ರಾಜ್ಯ ಸರ್ಕಾರದ ಈ ಸುತ್ತೋಲೆಯನ್ನ ತಕ್ಷಣ ವಾಪಸ್ ಪಡೆಯಬೇಕೆಂದು ಸಿದ್ದರಾಮಯ್ಯ ಆಗ್ರಹ

1 min read

ಬೆಂಗಳೂರು: ಸಹಕಾರ ಸಂಘಗಳ ಮೂಲಕ ಸದಸ್ಯರು ಪಡೆದಿರುವ ಸಾಲ/ಕಂತುಗಳ ಪಾವತಿಯನ್ನು ಮುಂದೂಡಿರುವ ಸರ್ಕಾರ ಜೂನ್ ಬಳಿಕ ಪೂರ್ತಿ ಬಾಕಿ ಕಟ್ಟಬೇಕು ಎಂದು ಆದೇಶ ಹೊರಡಿಸಿದೆ. ಈ ಸುತ್ತೋಲೆಯನ್ನು ತಕ್ಷಣ ವಾಪಸ್ ಪಡೆಯಬೇಕು ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಆಗ್ರಹಿಸಿದ್ದಾರೆ.

ಸಾಲ/ಕಂತುಗಳ ಪಾವತಿ ಅವಧಿಯನ್ನು ಮುಂದೂಡಿ ಬಳಿಕ ಪೂರ್ತಿ ಕಟ್ಟಬೇಕು ಎಂಬ ಆದೇಶ ಜನರಿಗೆ ಹಾಕಿರುವ ಟೋಪಿ ಎಂದು ಅವರು ಕಿಡಿ ಕಾರಿದ್ದಾರೆ.

ಈ ಸಂಬಂಧ ಮುಖ್ಯಮಂತ್ರಿಯವರಿಗೆ ಪತ್ರ ಬರೆದಿರುವ ಸಿದ್ದರಾಮಯ್ಯ ಅವರು, ಕೊರೊನಾ ಹೆಸರಿನಲ್ಲಿ ಪ್ಯಾಕೇಜ್ ಘೋಷಣೆ ಮಾಡಿ ಈ ರೀತಿಯ ಆದೇಶ ಹೊರಡಿಸಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಾವು ಒತ್ತಾಯ ಮಾಡಿದ್ದರಿಂದ ಕಳೆದ ವರ್ಷ 3 ಹಂತಗಳಲ್ಲಿ 2284.5 ಕೋಟಿ ರೂ ಗಳ ಪ್ಯಾಕೇಜನ್ನು ಮುಖ್ಯಮಂತ್ರಿ ಯಡಿಯೂರಪ್ಪನವರು ಘೋಷಿಸಿದ್ದರು. ಆ ಪ್ಯಾಕೇಜಿನಲ್ಲಿ 824 ಕೋಟಿ ರೂಗಳು ಕಟ್ಟಡ ಕಾರ್ಮಿಕರ ನಿಧಿಯಾಗಿತ್ತು. ಅವರ ಹಣವನ್ನು ಅವರಿಗೆ ನೀಡುವುದು ಸರ್ಕಾರದ ಪ್ಯಾಕೇಜು ಹೇಗಾಗುತ್ತದೆ? ಎಂದು ಜನರು ಕೇಳಿದ್ದರು. ಇದನ್ನು ಹೊರತು ಪಡಿಸಿ ಸರ್ಕಾರ ನೈಜವಾಗಿ ಖರ್ಚು ಮಾಡಿದ್ದು ಕೇವಲ 800 ಕೋಟಿ ರೂಗಳನ್ನು ಮಾತ್ರ.

ಈ ವರ್ಷ ದಿನಾಂಕ 19-5-21 ರಂದು 2250 ಕೋಟಿ ಎಂದು ಹೇಳಿ 1111.82 ಕೋಟಿ ರೂಗಳ ಪ್ಯಾಕೇಜು ಘೋಷಿಸಲಾಗಿದೆ. ಇದರಲ್ಲಿ ಕಟ್ಟಡ ಕಾರ್ಮಿಕರಿಗೆ ತಲಾ 3000 ರೂಗಳಂತೆ 494 ಕೋಟಿ ರೂಗಳನ್ನು ನೀಡುವುದಾಗಿ ಘೋಷಿಸಿದ್ದಾರೆ. ಅದನ್ನು ಹೊರತು ಪಡಿಸಿದರೆ ಉಳಿಯುವುದು ಕೇವಲ 617.82 ಕೋಟಿ ರೂ ಮಾತ್ರ.

ಇದರ ನಂತರ ರೈತರ ಮತ್ತು ಸ್ವ ಸಹಾಯ ಸಂಘಗಳು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಮತ್ತು ಭೂ ಅಭಿವೃದ್ಧಿ ಬ್ಯಾಂಕುಗಳಿಂದ ಪಡೆದಿರುವ ಸಣ್ಣ, ಮಧ್ಯಮ ಮತ್ತು ದೀರ್ಘಾವಧಿಯ ಸಾಲಗಳ ಮರುಪಾವತಿಯ ಅವಧಿಯನ್ನು 1-05-2020 ರಿಂದ 31-7-2021 ರವರೆಗೆ ಮೂರು ತಿಂಗಳ ಕಾಲ ವಿಸ್ತರಿಸಲಾಗಿದೆ. ಇದಕ್ಕಾಗಿ 134.38 ಕೋಟಿ ರೂಗಳ ಪ್ಯಾಕೇಜನ್ನು ಘೋಷಿಸಿದ್ದಾರೆ.

ಮುಖ್ಯಮಂತ್ರಿಗಳು ಘೋಷಿಸಿರುವ ಪ್ಯಾಕೇಜಿನಲ್ಲಿ 3 ತಿಂಗಳ ಅವಧಿಯಲ್ಲಿ ಕಟ್ಟಬೇಕಾದ ಸಾಲ ಮತ್ತು ಬಡ್ಡಿಯನ್ನು ಮನ್ನಾ ಮಾಡಲಾಗುತ್ತಿದೆಯೆಂಬ ಅರ್ಥದಲ್ಲಿ ಹೇಳಿದ್ದರು. ಆದರೆ ಸಹಕಾರ ಇಲಾಖೆಯ ಸಹಕಾರ ಸಂಘಗಳ ನಿಬಂಧಕರು ದಿನಾಂಕ 21-5-21 ರಂದು ಹೊರಡಿಸಿರುವ ಸುತ್ತೋಲೆಯಲ್ಲಿ 1-4-21 ರಿಂದ 30-6-21 ರವರೆಗೆ ಗಡುವು ಬರುವ ಸಾಲ/ ಕಂತುಗಳನ್ನು ಸಾಲ ಪಡೆದ ಸದಸ್ಯರು ಸಾಲ ಮರುಪಾವತಿಸಲು 30-6-21 ರ ವರೆಗೆ ಕಾಲಾವಕಾಶ ನೀಡಿ ಆದೇಶ ಹೊರಡಿಸಿದೆ. ಅಂದರೆ ಜೂನ್ ನಂತರ ಪೂರಾ ಬಾಕಿಯನ್ನು ಕಟ್ಟಬೇಕೆಂದು ಅರ್ಥ. ಇದರಿಂದ ರೈತರಿಗೆ ಲಾಭವೇನು? ಮುಖ್ಯಮಂತ್ರಿಗಳು ಪ್ಯಾಕೇಜು ನೀಡುತ್ತೇವೆ ಎಂದು ಹೇಳಿ ಜನರಿಗೆ ಯಾಕೆ ಟೋಪಿ ಹಾಕಬೇಕು?

ಆದ್ದರಿಂದ ಈ ಕೂಡಲೇ ಸಹಕಾರ ಇಲಾಖೆ ಹೊರಡಿಸಿರುವ ಸುತ್ತೋಲೆಯನ್ನು ಸರ್ಕಾರ ವಾಪಸ್ಸು ಪಡೆಯಬೇಕು. ಜೊತೆಗೆ ಅಕ್ಕ ಪಕ್ಕದ ರಾಜ್ಯಗಳಲ್ಲಿ ನೀಡಿರುವ ಪ್ಯಾಕೇಜುಗಳ ಕುರಿತು ಮಾಹಿತಿ ತರಿಸಿಕೊಂಡು ಅವುರಂತೆ ರೈತರಿಗೆ ಮತ್ತು ರಾಜ್ಯದ ಎಲ್ಲ ದುಡಿಯುವ ಜನರಿಗೆ ಪ್ಯಾಕೇಜುಗಳನ್ನು ನೀಡಬೇಕು.

ಅಕ್ಕ ಪಕ್ಕದ ಎಲ್ಲ ರಾಜ್ಯಗಳಿಗಿಂತ ನಮ್ಮ ರಾಜ್ಯದ ಆರ್ಥಿಕ ಪರಿಸ್ಥಿತಿ ಉತ್ತಮವಾಗಿದೆ ಎಂದು ಬಜೆಟ್ ಸಂದರ್ಭದಲ್ಲೆ ಮುಖ್ಯ ಮಂತ್ರಿಗಳು ಹೇಳಿರುವುದರಿಂದ ಆ ಎಲ್ಲ ರಾಜ್ಯಗಳಿಗಿಂತ ಉತ್ತಮ ಪ್ಯಾಕೇಜನ್ನು ನೀಡಬೇಕೆಂದು ಸಿದ್ದರಾಮಯ್ಯ ಅವರು ಆಗ್ರಹಿಸಿದ್ದಾರೆ.

About Author

Leave a Reply

Your email address will not be published. Required fields are marked *