ಹುಚ್ಚಗಣಿ ಮಹದೇವಮ್ಮ ದೇವಾಲಯ ತೆರವು ವಿಚಾರ: ರಾಜಕೀಯ ರೂಪ; ಗ್ರಾಮದಲ್ಲಿ ಗಲಾಟೆ ಐವರಿಗೆ ಗಾಯ

1 min read


ಮೈಸೂರು,ಸೆ.15-ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಹರದನಹಳ್ಳಿ ಬಳಿಯ ಹುಚ್ಚಗಣಿ ಗ್ರಾಮದ ಮಹದೇವಮ್ಮ ದೇವಾಲಯ ತೆರವು ವಿಚಾರ ಇದೀಗ ರಾಜಕೀಯ ರೂಪ ಪಡೆದುಕೊಂಡಿದ್ದು, ಇಂದು ಬೆಳಿಗ್ಗೆ ನಡೆದ ಗಲಾಟೆಯಲ್ಲಿ ಐವರು ಗಾಯಗೊಂಡಿರುವ ಘಟನೆ ನಡೆದಿದೆ.
ಗಲಾಟೆಯಲ್ಲಿ ಉದಯ್ ಕುಮಾರ್, ಪ್ರಸನ್ನ, ಕೀರ್ತಿ, ರವಿ ಹಾಗೂ ರಾಜು ಗಾಯಗೊಂಡಿದ್ದು, ಇವರ ಪೈಕಿ ಉದಯ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಹಿಳೆ ಕಣ್ಣೀರು ಹಾಕುತ್ತಿರುವ ದೃಶ್ಯ


ದೇವಾಲಯ ತೆರವನ್ನು ವಿರೋಧಿಸಿ ಇಂದು ಪ್ರತಿಭಟನೆ ನಡೆಸಲು ತೀರ್ಮಾನ ಮಾಡಲಾಗಿತ್ತು. ಆದರೆ ಈ ವಿಚಾರದ ಬಗ್ಗೆ ಬಿಜೆಪಿ ಮುಖಂಡರಿಗೆ ಮಾಹಿತಿ ನೀಡಿರಲಿಲ್ಲ. ಇದನ್ನು ಗ್ರಾಮದಲ್ಲಿ ನಡೆದ ಸಭೆಯಲ್ಲಿ ಉದಯ್ ಎಂಬವರು ಪ್ರಶ್ನೆ ಮಾಡಿದ್ದಾರೆ. ಗ್ರಾಮದ ದೇವಾಲಯ ಇದಕ್ಕೆ ರಾಜಕೀಯ ಬೇಡ ಅವರನ್ನು ಕರೆಯಬೇಕು ಎಂದು ಹೇಳಿದ್ದರು. ಇದೇ ವಿಚಾರಕ್ಕೆ ರಾಜು ಹಾಗೂ ಉದಯ್ ನಡುವೆ ಮಾತಿನ ಚಕಮಕಿ ನಡೆದಿತ್ತು.
ಬೆಳಿಗ್ಗೆಯ ಗಲಾಟೆ ವಿಚಾರ ಇಟ್ಟುಕೊಂಡು ದೇವಾಲಯದ ಬಳಿ ನಿಂತಿದ್ದ ಉದಯ್ ಮೇಲೆ ರಾಜು ಪುತ್ರ ರವಿಕುಮಾರ್ ಹಲ್ಲೆ ನಡೆಸಿದ್ದಾರೆ. ಈ ವೇಳೆ ಉದಯ್ ಹಾಗೂ ಪ್ರಸನ್ನ ಅವರು ರಾಜು ಮನೆಯವರ ಮೇಲೆ ಪ್ರತಿದಾಳಿ ನಡೆಸಿದ್ದಾರೆ.

ಗಲಾಟೆ ನಡೆದ ಗ್ರಾಮದಲ್ಲಿ ಪೊಲೀಸರು


ವಿಷಯ ತಿಳಿದು ಹುಚ್ಚಗಣಿ ಗ್ರಾಮಕ್ಕೆ ಪೊಲೀಸ್ ವರಿಷ್ಠಾಧಿಕಾರಿ ಆರ್.ಚೇತನ್ ಭೇಟಿ ನೀಡಿ ಪರಿಸ್ಥಿತಿಯನ್ನು ತಹಬದಿಗೆ ತಂದಿದ್ದಾರೆ. ಶಾಂತಿಯಿಂದ ಇರಬೇಕು ಗ್ರಾಮಸ್ಥರಿಗೆ ಎಸ್ಪಿ ಸೂಚನೆ ನೀಡಿದ್ದು, ಸದ್ಯ ಗ್ರಾಮದಲ್ಲಿ ಪೊಲೀಸರು ಬೀಡು ಬಿಟ್ಟಿದ್ದಾರೆ. ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಎಸ್ಪಿ ಚೇತನ್ ಅವರು, ಹುಚ್ಚಗಣಿ ದೇವಾಲಯದ ಬಳಿ ಗಲಾಟೆ ನಡೆದಿದೆ ಎಂಬ ಮಾಹಿತಿ ಬಂತು. ತಕ್ಷಣ ಪೊಲೀಸರು ಸ್ಥಳಕ್ಕೆ ಬಂದರು. ಈ ವೇಳೆ ಉದಯ್ ಎಂಬುವವರಿಗೆ ಗಾಯವಾಗಿತ್ತು. ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದೇವೆ. ಗ್ರಾಮಪಂಚಾಯತಿ ಚುನಾವಣೆ ವಿಚಾರವಾಗಿ ಎರಡು ಕುಟುಂಬಗಳ ನಡುವೆ ಗಲಾಟೆ ನಡೆದಿತ್ತು. ಆ ವಿಚಾರ ಕೂಡ ಇಂದಿನ ಗಲಾಟೆಗೆ ಕಾರಣ ಇರಬಹುದು. ಸದ್ಯ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದರು.

About Author

Leave a Reply

Your email address will not be published. Required fields are marked *