ಆಷಾಡ ಮಾಸದ ರಜಾ ದಿನಗಳಂದು ಚಾಮುಂಡಿಬೆಟ್ಟಕ್ಕೆ ನಿರ್ಬಂಧ- ಆದರು ಬಂದು ಹೋಗಿ ಕಿರಿಕಿರಿ ಮಾಡ್ತಿದ್ದಾರೆ ಕೆಲವರು!

1 min read

ಮೈಸೂರು : ಕೋವಿಡ್-19 ಹಿನ್ನೆಲೆ ಸರ್ಕಾರದ ನಿರ್ದೇಶನದಂತೆ ಚಾಮುಂಡೇಶ್ವರಿ ಅಮ್ಮನವರ ದೇವಾಸ್ಥಾನ, ಚಾಮುಂಡಿ ಬೆಟ್ಟ ಹಾಗೂ ಉತ್ತನಹಳ್ಳಿ ಜ್ವಾಲಾತ್ರಿಪುರ ಸುಂದರಿ ದೇವಾಲಯಗಳಿಗೆ ಆಷಾಡ ಮಾಸದ ಅಮಾವಾಸ್ಯೆಗಳು, ಶುಕ್ರವಾರಗಳು, ಚಾಮುಂಡಿ ವರ್ಧಂತಿ ಹಾಗೂ ಆಷಾಡ ಮಾಸದಲ್ಲಿ ಬರುವ ಎಲ್ಲಾ ಶನಿವಾರ, ಭಾನುವಾರ ಮತ್ತು ಸಾರ್ವತ್ರಿಕ ರಜಾ ದಿನಗಳಂದು ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಿ ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಅವರು ಆದೇಶಿಸಿದ್ದಾರೆ.

ಆದಾಗ್ಯೂ ಭಕ್ತಾಧಿಗಳು ಈ ದಿನಗಳಂದು ಚಾಮುಂಡಿಬೆಟ್ಟಕ್ಕೆ ಬರುವ ಪ್ರಯತ್ನ ಮಾಡಿ, ಪ್ರವೇಶ ಸಿಗದೆ ವಾಪಾಸ್ಸಾಗುವುದು ಸಾಮಾನ್ಯವಾಗಿದ್ದು, ಅನಾನುಕೂಲವಾಗಿದೆ. ಸಾರ್ವಜನಿಕರು ಈ ನಿರ್ಬಂಧಿತ ದಿನಗಳಂದು ಚಾಮುಂಡಿಬೆಟ್ಟಕ್ಕೆ ಆಗಮಿಸಬಾರದು ಎಂದು ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿಗಳು ಮನವಿ ಮಾಡಿದ್ದಾರೆ.

ನಿಷೇಧಿತ ಸಮಯದಲ್ಲಿ ಶ್ರೀ ಚಾಮುಂಡೇಶ್ವರಿ ಅಮ್ಮನವರ ದೇವಾಲಯದಲ್ಲಿ ನಡೆದು ಬಂದಿರುವ ರೂಢಿ ಸಂಪ್ರದಾಯದಂತೆ, ಜರುಗುವ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ದೇವಾಲಯದ ಅಧಿಕಾರಿಗಳು, ಅರ್ಚಕರು ಸಿಬ್ಬಂದಿಗಳು, ಮಾತ್ರ ದೇವಾಲಯದ ಆವರಣದಲ್ಲಿ ನಡೆಸಲು ಅನುಮತಿಸಿದೆ.

ನಿಷೇಧಿತ ಅವಧಿಯಲ್ಲಿ ಮೆಟ್ಟಿಲು ಮಾರ್ಗದಿಂದ ಚಾಮುಂಡಿಬೆಟ್ಟಕ್ಕೆ ಭಕ್ತರು ಮತ್ತು ಸಾರ್ವಜನಿಕರು ಬರುವುದನ್ನು ನಿಷೇಧಿಸಲಾಗಿದೆ. ಮತ್ತು ಮೇಲಿನ ಎರಡು ದೇವಾಲಯಗಳಲ್ಲಿ ದೇವಾಲಯದ ವತಿಯಿಂದಾಗಲಿ ಅಥವಾ ದಾನಿಗಳ ವತಿಯಿಂದಾಗಲಿ ದಾಸೋಹ, ಊಟದ ವ್ಯವಸ್ಥೆ ಮಾಡುವುದು ಅಥವಾ ಪ್ರಸಾದ ವಿತರಣೆ ಮಾಡುವುದನ್ನು ಕಡ್ಡಾಯವಾಗಿ ನಿಷೇಧಿಸಿದೆ.
ನಿಗದಿತ ಪ್ರವೇಶ ದಿನಗಳಂದು ಪೂರ್ತಿದಿನ ಹಾಗೂ ಇತರೆ ದಿನಗಳಂದು ಸಂಜೆ 6 ಗಂಟೆಯ ನಂತರ ಕೇಂದ್ರ ಮತ್ತು ರಾಜ್ಯ ಸರ್ಕಾರವು ಘೋಷಿಸಲ್ಪಟ್ಟ ಶಿಷ್ಟಾಚಾರ ವ್ಯವಸ್ಥೆ ಹೊಂದಿರುವ ಗಣ್ಯ ವ್ಯಕ್ತಿಗಳು, ಸರ್ಕಾರಿ ಕೆಲಸದ ನಿಮಿತ್ತ ತೆರಳುವ ಅಧಿಕಾರಿಗಳು, ಚಾಮುಂಡಿಬೆಟ್ಟದ ಗ್ರಾಮಸ್ಥರ ವಾಹನಗಳು ಮತ್ತು ತುರ್ತು ಸೇವಾ ವಾಹನಗಳನ್ನು ಹೊರತುಪಡಿಸಿ, ಇತರೆ ಸಾರ್ವಜನಿಕ ಹಾಗೂ ಖಾಸಗಿ ವಾಹನಗಳ ಪ್ರವೇಶವನ್ನು ನಿರ್ಭಂಧಿಸಲಾಗಿದೆ.

ಚಾಮುಂಡಿಬೆಟ್ಟದ ಗ್ರಾಮಸ್ಥರು ವಾಹನ ಬಳಸುವ ಅನಿವಾರ್ಯ ಸಂದರ್ಭದಲ್ಲಿ ವಾಸಸ್ಥಳ ದೃಢೀಕರಣ ಚೀಟಿಯನ್ನು ಬಳಸಬಹುದು.
ದೇವಾಲಯದಲ್ಲಿ ನಡೆದು ಬಂದಿರುವ ಸಂಪ್ರಾದಾಯ ಮತ್ತು ಪದ್ಧತಿಯಂತೆ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಬೇಕಾಗಿರುವುದರಿಂದ ಇದಕ್ಕೆ ಅಗತ್ಯ ಇರುವವರು ಮತ್ತು ಕೇಂದ್ರ ಮತ್ತು ರಾಜ್ಯ ಸರ್ಕಾರವು ಘೋಷಿಸಲ್ಪಟ್ಟ ಶಿಷ್ಟಾಚಾರ ವ್ಯವಸ್ಥೆ ಹೊಂದಿರುವ ಗಣ್ಯ ವ್ಯಕ್ತಿಗಳು ಹಾಗೂ ಚಾಮುಂಡಿಬೆಟ್ಟದ ಗ್ರಾಮಸ್ಥರಿಗೆ ಮಾತ್ರ ದೇವಾಲಯದಲ್ಲಿ ಪೂಜಾ ಕೈಂಕರ್ಯಗಳು ನಡೆಯುವ ಸಂದರ್ಭದಲ್ಲಿ ಆಗಮಿಸಿದ್ದಲ್ಲಿ, ಕೋವಿಡ್-19 ಸಾಂಕ್ರಾಮಿಕ ರೋಗ ಹರಡದಂತೆ ಮುಂಜಾಗೃತ ಕ್ರಮಗಳನ್ನು ಅನುಸರಿಸುವುದನ್ನು ಕಡ್ಡಾಯವಾಗಿ ಪಾಲಿಸುವ ಷರತ್ತಿನ ಮೇಲೆ ಪ್ರವೇಶಕ್ಕೆ ಅನುಮತಿಸಿದೆ. ದೇವಾಲಯದ ರೂಢಿ ಸಂಪ್ರಾದಾಯದಂತೆ ಮಹಾಮಂಗಳಾರತಿಯು ಮುಕ್ತಾಯಗೊಂಡ ತಕ್ಷಣ ದೇವಾಲಯವನ್ನು ಮುಚ್ಚಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

About Author

Leave a Reply

Your email address will not be published. Required fields are marked *