ಲಾರಿ ಮಾಲೀಕರ ಸಂಘದಲ್ಲಿ ಕೋಟಿ ಕೋಟಿ ಹಣ ದುರುಪಯೋಗ ಆರೋಪ!
1 min readಬೆಂಗಳೂರು: ಫೆಡರೇಶನ್ ಆಫ್ ಕರ್ನಾಟಕ ಲಾರಿ ಮಾಲೀಕರ ಸಂಘದ ರಾಜ್ಯಾಧ್ಯಕ್ಷ ಬಿ. ಚೆನ್ನಾರೆಡ್ಡಿ ಮತ್ತು ಅವರ ಪುತ್ರ ಸೇರಿ ಸಂಘದ ಭಾರತ್ ಪೆಟ್ರೋಲ್ ಬಂಕ್‌ನಲ್ಲಿ ಕೋಟ್ಯಾಂತರ ರೂಪಾಯಿ ಅವ್ಯವಹಾರ ನಡೆಸಿದ್ದಾರೆ ಎಂದು ಆರೋಪಿಸಿ ಯಶವಂತಪುರ ಲಾರಿ ಮಾಲೀಕರ ಸಂಘದ ನೂರಾರು ಸದಸ್ಯರು ಪ್ರತಿಭಟನೆ ನಡೆಸಿದರು.
ಕೊರಾನಾ ಸಂಕಷ್ಟ ಪರಿಸ್ಥಿತಿಯಲ್ಲಿ ಲಾರಿ ಮಾಲೀಕರು ಸಂಕಷ್ಟದಲ್ಲಿದ್ದಾರೆ. ಸರಿಯಾದ ಬಾಡಿಗೆ, ದುಡಿಮೆ ಇಲ್ಲದೇ ಆತ್ಮಹತ್ಯೆಯ ದಾರಿ ಹಿಡಿದಿದ್ದಾರೆ.
ಆದರೆ ಲಾರಿ ಮಾಲೀಕರ ಯೋಗಕ್ಷೇಮಕ್ಕಾಗಿ ಮತ್ತು ಅವರ ಅಭಿವೃದ್ಧಿಗಾಗಿ ಸಂಘದ ಪೆಟ್ರೋಲ್ ಬಂಕ್ ಅನ್ನು ಬೆಂಗಳೂರಿನ ಗೋರಗುಂಟೆ ಪಾಳ್ಯದ ಮುಖ್ಯ ರಸ್ತೆಯಲ್ಲಿ ಸ್ಥಾಪಿಸಲಾಗಿದೆ.
ವಾರ್ಷಿಕವಾಗಿ 122 ಕೋಟಿ ರೂಪಾಯಿ ವಹಿವಾಟು ನಡೆಯುತ್ತದೆ. ಆದರೆ ವಾರ್ಷಿಕ ವರದಿಯಲ್ಲಿ ಇದರ ಲಾಭಾಂಶ 70 ಲಕ್ಷದಿಂದ ಒಂದು ಕೋಟಿ ರೂಪಾಯಿ ಇರುತ್ತದೆ. ಒಟ್ಟು ನಿವ್ವಳ ಲಾಭ 4 ಕೋಟಿ ರೂಪಾಯಿನಷ್ಟು ಇರುತ್ತದೆ ಎಂದು ಸುಳ್ಳು ಲೆಕ್ಕ ವರದಿ ನೀಡಿದ್ದಾರೆ. ಪೆಟ್ರೋಲ್ ಬಂಕ್‌ನಲ್ಲಿ ಯಾವುದೇ ರಶೀದಿ ನೀಡದೆ ವಹಿವಾಟು ನಡೆಸುತ್ತಿದ್ದಾರೆ. ಪ್ರತಿ ವರ್ಷ ಇದೇ ರೀತಿಯ ಸುಳ್ಳು ಲೆಕ್ಕ ವರದಿ ನೀಡಿ ಕೋಟ್ಯಾಂತರ ರೂಪಾಯಿ ಅವ್ಯವಹಾರ ನಡೆಸಿದ್ದಾರೆ ಎಂದು ಫೆಡರೇಶನ್ ಆಪ್ ಕರ್ನಾಟಕ ಲಾರಿ ಮಾಲೀಕರ ಸಂಘದ ಮಾಜಿ ಪ್ರಧಾನ ಕಾರ್ಯದರ್ಶಿ ಕೆ.ಎಂ. ಗೋಪಾಲಸ್ವಾಮಿ ಆರೋಪಿಸಿದ್ದಾರೆ.
ಬೆಂಗಳೂರು ಮೋಟಾರು ಓರ‍್ಸ್ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿಯಲ್ಲಿ ಬಿ. ಚೆನ್ನಾರೆಡ್ಡಿ ಅಧ್ಯಕ್ಷರಾಗಿದ್ದಾಗ 60 ರಿಂದ 70 ಕೋಟಿ ರೂಪಾಯಿ ಅವ್ಯವಹಾರ ನಡೆಸಿದ್ದು, ಇವರ ವಿರುದ್ಧ ಸಹಕಾರ ನಿಬಂಧಕರ ನಿಯಮಗಳ 64 ಅನುಸಾರ ತನಿಖೆಗೆ ಅದೇಶಿಸಲಾಗಿದೆ. ಇವರು ಕೆಲಸ ನಿರ್ವಹಿಸಿದ ಸಂಘ ಸಂಸ್ಥೆಗಳಲ್ಲಿ ಕಪ್ಪು ಹಣದ ಅವ್ಯವಹಾರವನ್ನು ನಡೆಸಿದ್ದಾರೆ ಎಂದು ವಿವರಿಸಿದರು.
ಬಿ. ಚೆನ್ನಾರೆಡ್ಡಿ ವಿರುದ್ಧ ಸಂಘ ಹಣ ದುರುಪಯೋಗ ಕುರಿತು ಸಹಕಾರ ಇಲಾಖೆಯ ನಿಬಂಧಕರಿಗೆ ದೂರು ನೀಡಿ ಸೂಕ್ತ ತನಿಖೆ ನಡೆಸುವಂತೆ ಒತ್ತಾಯಿಸಲಾಗುವುದು. ಕೇಂದ್ರ ಜಾರಿ ನಿರ್ದೇಶನಾಲಯಕ್ಕೆ ಕೂಡ ದೂರು ನೀಡಲಾಗುವುದು ಎಂದು ಯಶವಂತಪುರ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಮೋಹನ್ ಕೆ ತಿಳಿಸಿದರು.
ಈ ಪ್ರತಿಭಟನೆಯಲ್ಲಿ ಸಂಘದ ಉಪಾಧ್ಯಕ್ಷ ಎಸ್. ಮುರುಗೇಶ್, ಕಾರ್ಯದರ್ಶಿ ಕೇಶವ್ ಬಿ., ಜಂಟಿ ಕಾರ್ಯದರ್ಶಿ ಮಂಜುನಾಥ್ ಸಿ., ಖಜಾಂಚಿ ಧನಪಾಲ ರೆಡ್ಡಿ ವೈ. ಹಾಗೂ ಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು.