ನರೇಗಾ ಕಾಮಗಾರಿ ಚುರುಕುಗೊಳಿಸಿ, ಗರಿಷ್ಠ ಗುರಿ ಸಾಧಿಸಿ: ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಸ್.ರಮೇಶ್
1 min readಮೈಸೂರು: ತಾಲ್ಲೂಕಿನ ರೈತರು, ಕೂಲಿ ಕಾರ್ಮಿಕರು ಸೇರಿದಂತೆ ದುಡಿಯುವ ವರ್ಗದ ಜನರಿಗೆ ಉದ್ಯೋಗ ನೀಡಿ ಆರ್ಥಿಕವಾಗಿ ನೆರವಾಗುವ ನಿಟ್ಟಿನಲ್ಲಿ ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಅನುಷ್ಠಾನಕ್ಕೆ ತರಲಾಗಿರುವ ಕಾಮಗಾರಿಗಳನ್ನು ಚುರುಕುಗೊಳಿಸಿ ಎಂದು ಮೈಸೂರು ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಸ್.ರಮೇಶ್ ಅವರು ತಿಳಿಸಿದರು.
ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯತಿ ಪಿಡಿಒ ಹಾಗೂ ಡಿಇಒಗಳ ಜೊತೆ ಮಂಗಳವಾರ ತಾಲ್ಲೂಕು ಪಂಚಾಯತಿಯಲ್ಲಿ ನಡೆದ ಮಹಾತ್ಮ ಗಾಂಧಿ ನರೇಗಾ ಯೋಜನೆಯ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದ ಅವರು, ನಿರ್ದಿಷ್ಟ ಗುರಿಗಿಂತ ಅಧಿಕವಾಗಿ ಮಾನವ ದಿನಗಳನ್ನು ಸೃಜಿಸಲು ಗಮನಹರಿಸಿ ಎಂದು ಸೂಚನೆ ನೀಡಿದರು.
ಜನರು ಉದ್ಯೋಗ ಚೀಟಿಗಾಗಿ ಅರ್ಜಿ ಸಲ್ಲಿಸಿದ ಕೂಡಲೇ ಉದ್ಯೋಗ ಚೀಟಿ ನೀಡಲು ಕ್ರಮವಹಿಸಿ ಕೂಲಿ ಕಾರ್ಮಿಕರಿಗೆ ಉದ್ಯೋಗ ಖಾತರಿ ಯೋಜನೆ ಮೂಲಕ ಗಣನೀಯ ಪ್ರಮಾಣದಲ್ಲಿ ಉದ್ಯೋಗ ಒದಗಿಸಬೇಕು. ಯೋಜನೆಗೆ ಸಂಬಂಧಿಸಿದ ಕಾಮಗಾರಿಗಳನ್ನು ನಿಗದಿತ ಸಮಯಕ್ಕೆ ಪೂರ್ಣಗೊಳಿಸಬೇಕು ಎಂದು ತಿಳಿಸಿದರು.
ಜಲಮೂಲ ಸಂರಕ್ಷಣೆಗಾಗಿ ಸೂಕ್ತವಾದ ಸ್ಥಳದಲ್ಲಿ ಕಾಮಗಾರಿ ಕೈಗೊಳ್ಳಲು ಆದ್ಯತೆ ನೀಡಬೇಕು. ಮಳೆನೀರು ಶೇಖರಿಸುವ ನಿಟ್ಟಿನಲ್ಲಿ ಸಾಂಪ್ರದಾಯಿಕ ನೀರಿನ ವ್ಯವಸ್ಥೆಗಳಾದ ಕೆರೆ, ಕೃಷಿಹೊಂಡ, ಬದು, ಕಲ್ಯಾಣಿ ಕುಂಟೆ, ಗೋಕಟ್ಟೆಗಳ ನಿರ್ಮಾಣ ಹಾಗೂ ಸಂರಕ್ಷಣೆಗೆ ವಿಶೇಷ ಗಮನಹರಿಸಬೇಕು ಎಂದು ಹೇಳಿದರು.
ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಿಸಲು ನಿವೇಶನ ಮಂಜೂರು ಮಾಡುವಂತೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಪತ್ರ ವ್ಯವಹಾರ ಮಾಡಲು ಕ್ರಮವಹಿಸಿ ಎಂದು ತಿಳಿಸಿದರು.
ಸಭೆಯಲ್ಲಿ ಸಹಾಯಕ ನಿರ್ದೇಶಕ ಚಂದ್ರೇಶ್, ತಾಂತ್ರಿಕ ಸಹಾಯಕ ಉಲ್ಲಾಸ್, ತಾಂತ್ರಿಕ ಸಹಾಯಕ ಅಭಿಯಂತರರಾದ ರವಿ, ನಟರಾಜ್, ಮಂಜು, ಸಂಧ್ಯಾ, ನಿತ್ಯಾ, ಐಇಸಿ ಸಂಯೋಜಕರು ಹಾಗೂ ಎಲ್ಲಾ ಪಿಡಿಒ, ಡಿಇಒಗಳು ಹಾಜರಿದ್ದರು.