ಕೇಂದ್ರದ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಎತ್ತಿನ ಗಾಡಿ ಚಲೋ!

1 min read

ಬೆಂಗಳೂರು : ಕೇಂದ್ರ ಸರ್ಕಾರದ ಬೆಲೆ ಏರಿಕೆ ನೀತಿ ಖಂಡಿಸಿ ಪ್ರದೇಶ ಕಾಂಗ್ರೆಸ್ ಸಮಿತಿ ಆಯೋಜಿಸಿದ್ದ ಎತ್ತಿನ ಗಾಡಿ ಚಲೋ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆಯಲ್ಲಿ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಧಾನ ಪರಿಷತ್ ವಿಪಕ್ಷ ನಾಯಕ ಎಸ್.ಆರ್. ಪಾಟೀಲ್ ಮತ್ತಿತರರು ಭಾಗವಹಿಸಿದ್ದರು.

ಕಾಂಗ್ರೆಸ್ ಬೃಹತ್ ಎತ್ತಿನಗಾಡಿ ಚಲೋ ಪ್ರತಿಭಟನೆ

ಬಳಿಕ ಮಾತನಾಡಿದ ಸಿದ್ದರಾಮಯ್ಯ ಕಚ್ಛಾ ತೈಲ ಬೆಲೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಏರಿಕೆಯಾಗಿದೆ ಎಂಬ ನೆಪ ಹೇಳಿ ಪೆಟ್ರೋಲ್, ಡೀಸೆಲ್‌ ದರ ಏರಿಸುತ್ತಿರುವ ಕೇಂದ್ರ ಸರ್ಕಾರ ಜನರಿಗೆ ಮೋಸ ಮಾಡುತ್ತಿದೆ ಎಂದು ಆರೋಪಿಸಿದ್ರು.

ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಯನ್ನು ರಾಜ್ಯ ಸರ್ಕಾರ ಕೂಡಲೇ ಕಡಿತಗೊಳಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಕೇಂದ್ರ ಸರ್ಕಾರದ ಬೆಲೆ ಏರಿಕೆ ನೀತಿ ಖಂಡಿಸಿ ಪ್ರದೇಶ ಕಾಂಗ್ರೆಸ್ ಸಮಿತಿ ಆಯೋಜಿಸಿದ್ದ ಎತ್ತಿನ ಗಾಡಿ ಚಲೋ ಪ್ರತಿಭಟನೆಯಲ್ಲಿ ಭಾಗವಹಿಸಿದ ಬಳಿಕ ಸಿದ್ದರಾಮಯ್ಯ ಅವರು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದರು.

ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆ ಮನಮೋಹನಸಿಂಗ್ ಅವರು ಪ್ರಧಾನಿಯಾಗಿದ್ದಾಗ ಎಷ್ಟು ಇತ್ತು. ಈಗ ಎಷ್ಟು ಇದೆ ಎಂಬುದನ್ನು ಮಾಧ್ಯಮ ಪ್ರತಿನಿಧಿಗಳೇ ಪರಿಶೀಲಿಸಲಿ.

ತೆರಿಗೆ ವಿಚಾರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಾದರೂ ನಿಜ ಹೇಳಲಿ. ಸತ್ಯವನ್ನೇಕೆ ಅವರು ಮುಚ್ಚಿಡಬೇಕು. ಜನರ ಮುಂದೆ ಅವರು ನಿಜಾಂಶ ವಿವರಿಸಲಿ.‌

ಪೆಟ್ರೋಲ್ ದರ ಈಗ ಲೀಟರ್ ಗೆ 106 ರೂ., ಡೀಸೆಲ್ ಬೆಲೆ 100 ರೂ.ಗಳ ವರೆಗೆ ಹೋಗಿದೆ. ಅಡುಗೆ ಅನಿಲ ದರ 900 ರೂ. ಆಗಿದೆ.

ವಾಜಪೇಯಿ ಅವರು 1973ರಲ್ಲಿ ಬೆಲೆ ಏರಿಕೆ ವಿರೋಧಿಸಿ ಎತ್ತಿನ ಗಾಡಿಯಲ್ಲಿ ಸಂಸತ್ತಿಗೆ ಬಂದಿರಲಿಲ್ಲವೇ ? ಆಗ ಪ್ರತಿಭಟನೆ ಮಾಡಿದವರು ಬಿಜೆಪಿಯವರಲ್ಲವೇ ? ಕಾಂಗ್ರೆಸ್ ಪ್ರತಿಭಟನೆ ವಿರೋಧಿಸಿರುವ ಮುಖ್ಯಮಂತ್ರಿ ಹಾಗೂ ಬಿಜೆಪಿಯವರು ಇತಿಹಾಸ ಓದಿಕೊಳ್ಳಬೇಕು.

ಆಗ ವಾಜಪೇಯಿಯವರು ಏಕೆ ಪ್ರತಿಭಟನೆ ಮಾಡಿದ್ದರು. ಜನ ಬೀದಿಗೆ ಇಳಿದಿದ್ದರೆ ? ಯುಪಿಎ ಸರ್ಕಾರದ ಅವಧಿಯಲ್ಲಿ ಸ್ವಲ್ಪ ಬೆಲೆ ಏರಿಕೆಯಾದಾಗ ಶೋಭಾ ಕರಂದ್ಲಾಜೆಯವರು ಹಸಗೂ ಬಿಜೆಪಿ ನಾಯಕರು ತಲೆಯ ಮೇಲೆ ಸಿಲಿಂಡರ್ ಹೊತ್ತು ಧರಣಿ ಮಾಡಿರಲಿಲ್ಲವೇ ?

ಜನರಿಗೆ ಅನ್ಯಾಯವಾಗಿದೆ ಎಂದು ಅವರು ಹೋರಾಟ ಮಾಡಿದ್ದರು. ಈಗ ಅವರು ಮಂತ್ರಿಯಾಗಿದ್ದಾರೆ ಎಂದು ಜನ ಬೆಲೆ ಏರಿಕೆಯನ್ಬು ಸಹಿಸಿಕೊಳ್ಳಬೇಕೆ ? ಕೂಡಲೇ ಅವರು ಸಚಿವ ಸ್ಥಾನಕ್ಕೆ ರಾಜಿನಾಮೆ ಕೊಡಬೇಕು.

ತಮಿಳುನಾಡಿನಲ್ಲಿ ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆಯನ್ನು ಅಲ್ಲಿಯ ಮುಖ್ಯಮಂತ್ರಿ ಕಡಿಮೆ ಮಾಡಿದ್ದಾರೆ. ಬಸವರಾಜ ಬೊಮ್ಮಾಯಿ ಅವರು ಸಹ ತೆರಿಗೆ ಕಡಿತಗೊಳಿಸಲಿ.

ಬೆಲೆ ಏರಿಕೆ ಬಗ್ಗೆ ಸದನದಲ್ಲಿ ನಾಳೆ ನಿಲುವಳಿ ಸೂಚನೆ ಮಂಡಿಸುತ್ತೇವೆ. ಬೆಲೆ ಏರಿಕೆಯಿಂದ ಜನ ಸಾಮಾನ್ಯರು ತತ್ತರಿಸಿದ್ದಾರೆ. ನಾನು ನಮ್ಮ ರಾಜ್ಯದ ಬಗ್ಗೆ ಕಾಳಜಿಯಿಂದ ಮಾತನಾಡುತ್ತೇನೆ. ಸಾಮಾಜಿಕ ಜಾಲ ತಾಣಗಳಲ್ಲಿ ಕೇಂದ್ರ, ರಾಜ್ಯ ಸರ್ಕಾರವನ್ನು ಜನ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಅದನ್ನೂ ಬಿಜೆಪಿಯವರು ಗಮನಿಸುವುದು ಒಳ್ಳೆಯದು.

ಮನಮೋಹನಸಿಂಗ್ ಅವರು ಪ್ರಧಾನಿ ಆಗಿದ್ದಾಗ ಡೀಸೆಲ್ ಮೇಲಿನ ತೆರಿಗೆ 3.45 ರೂ. ಇತ್ತು. ಈಗ 31.74 ರೂ. ಆಗಿದೆ. ಅದೇ ರೀತಿ ಪೆಟ್ರೋಲ್ ಮಾರಾಟದ ಮೇಲಿನ ತೆರಿಗೆ 9.21 ರೂ.ಗಳಿಂದ 32.98 ರೂ.ಗಳಿಗೆ ಏರಿಕೆಯಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಛಾ ತೈಲ ಬೆಲೆ ಏರಿಕೆ ಆಗದಿದ್ದರೂ ಪೆಟ್ರೋಲ್, ಡಿಸೇಲ್ ಬೆಲೆಯನ್ನು ನಿರಂತರವಾಗಿ ಏರಿಕೆ ಮಾಡುವ ಮೂಲಕ ಕೇಂದ್ರ ಸರ್ಕಾರ ಜನರನ್ನು ವಂಚಿಸುತ್ತಿದೆ ಎಂದು ಸಿದ್ದರಾಮಯ್ಯ ಅವರು ದೂರಿದರು.

ದೇಗುಲ ತೆರವಿಗೆ ಮುನ್ನ ಮಾಹಿತಿ ಕೊಡಬೇಕಿತ್ತು:
ನಂಜನಗೂಡಿನಲ್ಲಿ ದೇವಸ್ಥಾನ ನೆಲಸಮ ಮಾಡುವ ಮುನ್ನ‌‌ ಭಕ್ತರಿಗೆ ತಿಳಿಸಬೇಕಿತ್ತು. ದೇವಾಲಯ ನಿರ್ಮಾಣಕ್ಕೆ ಪರ್ಯಾಯ ಜಾಗವನ್ನಾದರೂ ಕೊಡಬೇಕಿತ್ತು.

ರಾಜ್ಯ, ರಾಷ್ಟ್ರೀಯ ಹೆದ್ದಾರಿಗಳಲ್ಲಿನ ದೇವಾಲಯಗಳನ್ನು ತೆರವುಗೊಳಿಸಲು ನ್ಯಾಯಾಲಯದ ಆದೇಶ ಇದೆ.‌ಆದರೆ, ಮಂದಿರ, ಮಸೀದಿ, ಚರ್ಚ್ ಯಾವುದೇ ಇರಲಿ, ತೆರವಿಗೆ ಮುನ್ ಪರ್ಯಾಯ ವ್ಯವಸ್ಥೆ ಮಾಡಬೇಕು ಎಂದು ಸಿದ್ದರಾಮಯ್ಯ ಅವರು ಒತ್ತಾಯಿಸಿದರು.

ದೇವಸ್ಥಾನ ಕೆಡವಿದ್ದು ಯಾವ ಸರ್ಕಾರ. ಪ್ರತಾಪ್ ಸಿಂಹ ಅವರು ಪ್ರತಿನಿಧಿಸುವ ಪಕ್ಷದ ಸರ್ಕಾರ ತಾನೆ. ಹೀಗಾಗಿ ಪ್ರತಾಪ್ ಸಿಂಹ ರಾಜಿನಾಮೆ ಕೊಟ್ಟು ಸರ್ಕಾರದ ವಿರುದ್ಧ ಹೋರಾಟ ಮಾಡಲಿ.

ಮಹಿಳೆ ಮೇಲಿನ ದೌರ್ಜನ್ಯ ಖಂಡನೀಯ:
ಯಾದಗಿರಿಯಲ್ಲಿ ಮಹಿಳೆ ಮೇಲೆ ನಡೆದಿರುವ ಲೈಂಗಿಕ ದೌರ್ಜನ್ಯ ಖಂಡನೀಯ. ಈ ರಾಜ್ಯದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲ ಎಂಬುದು ಮತ್ತೆ ಸಾಬೀತಾಗಿದೆ.

ಮೈಸೂರಿನಲ್ಲಿ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾದ ವಿದ್ಯಾರ್ಥಿನಿ ಸಂಜೆ ಏಳರ ನಂತರ ಹೊರಗೆ ಹೋಗಿದ್ದೇಕೆ ಎಂದು ಗೃಹ ಸಚಿವರೇ ಹೇಳುತ್ತಾರೆ. ಮಹಿಳೆಯರಿಗೆ ರಕ್ಷಣೆ ಇಲ್ಲ ಎಂಬುದು ಅವರ ಹೇಳಿಕೆಯೇ ಸಾಬೀತು ಮಾಡುತ್ತದೆ. ಜೊತೆಗೆ ರಕ್ಷಣೆ ಕೊಡುವ ಶಕ್ತಿ ಸರ್ಕಾರಕ್ಕೆ ಇಲ್ಲ ಎಂದು ಗೃಹ ಸಚಿವರೇ ಒಪ್ಪಿಕೊಂಡಂತೆ ಆಗಿದೆ ಎಂದರು.

ಗೃಹ ಸಚಿವರ ಕ್ಷೇತ್ರದಲ್ಲಿ‌ ನಂದಿತಾ ಪ್ರಕರಣ ನಡೆದಾಗ ‌ಗೃಹ ಸಚಿವರು ರಾಜಿನಾಮೆ ಕೊಡಬೇಕು ಎಂದು ಇಂದಿನ ಗೃಹ ಸಚಿವ ಅರಗ ಜ್ಞಾನೇಂದ್ರ ಆಗ್ರಹಿಸಿದ್ದರು. ಆಗ ನಾವು ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿದ್ದೆವು. ಒಟ್ಟು ಆರು ಪ್ರಕರಣಗಳನ್ನು ನಮ್ಮ ಸರ್ಕಾರದ ಅವಧಿಯಲ್ಲಿ ಸಿಬಿಐ ತನಿಖೆಗೆ ಕೊಟ್ಟಿದ್ದೆವು. ಇವರು ಒಂದಾದರೂ ವಹಿಸಿದ್ದಾರೆಯೇ ? ಎಂದು ಸಿದ್ದರಾಮಯ್ಯ ಅವರು ಪ್ರಶ್ನಿಸಿದರು.

About Author

Leave a Reply

Your email address will not be published. Required fields are marked *