ಲಸಿಕೀಕರಣ ಮುಗಿಯುತ್ತಿದ್ದಂತೆ ಕಾಲೇಜು ಆರಂಭ ಕುರಿತು ನಿರ್ಧಾರ: ಡಿಸಿಎಂ
1 min readಬೆಂಗಳೂರು: ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳ ವ್ಯಾಪ್ತಿಯಲ್ಲಿ ವಿದ್ಯಾರ್ಥಿಗಳು ಮತ್ತು ಶೈಕ್ಷಣಿಕ ಸಿಬ್ಬಂದಿಯ ಲಸಿಕೀಕರಣ ಕಾರ್ಯಕ್ರಮವನ್ನು ಚುರುಕುಗೊಳಿಸಬೇಕು. ಸಾಧ್ಯವಾದಷ್ಟು ಇದೇ 7ರೊಳಗೆ ಮುಗಿಸಲು ಆದ್ಯತೆ ನೀಡಬೇಕು ಎಂದು ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಎಲ್ಲ ವಿವಿಗಳ ಕುಲಪತಿಗಳಿಗೆ ನಿರ್ದೇಶನ ನೀಡಿದರು.
ಕೋವಿಡ್ ಲಸಿಕೆಯನ್ನು ಹೆಚ್ಚು ತ್ವರಿತವಾಗಿ ಕೊಡಿಸುವ ಸಂಬಂಧ ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳ ಕುಲಪತಿಗಳ ಜತೆ ಗುರುವಾರ ವಿಡಿಯೊ ಸಂವಾದ ನಡೆಸಿದ ನಂತರ ಅವರು ಸುದ್ದಿಗಾರರ ಜತೆ ಮಾತನಾಡಿದರು.
ರಾಜ್ಯದಲ್ಲಿ ಇನ್ನೆರಡು ತಿಂಗಳ ಒಳಗಾಗಿ ಒಟ್ಟು ಜನಸಂಖ್ಯೆಯಲ್ಲಿ ಶೇ.50ರಷ್ಟು ಜನರಿಗೆ ಲಸಿಕೆ ಲಭ್ಯವಾಗಲಿದೆ. ಈ ನಿಟ್ಟಿನಲ್ಲಿ ಭೌತಿಕ ತರಗತಿಗಳು ಆರಂಭಕ್ಕೆ ಮುನ್ನವೇ ಎಲ್ಲ ವಿದ್ಯಾರ್ಥಿಗಳಿಗೆ ಲಸಿಕೆ ನೀಡಬೇಕು ಹಾಗೂ ನಿತ್ಯವೂ ಪೂರೈಕೆಯಾಗುವ ಲಸಿಕೆಯನ್ನು ಸಂಬಂಧಿಸಿದ ಅಧಿಕಾರಿಗಳ ಜತೆ ಸಮನ್ವಯ ಸಾಧಿಸಿಕೊಂಡು ಪಡೆದುಕೊಳ್ಳಬೇಕು ಎಂದರು.
ಯಾವುದೇ ಕಾರಣಕ್ಕೂ ಶೈಕ್ಷಣಿಕ ಚಟುವಟಿಕೆ ನಿಲ್ಲಬಾರದು, ವಿದ್ಯಾರ್ಥಿಗಳ ಭವಿಷ್ಯಕ್ಕೆ ತೊಂದರೆ ಆಗಬಾರದು. ಈ ಹಿನ್ನೆಲೆಯಲ್ಲಿ ಲಸಿಕೆಯೇ ಪರಿಹಾರ. ಇದನ್ನು ಎಲ್ಲ ಕುಲಪತಿಗಳು ಗಂಭೀರವಾಗಿ ಪರಿಗಣಿಸಬೇಕು ಎಂದು ಡಿಸಿಎಂ ಹೇಳಿದರು.
ಎಲ್ಲ ವಿವಿಗಳಲ್ಲಿ ಲಸಿಕೀಕರಣ ಮುಗಿದ ನಂತರ ನೇರ ತರಗತಿಗಳನ್ನು ಆರಂಭ ಮಾಡುವ ಕುರಿತು ನಿರ್ದರಿಸಲಾಗುವುದು., ಈಗ ನಡೆಯುತ್ತಿರುವ ಆನ್‌ಲೈನ್ ತರಗತಿಗಳು ಅಬಾಧಿತ ಎಂದರು.
ಪದವಿ ವಿದ್ಯಾರ್ಥಿಗಳಿಗೆ ಹೆಲ್ಪ್‌ಲೈನ್
ವಿದ್ಯಾರ್ಥಿಗಳಿಗೆ ಈಗಾಗಲೇ ಡಿಜಿಟಲ್ ವೇದಿಕೆಗಳ ಮೂಲಕ ಎಲ್ಲ ಮಾಹಿತಿ ಸಿಗುತ್ತಿದ್ದಾಗ್ಯೂ ಅವರ ಮತ್ತಷ್ಟು ಅನುಕೂಲಕ್ಕಾಗಿ ಹೆಲ್ಪ್‌ಲೈನ್ ವ್ಯವಸ್ಥೆಯನ್ನು ರೂಪಿಸಲಾಗುವುದು ಎಂದು ಈ ಸಂದರ್ಭದಲ್ಲಿ ಡಿಸಿಎಂ ಹೇಳಿದರು.
ಹೆಲ್ಪ್‌ಲೈನ್ ವ್ಯವಸ್ಥೆಯನ್ನು ಆಯಾ ವಿವಿ ವ್ಯಾಪ್ತಿಯಲ್ಲಿ ಮಾಡಿಕೊಳ್ಳಬೇಕು. ಅದಕ್ಕೆ ಬೇಕಾದ ಸಂಪೂರ್ಣ ಸಹಕಾರವನ್ನು ಸರಕಾರ ನೀಡುತ್ತದೆ. ಕಾಲ್ ಸೆಂಟರ್ ಮಾಡುವುದರಿಂದ ವಿದ್ಯಾರ್ಥಿಗಳಿಗೆ ಸಾಕಷ್ಟು ಸಹಾಯ ಆಗಲಿದೆ. ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಆಗುತ್ತಿರುವ ಹಿನ್ನೆಲೆಯಲ್ಲಿ ಇದೊಂದು ಅತ್ಯುತ್ತಮ ಉಪಕ್ರಮ ಆಗಲಿದೆ ಎಂದು ಡಾ.ಅಶ್ವತ್ಥನಾರಾಯಣ ತಿಳಿಸಿದರು.
ಉನ್ನತ ಶಿಕ್ಷಣ ಪರಿಷತ್ ಉಪಾಧ್ಯಕ್ಷ ಡಾ.ತಿಮ್ಮೇಗೌಡ, ಕಾರ್ಯನಿರ್ವಾಹಕ ನಿರ್ದೇಶಕ ಗೋಪಾಲಕೃಷ್ಣ ಜೋಶಿ, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದೀಪ, ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ಕುಲಪತಿ ಪ್ರೊ.ಕರಿಸಿದ್ದಪ್ಪ ಸೇರಿದಂತೆ ಮೈಸೂರು, ಮಂಗಳೂರು, ಬೆಳಗಾವಿ, ಶಿವಮೊಗ್ಗ ಮುಂತಾದ ವಿವಿಗಳ ಕುಲಪತಿಗಳು ಸಭೆಯಲ್ಲಿ ಭಾಗಿಯಾಗಿದ್ದರು.