ್ರಾಮಕ್ಕೆ ತಲುಪಿದ ಒಟ್ಟು ೭೦ ಮಂದಿ ಕ್ರೀಡಾಳುಗಳಲ್ಲಿ ಕೊವಿಡ್‌ ಸೋಂಕು ಕಾಣಿಸಿಕೊಂಡಿದ್ದು, ಮತ್ತಷ್ಟೂ ಎಚ್ಚರಿಕೆ ವಹಿಸುವಂತೆ ಮಾಡಿದೆ.

ಚೀರ್‌ ಫಾರ್‌ ಇಂಡಿಯಾ

ಒಲಿಂಪಿಕ್ಸ್‌ ಸಾಧನೆ ಪಥವನ್ನು ಅವಲೋಕಿಸಿದರೆ ಅಮೇರಿಕಾ, ರಷ್ಯಾ, ಚೀನಾ, ಐರೋಪ್ಯ ರಾಷ್ಟ್ರಗಳು ಸೇರಿದಂತೆ ಆಸ್ಟ್ರೇಲಿಯ ಉತ್ತಮ ಸಾಧನೆಗೈದಿವೆ. ಭಾರತವೂ ಸಾಧನೆಯಲ್ಲಿ ಬಹಳ ಹಿಂದೆ ಬಿದ್ದಿಲ್ಲವಾದರೂ, ಸಾಧಿಸುವತ್ತ ಮುನ್ನಗ್ಗುತ್ತಿದೆ ಎಂಬುದು ಖಚಿತ. ದೇಶ ಈ ತನಕ ಒಟ್ಟು 28 ಪದಕಗಳನ್ನು ಗೆದ್ದಿದೆ. ಅವೆಲ್ಲವೂ ಅಮೂಲ್ಯವಾದುವು. ಭಾರತದ ಆರಂಭಿಕ ಸಾಧನೆ, ಒಲಿಂಪಿಕ್ಸ್‌ ಹೆಜ್ಜೆ ಗುರುತು ಮೂಡಿದ್ದು ಹಾಕಿ ಕ್ರೀಡೆಯ ಮೂಲಕ, ಪ್ರತಿ ಬಾರಿಯೂ ಚಿನ್ನ ಗೆಲ್ಲುತ್ತ ಬಂದ ಭಾರತೀಯ ಹಾಕಿ ತಂಡ, 1980 ರ ಮಾಸ್ಕೋ ಒಲಿಂಪಿಕ್ಸ್‌ನಲ್ಲಿ ಗೆದ್ದ ಪದಕ ಕೊನೆಯ ಚಿನ್ನದ ಪದಕ. ಈ ಮಧ್ಯೆ ಭಾರತೀಯ ಕ್ರೀಡಾರಂಗವೂ ಹಲವು ಏಳುಬೀಳುಗಳನ್ನು ಕಂಡಿತ್ತು. 1960 ಮತ್ತು 1984 ರಲ್ಲಿ ಕೂದಲೆಳೆ ಅಂತರದಿಂದ ಹಾರುವ ಸಿಖ್‌ ಖ್ಯಾತಿಗೆ ಒಳಗಾಗಿದ್ದ ಮಿಲ್ಖಾ ಕಂಚಿನ ಪದಕದಿಂದ ವಂಚಿತರಾದರೆ, ಪಿ.ಟಿ ಉಷಾ ಕೂಡ ಕೇವಲ ಸಣ್ಣ ಅಂತರದಿಂದ ಪದಕ ಜಯಿಸದಾದರು.

ಆದರೆ ಕಳೆದ ಎರಡು ದಶಕಗಳಿಂದ ದೇಶ ಇತರೆ ಕ್ರೀಡೆಗಳಲ್ಲಿ ತನ್ನ ಛಾಪನ್ನು ಒತ್ತಿದೆ. ಶೂಟಿಂಗ್‌, ಕುಸ್ತಿ, ವೇಟ್‌ಲಿಫ್ಟಿಂಗ್‌, ಟೆನ್ನಿಸ್‌, ಬ್ಯಾಡ್ಮಿಂಟನ್‌ಗಳಲ್ಲಿ ಪದಕ ಜಯಿಸಿದೆ. 2021 ರ ಲಂಡನ್‌ ಒಲಿಂಪಿಕ್ಸ್‌ ಈ ನಿಟ್ಟಿನಲ್ಲಿ ಹೊಸ ಅಧ್ಯಾಯ ರಚಿಸಿತು ಎನ್ನಬಹುದು. ಪಿ.ವಿ ಸಿಂಧು, ಮೇರಿಕೋಮ್‌­ನಂತಹ ಮಹಿಳಾಮಣಿಗಳು ದೇಶಕ್ಕಾಗಿ ಪದಕ ಜಯಿಸಿದ್ದು ಅವಿಸ್ಮರಣೀಯ ಸಾಧನೆ. ವಿಶ್ವದ ಅತಿದೊಡ್ಡ ಜನಸಂಖ್ಯಾ ರಾಷ್ಟ್ರ, ಹೆಚ್ಚಿನ ಯುವ ಸಮೂಹವನ್ನು ಹೊಂದಿರುವ ರಾಷ್ಟ್ರ ಇತ್ತೀಚಿನ ದಿನಗಳಲ್ಲಿ ಕ್ರೀಡೆಯಲ್ಲಿ ಹೆಚ್ಚು ಆಸಕ್ತಿ ತೋರುತ್ತಿದೆ. ಮುಂಬರುವ ದಿನಗಳು ಭಾರತದ ಕ್ರೀಡಾ ಸಾಧನೆಯನ್ನು ಜಗಜ್ಜಾಹೀರು ಮಾಡುವಂತಾಗಲಿ. ಈ ಬಾರಿಯ ಒಲಿಂಪಿಕ್ಸ್‌ನಲ್ಲೂ ಭಾರತೀಯ ಕ್ರೀಡಾಪಟುಗಳಲ್ಲಿ ಹೆಚ್ಚಿನ ಉತ್ಸಾಹ ಶಕ್ತಿ ತುಂಬಿಸೋಣ, ದೇಶಕ್ಕಾಗಿ ಕ್ರೀಡಾಳುಗಳ ಚಿನ್ನದ ಬೇಟೆ ಮುಂದುವರಿಯಲಿ ಎಂದು ಹಾರೈಸೋಣ. #Cheer4India

ವಿವೇಕಾದಿತ್ಯ ಕೆ.
ಪತ್ರಕರ್ತರು, ಹವ್ಯಾಸಿ ಬರಹಗಾರರು

About Author

Leave a Reply

Your email address will not be published. Required fields are marked *