ದಸರಾ: ಗಜಪಡೆಗೆ ಭಾರ ಹೊರುವ ತಾಲೀಮು ಆರಂಭ
1 min readಮೈಸೂರು,ಸೆ.20-ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂಸವಾರಿಯಲ್ಲಿ ಪಾಲ್ಗೊಳ್ಳುವ ಗಜಪಡೆಗೆ ಇಂದಿನಿಂದ ತಾಲೀಮು ಆರಂಭವಾಗಿದೆ.
ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಗಜಪಡೆಗೆ ಮೊದಲಿಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸಿ ಬಳಿಕ ತಾಲೀಮು ನೀಡಲಾಯಿತು. ಆನೆಗಳಿಗೆ ಮರಳಿನ ಮೂಟೆ ಹೊರಿಸಿ ತಾಲೀಮು ನಡೆಸಲಾಗುತ್ತಿದೆ. ಅಭಿಮನ್ಯುವಿಗೆ ಮರಳಿನ ಮೂಟೆ ಹೊರಿಸಿ ತಾಲೀಮು ನಡೆಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಡಿಸಿಎಫ್ ಡಾ.ಕರಿಕಾಳನ್ ಅವರು, ಗಜಪಡೆಗೆ ಇಂದು ಪೂಜೆ ಮಾಡಿ ಭಾರ ಹೊರಿಸಿ ತಾಲೀಮು ನಡೆಸುವುದಕ್ಕೆ ಪ್ರಾರಂಭಿಸಿದ್ದೇವೆ. 6 ಮರಳು ಮೂಟೆಯ 275 ಕೆ.ಜಿಯ ಹಾಗೂ ನಮ್ದಾ ಗಾದಿ 300 ರಿಂದ 400 ಕೆ.ಜಿ. ಒಟ್ಟು 50೦ ರಿಂದ 600 ಕೆಜಿ ಭಾರವನ್ನು ಆನೆಗಳು ತಾಲೀಮು ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. 1.5 ಕಿ.ಮೀ ಆನೆಗಳಿಗೆ ತಾಲೀಮು ನಡೆಸಲಾಗುವುದು ಎಂದರು.
ಇಂದು ಅಭಿಮನ್ಯುವಿಗೆ ಭಾರ ಹೊರಿಸಲಿದ್ದೇವೆ. ನಂತರ ಗೋಪಾಲಸ್ವಾಮಿ ಹಾಗೂ ಧನಂಜಯನಿಗೆ ಭಾರ ಹೊರಿಸಿ ತಾಲೀಮು ನಡೆಸಲಿದ್ದೇವೆ. ತಲಾ 2 ದಿನಗಳು ಈ ಮೂರು ಆನೆಗಳಿಗೆ ಭಾರ ಹೊರಿಸಲಾಗುವುದು. ಅಶ್ವತ್ಥಾಮನಿಗೆ 100-200 ಕೆಜಿ ಭಾರ ಹೊರಿಸುವ ಬಗ್ಗೆ ಚಿಂತನೆ ನಡೆಸಿದ್ದೇವೆ. ಅಶ್ವತ್ಥಾಮ ತಾಲೀಮಿಗೆ ಚೆನ್ನಾಗಿ ಸಹಕರಿಸುತ್ತಿದ್ದಾನೆ ಎಂದು ಹೇಳಿದರು.
ತಾಲೀಮನ್ನು ಅರಮನೆ ಹೊರ ಆವರಣದಲ್ಲಿ ಮಾಡಿ ಎಂಬುದಕ್ಕೆ ಪ್ರತಿಕ್ರಿಯಿಸಿದ ಅವರು, ಇದು ದಸರಾ ಕಾರ್ಯಕಾರಿ ಸಮಿತಿಯಲ್ಲಿ ತೀರ್ಮಾನವಾಗಬೇಕಾದ ವಿಚಾರ. ಈ ಪ್ರಸ್ತಾವನೆಯನ್ನು ಸಮಿತಿ ಮುಂದೆ ಇಡುತ್ತೇನೆ. ಅವರು ಏನು ನಿರ್ಧಾರ ತೆಗೆದುಕೊಳ್ಳುತ್ತಾರೆ ಅದರ ಪ್ರಕಾರ ಮುಂದಿನ ಕ್ರಮ ಕೈಗೊಳ್ಳಲಿದ್ದೇವೆ ಎಂದರು.
ಅರಮನೆಯ 6 ಆನೆಗಳಲ್ಲಿ 4 ಆನೆಗಳನ್ನು ಶಿಫ್ಟ್ ಮಾಡುವ ಸೂಚನೆ ಬಂದಿದೆ. ಅಧಿಕೃತವಾಗಿ ಆದೇಶ ಪತ್ರ ಕೈ ಸೇರಿಲ್ಲ ಬಂದ ನಂತರ ಕ್ರಮ ಕೈಗೊಳ್ಳಲಿದ್ದೇವೆ ಎಂದು ಹೇಳಿದರು.