ಎಲ್ಲಾ ಕ್ಷೇತ್ರದ ಸಮಸ್ಯೆಗಳನ್ನು ಕೂಡಲೇ ಬಗೆಹರಿಸಲಾಗುವುದು: ಸಚಿವ ಎಸ್‌.ಟಿ.ಸೋಮಶೇಖರ್

1 min read

ಮೈಸೂರು: ಶಾಸಕರು, ಸಂಸದರು ತಮ್ಮ ಕ್ಷೇತ್ರಗಳಲ್ಲಿರುವ ಸಮಸ್ಯೆಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದಾರೆ ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ತಿಳಿಸಿದರು.

ಮುಖ್ಯಮಂತ್ರಿಯವರು, ಶನಿವಾರ ಶಾಸಕರು, ಸಂಸದರು ಹಾಗೂ ವಿಧಾನ ಪರಿಷತ್ ಸದಸ್ಯರ ಜೊತೆ ನಡೆಸಿದ ವಿಡಿಯೋ ಸಂವಾದದಲ್ಲಿ ಭಾಗವಹಿಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಶಾಸಕರಾದ ಎಸ್.ಎ.ರಾಮದಾಸ್ ಅವರು ಪತ್ರ ಬರೆದು ಮುಖ್ಯಮಂತ್ರಿಯವರಿಂದ 50 ಲಕ್ಷ ವಿಶೇಷ ಅನುದಾನ ತರಿಸಿದ್ದಾರೆ‌. ಈ ಅನುದಾನದಲ್ಲಿ ಔಷಧಿ ಖರೀದಿಸುವುದು, ಡಾ.ಯತೀಂದ್ರ ಸಿದ್ದರಾಮಯ್ಯ ಅವರ ಕ್ಷೇತ್ರದಲ್ಲಿ ಆಕ್ಸಿಜನ್ ಕೊರತೆ ಬಗೆಹರಿಸುವುದು ಸೇರಿದಂತೆ, ಇನ್ನುಳಿದ ಎಲ್ಲಾ ಶಾಸಕರು ಮತ್ತು ಸಂಸದರ ಕ್ಷೇತ್ರದ ಸಮಸ್ಯೆಗಳನ್ನು ಬಗೆಹರಿಸುವಂತೆ ಮುಖ್ಯಮಂತ್ರಿಗಳು ಆದೇಶಿಸಿದ್ದಾರೆ. ಎಲ್ಲವನ್ನು ಟಿಪ್ಪಣಿ ಮಾಡಿಕೊಂಡಿದ್ದು, ಕ್ರಮವಹಿಸಲಾಗುವುದು ಎಂದು ಹೇಳಿದರು.

ವಿಡಿಯೋ ಸಂವಾದದಲ್ಲಿ ಕೆಲವೊಂದು ಕ್ಷೇತ್ರದಲ್ಲಿ ಕೋವಿಡ್-19 ಸೋಂಕು ಹೆಚ್ಚುತ್ತಿದ್ದು, ಅಗತ್ಯ ಕ್ರಮವಹಿಸಿ ನಿಯಂತ್ರಿಸಬೇಕು. ಮನೆಮನೆ ಸಮೀಕ್ಷೆಯನ್ನೂ ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು. ಬ್ಲಾಕ್ ಫಂಗಸ್‌ಗೆ ಔಷದಿ, ಆಕ್ಸಿಜನ್ ಒದಗಿಸುವಂತೆ ಹಾಗೂ ಆಸ್ಪತ್ರೆಗಳಲ್ಲಿ ವೈದ್ಯರು ಮತ್ತು ನರ್ಸ್‌ಗಳನ್ನು ಸೇವೆಗೆ ನೇಮಿಸುವಂತೆ ಕೇಳಿದ್ದಾರೆ ಎಂದು ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ಈ ವರೆಗೆ 54 ಮಂದಿಗೆ ಬ್ಲಾಕ್ ಫಂಗಸ್ ಸೋಂಕು ಕಾಣಿಸಿಕೊಂಡಿದೆ. ಈ ಪೈಕಿ 43 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. 6 ಜನ ಗುಣಮುಖರಾಗಿದ್ದಾರೆ. 5 ಜನ ಮೃತಪಟ್ಟಿದ್ದಾರೆ. ಈಗಾಗಲೇ ಉಪ ಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ ಅವರಿಗೆ ಬ್ಲಾಕ್ ಫಂಗಸ್ ರೋಗಕ್ಕೆ ಬೇಕಾದ ಔಷಧಿ ನೀಡಬೇಕೆಂದು ಮನವಿ ಮಾಡಿದ್ದೇನೆ ಎಂದು ತಿಳಿಸಿದರು.

ಜಿಲ್ಲಾಡಳಿತ, ಉಸ್ತುವಾರಿ ಮಂತ್ರಿ, ಶಾಸಕರು ಹಾಗೂ ಸಂಸದರು ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಎಲ್ಲರೂ ಹೇಳಿದ್ದಾರೆ. ಸಭೆಯಲ್ಲಿ ಮುಖ್ಯಮಂತ್ರಿಗಳು ಕೂಡ ಉಸ್ತುವಾರಿ ಸಚಿವರ ಮಾತನ್ನು ಕೇಳಿಸಿಕೊಂಡು, ಅವರು ಹೇಳಿದ್ದನ್ನು ಅನುಷ್ಠಾನಕ್ಕೆ ತರಬೇಕು ಎಂದು ಹೇಳಿದ್ದಾರೆ ಎಂದು ತಿಳಿಸಿದರು.

ಜಿಲ್ಲಾಧಿಕಾರಿಗಳು ಗ್ರಾಮಾಂತರ ಪ್ರದೇಶಗಳಿಗೆ ಭೇಟಿ ನೀಡಿ, ಅಲ್ಲಿನ ವ್ಯವಸ್ಥೆಯನ್ನು ಗಮನಿಸಬೇಕು ಎಂದು ಹೇಳುತ್ತಿದ್ದಾರೆ. ಈ ಮಾತು ನನ್ನನ್ನೂ ಸೇರಿದಂತೆ ಎಲ್ಲರಿಗೂ ಅನ್ವಯವಾಗುತ್ತದೆ ಎಂದರು.

About Author

Leave a Reply

Your email address will not be published. Required fields are marked *