ಕೋವಿಡ್ ವಾರಿಯರ್ಸ್‌ ಗೆ ಗೌರವ ಸಮರ್ಪಣೆ

1 min read

ಮೈಸೂರು,ಸೆ.18-ಕೋವಿಡ್-19 ಸಾಂಕ್ರಾಮಿಕ ಸಂದರ್ಭದಲ್ಲಿ ರೋಗಿಗಳ ಸೇವೆ ಮತ್ತು ಆರೈಕೆ ಮಾಡಿದ ಮಂಚೂಣಿ ವೈದ್ಯರುಗಳಿಗೆ ಜೆಎಸ್ಎಸ್ ಆಸ್ಪತ್ರೆಯಿಂದ ಗೌರವ ಸಮರ್ಪಿಸಲಾಯಿತು.
ಜೆಎಸ್‍ಎಸ್ ಆಸ್ಪತ್ರೆಯ ಶ್ರೀ ರಾಜೇಂದ್ರ ಶತಮಾನೋತ್ಸವ ಸಂಭಾಗಣದಲ್ಲಿ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರ‌ ದಿವ್ಯಸಾನ್ನಿಧ್ಯದಲ್ಲಿ ಜೆಎಸ್‍ಎಸ್ ಆಸ್ಪತ್ರೆಯಲ್ಲಿ ಕಳೆದ ಒಂದುವರೆ ವರ್ಷದಿಂದ ಕೋವಿಡ್-19 ಸಾಂಕ್ರಾಮಿಕ ಸಂದರ್ಭಗಳಲ್ಲಿ ರೋಗಿಗಳ ಸೇವೆ ಮತ್ತು ಆರೈಕೆ ಮಾಡಿದ ಜೆಎಸ್‍ಎಸ್ ಆಸ್ಪತ್ರೆಯ ಸುಮಾರು 356 ವೈದ್ಯರುಗಳು ಮತ್ತು ವಿಭಾಗದ ಮುಖ್ಯಸ್ಥರುಗಳು ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪ್ರಶಂಸಾ ಪ್ರಮಾಣಪತ್ರ ಮತ್ತು ನಗದು ಬಹುಮಾನ ನೀಡಲಾಯಿತು.
ಅಲ್ಲದೆ, ವೀರಶೈವ ಸಜ್ಜನ ಸಂಘದ ವತಿಯಿಂದ 50 ಜನ ವಿಭಾಗದ ಮುಖ್ಯ ವೈದ್ಯರುಗಳು ಹಾಗೂ ಆಡಳಿತ ವರ್ಗದವರಿಗೆ ಗೌರವ ಸಮರ್ಪಣೆಯನ್ನು ಹಮ್ಮಿಕೊಳ್ಳಲಾಗಿತ್ತು.
ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರು, ಕೋವಿಡ್-19 ಸಾಂಕ್ರಾಮಿಕ ಸಂದರ್ಭದಲ್ಲಿ ರೋಗಿಗಳ ಸೇವೆ ಮತ್ತು ಆರೈಕೆ ಮಾಡಿದ ಮಂಚೂಣಿ ವೈದ್ಯರುಗಳನ್ನು ಗೌರವಿಸಿ ಆಶೀರ್ವದಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ವೈದ್ಯರುಗಳಿಗೆ ಸನ್ಮಾನಿಸಿದ್ದು ತುಂಬಾ ಸಂತೋಷದ ಸಂಗತಿ ಎಂದು ತಿಳಿಸಿದರು.
ನಾವು ನೀಡುವ ಪ್ರಶಂಸಾ ಪತ್ರ ಮತ್ತು ಪ್ರಶಸ್ತಿ ಚಿಕ್ಕದಿರಬಹುದು ಆದರೆ ನೀವು ಕೋವಿಡ್ ಸಾಂಕ್ರಾಮಿಕ ಸಂದರ್ಭದಲ್ಲಿ ನೀಡಿದ ಸೇವೆ ಹಾಗೂ ಚಿಕಿತ್ಸೆಯಿಂದ ಅವರು ಗುಣಮುಖರಾಗಿ ಮನೆಗೆ ಹೋಗುವಾಗ ನಿಮ್ಮನ್ನು ದೇವರು ಎಂದು ಕರೆಯುತ್ತಾರಲ್ಲಾ ಅದೇ ನಿಜವಾದ ಪ್ರಶಸ್ತಿ ಎಂದು ತಿಳಿಸಿದರು.
ಅಮೇರಿಕಾದಂತ ಮುಂದುವರೆದ ರಾಷ್ಟ್ರಗಳು ಇಂದಿಗೂ ಕೂಡ ಭಯದ ವಾತಾವರಣದಲ್ಲಿ ಇದೆ. ಆದರೆ ಭಾರತದಲ್ಲಿ ಕೋವಿಡ್ ಲಸಿಕೆ ಮತ್ತು ಸಾರ್ವಜನಿಕರ ಸ್ಪಂದನೆ, ನೀವು ನೀಡಿದ ಚಿಕಿತ್ಸೆಯಿಂದ ಕಾಯಿಲೆ ಇಳಿಮುಖವಾಗುತ್ತಿದೆ ಎಂದು ತಿಳಿಸಿದರು.
ಈ ಕಾಯಿಲೆ ಬೇರೆ ಕಾಯಿಲೆಯಂತೆ ಇರುತ್ತದೆ ಹೋಗುವುದಿಲ್ಲ ಅದಕ್ಕೆ ನಾವೇ ಹೊಂದಾಣಿಕೆ ಮಾಡಿಕೊಂಡು ಹೋಗಬೇಕು ಎಂದು ತಜ್ಞರು ತಿಳಿಸಿದ್ದಾರೆ. ಹಾಗಾಗಿ ಯಾರು ಧೈರ್ಯಗುಂದದೆ ಮುನ್ನೆಡೆಯಬೇಕು ಎಂದು ತಿಳಿಸಿದರು.
ಕೋವಿಡ್ ಸಂದರ್ಭದಲ್ಲಿ ಔಷಧಿಗಳ ವಿತರಣೆಯ ಬಗ್ಗೆ ಸರ್ಕಾರದ ಕಠಿಣ ನಿಯಮಗಳನ್ನು ಉದಾಹರಣೆ ಸಮೇತ ವಿವರಿಸಿದರು, ಇಂತಹ ಸಂದರ್ಭಗಳಲ್ಲಿ ನಾವು ಆಸ್ಪತ್ರೆಗೆ ಬೇಕಾಗುವ ಸಕಲ ವ್ಯವಸ್ಥೆಗಳನ್ನು ಮಾಡಿ ರೋಗಿಗಳಿಗೆ ಚಿಕಿತ್ಸೆ ನೀಡಿ ಅವರು ಗುಣಮುಖರಾಗುವಂತೆ ಮಾಡಿದ್ದೇವೆ ಎಂದು ತಿಳಿಸಿದರು.
ಮೆಡಿಸನ್ ವಿಭಾಗದ ಮುಖ್ಯಸ್ಥರಾದ ಡಾ. ಸುಭಾಷ್‍ಚಂದ್ರರವರು ಕೋವಿಡ್-19 ಸಾಂಕ್ರಾಮಿಕ ಸಂದರ್ಭಗಳಲ್ಲಿ ಆಸ್ಪತ್ರೆಯಲ್ಲಿ ಕೋವಿಡ್ ರೋಗಿಗಳಿಗೆ ಫ್ಲೂ ಕ್ಲಿನಿಕ್, ಪ್ರತ್ಯೇಕ ವಾರ್ಡ್‍ಗಳನ್ನು ತ್ವರಿತವಾಗಿ ಸಿದ್ಧಪಡಿಸಿ ಚಿಕಿತ್ಸೆ ನೀಡಿದ ಅನುಭವಗಳು, ಎದುರಿಸಿದ ಸವಾಲುಗಳು, ಮೈಸೂರಿನಲ್ಲೇ ಮೊದಲ ಖಾಸಗಿ ಕೋವಿಡ್ ಆರ್‍ಟಿಪಿಸಿರ್ ಪರೀಕ್ಷೆ ಲ್ಯಾಬ್ ಸ್ಥಾಪನೆ, ಕೋವಿಡ್ ಲಸಿಕೆಯನ್ನು ಸಾರ್ವಜನಿಕರಿಗೆ ನೀಡಲು ಕಲ್ಪಿಸಿದ ವ್ಯವಸ್ಥೆ, ಕೋವಿಡ್ 1ನೇ ಮತ್ತು 2ನೇ ಅಲೆಯನ್ನು ಎದುರಿಸಲು ಆಸ್ಪತ್ರೆಯು ತೆಗೆದುಕೊಂಡ ಕ್ರಮಗಳು ಮತ್ತು 3ನೇ ಅಲೆಯನ್ನು ಎದುರಿಸಲು ಆಸ್ಪತ್ರೆ ಸಜ್ಜಾಗಿರುವ ಬಗ್ಗೆ ಹಾಗೂ ಇದುವರೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾದ ರೋಗಿಗಳ ಬಗ್ಗೆ ಅಂಕಿ-ಅಂಶಗಳೊಂದಿಗೆ ಯಶೋಗಾಥೆಯನ್ನು ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೆಎಸ್‍ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿಗಳಾದ ಡಾ.ಸಿ.ಜಿ. ಬೆಟಸೂರಮಠ ಅವರು ವಹಿಸಿದ್ದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಜೆಎಸ್‍ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ ಕುಲಪತಿ ಡಾ. ಸುರೀಂದರ್ ಸಿಂಗ್ ಆಗಮಿಸಿದ್ದರು. ವಿಶೇಷ ಆಹ್ವಾನಿತರಾಗಿ ವೀರಶೈವ ಸಜ್ಜನ ಸಂಘದ ಮಾಜಿ ಅಧ್ಯಕ್ಷ, ಮಾಜಿ ಜಿಲ್ಲಾ ಗರ್ವನರ್ ಲಯನ್ ಎಂ.ಎನ್ ಜೈಪ್ರಕಾಶ್ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಸುತ್ತೂರು ಮಠದ ಕಿರಿಯ ಶ್ರೀಗಳಾದ ಶ್ರೀ ಜಯರಾಜೇಂದ್ರ ಸ್ವಾಮಿಗಳು, ಜೆಎಸ್‍ಎಸ್ ಮಹಾವಿದ್ಯಾಪೀಠದ ಅಧಿಕಾರಿಗಳು, ಜೆಎಸ್‍ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕ್ಯಾಡೆಮಿ, ಅಧಿಕಾರಿಗಳು, ಜೆಎಸ್‍ಎಸ್ ಮೆಡಿಕಲ್ ಕಾಲೇಜು ಅಧಿಕಾರಿಗಳು, ಶ್ರೀಮತಿ ಮಾಧುರಿ ತಾತಾಚಾರಿ, ಭ್ರಮರಾ ಟ್ರಸ್ಟ್, ಮೈಸೂರು, ಡಾ. (ಕರ್ನಲ್) ಎಂ. ದಯಾನಂದ, ನಿರ್ದೇಶಕರು, ಜೆಎಸ್‍ಎಸ್ ಆಸ್ಪತ್ರೆ, ಡಾ.ಎಂ. ಗುರುಸ್ವಾಮಿ ವೈದ್ಯಕೀಯ ಅಧೀಕ್ಷಕರು ಹಾಗೂ ಆಸ್ಪತ್ರೆಯ ವೈದ್ಯರುಗಳು, ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹಾಜರಿದ್ದರು.

About Author

Leave a Reply

Your email address will not be published. Required fields are marked *