ಅಕ್ಟೋಬರ್ 14ಕ್ಕೆ srikrishna@gmail.com ಸಿನಿಮಾ ತೆರೆಗೆ
1 min readಬೆಂಗಳೂರು,ಸೆ.17- ಡಾರ್ಲಿಂಗ್ ಕೃಷ್ಣ ಅಭಿನಯದ srikrishna@gmail.com ಸಿನಿಮಾ ಅಕ್ಟೋಬರ್ 14ರಂದು ತೆರೆಗೆ ಬರಲಿದೆ. ಸಿನಿಮಾ ಕನ್ನಡ ಹಾಗೂ ಮಲಯಾಳಂನಲ್ಲಿ ಬಿಡುಗಡೆಗೊಳ್ಳುತ್ತಿದೆ.
ಡಾರ್ಲಿಂಗ್ ಕೃಷ್ಣ ಹಾಗೂ ನಿರ್ದೇಶಕ ನಾಗಶೇರ್ ಸಾಮಾಜಿಕ ಜಾಲತಾಣದಲ್ಲಿ ಚಿತ್ರದ ಬಿಡುಗಡೆ ದಿನಾಂಕದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಸಿನಿಮಾದ `ಕುಡಿ ನೋಟದ’ ಹಾಡು ಈಗಾಗಲೇ ಸಿನಿಪ್ರಿಯರ ಮೆಚ್ಚುಗೆಗೆ ಪಾತ್ರವಾಗಿದೆ. ಈ ಹಾಡನ್ನು ಗಾಯಕ ಸಂಚಿತ್ ಹೆಗಡೆ ಹಾಡಿದ್ದಾರೆ.
ವಿಭಿನ್ನ ಕಥಾಹಂದರ ಹೊಂದಿರುವ ಸಿನಿಮಾದಲ್ಲಿ ನಟಿ ಭಾವನಾ ಮೆನನ್ ಅವರು ಕೃಷ್ಣ ಅವರಿಗೆ ಜೋಡಿಯಾಗಿದ್ದಾರೆ. ಸಿನಿಮಾದಲ್ಲಿ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಕೂಡ ಈ ಚಿತ್ರದಲ್ಲಿ ಅತಿಥಿ ಪಾತ್ರವೊಂದರಲ್ಲಿ ಅಭಿನಯಿಸಿರುವುದು ವಿಶೇಷ.
ಕಳೆದ ವರ್ಷ ಜೂನ್ನಲ್ಲಿ ಈ ಸಿನಿಮಾ ಮುಹೂರ್ತ ಸಮಾರಂಭ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರ ಸ್ಟುಡಿಯೋದಲ್ಲಿ ಸರಳವಾಗಿ ನೆರವೇರಿತ್ತು. ನಟಸಾರ್ವಭೌಮ ಡಾ.ರಾಜಕುಮಾರ್ ಅವರ ಭಾವಚಿತ್ರದ ಮೇಲೆ ಚಿತ್ರವನ್ನು ಸೆರೆಹಿಡಿಯುವ ಮೂಲಕ ಚಿತ್ರೀಕರಣಕ್ಕೆ ಚಾಲನೆ ನೀಡಲಾಗಿತ್ತು.
‘ಸಂಜು ವೆಡ್ಸ್ ಗೀತಾ’ ಸೇರಿದಂತೆ ಹಲವು ಯಶಸ್ವಿ ಚಿತ್ರಗಳನ್ನು ನಿರ್ದೇಶಿಸಿರುವ ನಾಗಶೇಖರ್ ಅವರು ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಕವಿರಾಜ್ ಹಾಡುಗಳನ್ನು ಬರೆದಿದ್ದು, ಮ್ಯೂಸಿಕ್ ಮಾಂತ್ರಿಕ ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡಿದ್ದಾರೆ. ಸತ್ಯ ಹೆಗಡೆ ಛಾಯಾಗ್ರಹಣ, ದೀಪು ಎಸ್ ಕುಮಾರ್ ಸಂಕಲನ ಹಾಗೂ ಅರುಣ್ ಸಾಗರ್ ಕಲಾ ನಿರ್ದೇಶನ ಈ ಚಿತ್ರಕ್ಕಿದೆ. ಸಂದೇಶ್ ಪ್ರೊಡಕ್ಷನ್ಸ್ ಬ್ಯಾನರ್ ನಡಿ ಸಂದೇಶ್ ನಾಗರಾಜ್ ಈ ಸಿನಿಮಾ ನಿರ್ಮಿಸಿದ್ದಾರೆ.
ಇನ್ನು ಲವ್ ಮಾಕ್ಟೇಲ್ ಸಿನಿಮಾ ಹಿಟ್ ಆದ ನಂತರ ಡಾರ್ಲಿಂಗ್ ಕೃಷ್ಣ ಅವರಿಗೆ ಸ್ಯಾಂಡಲ್ವುಡ್ನಲ್ಲಿ ಬೇಡಿಕೆ ಹೆಚ್ಚಿದೆ. ಸದ್ಯ ಡಾರ್ಲಿಂಗ್ ಕೃಷ್ಣ ಅವರ ಕೈಯಲ್ಲಿ ಸಾಲು ಸಾಲು ಸಿನಿಮಾಗಳಿವೆ. ಲವ್ ಮಾಕ್ಟೇಲ್ 2, ಲವ್ ಮಿ ಆರ್ ಹೇಟ್ ಮಿ, ಶುಗರ್ ಫ್ಯಾಕ್ಟರಿ, ಮಿ. ಬ್ಯಾಚುಲರ್ ಚಿತ್ರಗಳಲ್ಲಿ ಕೃಷ್ಣ ಅಭಿನಯಿಸುತ್ತಿದ್ದಾರೆ. ಇತ್ತೀಚೆಗಷ್ಟೆ ಲವ್ ಮಿ ಆರ್ ಹೇಟ್ ಮಿ ಸಿನಿಮಾದ ಮುಹೂರ್ತ ನೆರವೇರಿದ್ದು, ಕೃಷ್ಣ ಅವರ ಮಡದಿ ಮಿಲನಾ ನಾಗರಾಜ್ ಅವರೇ ಕ್ಲ್ಯಾಪ್ ಮಾಡಿದ್ದಾರೆ. ಈ ಸಿನಿಮಾದಲ್ಲಿ ನಾಯಕಿಯಾಗಿ ರಚಿತಾ ರಾಮ್ ಅವರು ನಟಿಸಲಿದ್ದಾರೆ.