ದೆಹಲಿಯಲ್ಲಿ ಹದಗೆಟ್ಟ ಗಾಳಿ ಪರಿಸ್ಥಿತಿ ಸುಧಾರಿಸಲು 2 ದಿನ ಲಾಕ್‌ಡೌನ್..?
1 min readನವದೆಹಲಿ: ದೆಹಲಿಯಲ್ಲಿ ಹದಗೆಟ್ಟ ಗಾಳಿ ಪರಿಸ್ಥಿತಿ ಸುಧಾರಿಸಲು 2 ದಿನ ಲಾಕ್‌ಡೌನ್..? ಸುಪ್ರೀಂ ಪ್ರಶ್ನೆ ರೈತರಿಂದಲೇ ಮಾಲಿನ್ಯವಾಗಿದೆ ಎಂದು ಏಕೆ ಬಿಂಬಿಸುತ್ತಿದ್ದೀರಿ..? ರೈತರನ್ನು ದೂಷಿಸುವುದು ಎಲ್ಲರಿಗೂ ಫ್ಯಾಶನ್ ಆಗಿದೆ ಎಂದು ಕೋರ್ಟ್ ಕೇಂದ್ರದ ವಿರುದ್ಧ ಕಿಡಿಕಾರಿದೆ.
ಕಳೆದೊಂದು ವಾರದಿಂದ ದೆಹಲಿ ಮತ್ತು ಸುತ್ತಮುತ್ತಲಿನ ನಗರಗಳಲ್ಲಿ ಹೊಗೆ ತುಂಬಿಕೊಂಡಿದ್ದು ಪರಿಸ್ಥಿತಿ ತೀವ್ರ ಹದಗೆಟ್ಟಿದೆ. ಗಾಳಿಯ ಗುಣಮಟ್ಟ ಸೂಚ್ಯಂಕವು ತೀರಾ ಕೆಳಕ್ಕಿಳಿದಿರುವುದರಿಂದ ಇದನ್ನು ಸರಿಪಡಿಸಲು ಏನು ಕ್ರಮ ಕೈಗೊಂಡಿರುವಿರಿ ಎಂದು ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದೆ. ಯಾವ ತುರ್ತು ಯೋಜನೆಗಳನ್ನು – ಕ್ರಮಗಳನ್ನು ಕೈಗೊಂಡಿರುವಿರಿ ತಿಳಿಸಿ. 2 ದಿನ ಲಾಕ್‌ಡೌನ್ ಮಾಡುವಿರಾ? ಗಾಳಿಯ ಗುಣಮಟ್ಟವನ್ನು ಉತ್ತಮಗೊಳಿಸಲು ನಿಮ್ಮ ಯೋಜನೆಯೇನು ಎಂದು ಸಿಜೆಐ ರಮಣ ಪ್ರಶ್ನಿಸಿದ್ದಾರೆ.
ಪರಿಸ್ಥಿತಿ ಎಷ್ಟು ಹದಗೆಟ್ಟಿದೆ ಎಂಬುದು ನಿಮಗೆ ತಿಳಿದಿದೆಯೇ? ನಾವು ಮನೆಯಲ್ಲಿಯೂ ಮಾಸ್ಕ್ ಧರಿಸಬೇಕಾಗ ಪರಿಸ್ಥಿತಿ ಬಂದಿದೆ. ಇದು ರಾಜ್ಯಗಳ ಜವಾಬ್ದಾರಿ, ಇಲ್ಲ ಕೇಂದ್ರ ಜವಾಬ್ದಾರಿ ಎಂದು ನುಣಚಿಕೊಳ್ಳುವ ಸಂದರ್ಭದ ಇದ್ಲ. ಕೂಡಲೇ ಪಂಜಾಬ್ ಹರಿಯಾಣ ರಾಜ್ಯಗಳೊಂದಿಗೆ ತುರ್ತು ಸಭೆ ನಡೆಸಿ. ಮುಂದಿನ ಎರಡು ಮೂರು ದಿನಗಳಲ್ಲಿ ಪರಿಸ್ಥಿತಿ ಸುಧಾರಿಸಿ ಎಂದು ನಮಗೆ ಅನ್ನಿಸುವ ರೀತಿ ಕ್ರಮ ಕೈಗೊಳ್ಳಿ ಎಂದು ರಮಣ ಸೂಚಿಸಿದ್ದಾರೆ.
ಶುಕ್ರವಾರದ ದೆಹಲಿಯ ಪರಿಸ್ಥಿತಿ ಈ ಅವಧಿಯಲ್ಲಿಯೇ ಅತಿ ಕೆಟ್ಟ ಪರಿಸ್ಥಿತಿ ತಲುಪಿತ್ತು. ಪರಿಸ್ಥಿತಿ ಗಂಭೀರತೆ ನಮಗೆ ಅರ್ಥವಾಗಿದೆ. ದೆಹಲಿಯ ಗಾಳಿಯನ್ನು ಉಸಿರಾಡುವುದು ದಿನಕ್ಕೆ 20 ಸಿಗರೇಟ್ ಸೇದುವಂತೆ ಎಂದು ರಾಜ್ಯ ಸರ್ಕಾರ ನ್ಯಾಯಾಲಯದಲ್ಲಿ ಒಪ್ಪಿಕೊಂಡಿದೆ. ಕೇಂದ್ರೀಯ ಮಾಲಿನ್ಯ ನಿಯಂತ್ರಕವು ಜನರು ಮನೆಯಲ್ಲಿಯೇ ಇರುವಂತೆ ಸೂಚಿಸಿದೆ.
ಕೃಷಿ ತ್ಯಾಜ್ಯವನ್ನು ಸುಡದಂತೆ ತಡೆಯುವುದು ಸದ್ಯದ ವಾಯುಮಾಲಿನ್ಯವನ್ನು ತಡೆಯುವ ಪ್ರಮುಖ ಹೆಜ್ಜೆಯಾಗಿದ್ದು ಇದರತ್ತ ಗಮನ ಹರಿಸುತ್ತೇವೆ ಎಂದು ಕೇಂದ್ರ ಸರ್ಕಾರ ಹೇಳಿದೆ. ನಾವು ಹುಲ್ಲು ಸುಡುವುದನ್ನು ತಡೆಯಲು ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ. ಆದರೆ ಕಳೆದ ಐದಾರು ದಿನಗಳಲ್ಲಿ ಪಂಜಾಬ್‌ನಲ್ಲಿ ಉರಿಯುತ್ತಿರುವ ಕೃಷಿ ತ್ಯಾಜ್ಯದ ಕಾರಣದಿಂದಾಗಿ ಮಾಲಿನ್ಯ ಹೆಚ್ಚಾಗಿದೆ, ಹಾಗಾಗಿ ಪಂಜಾಬ್ ರಾಜ್ಯವು ಅದನ್ನು ತಡೆಯಬೇಕೆಂದು ಕೇಂದ್ರವು ಪಂಜಾಬ್ ಮೇಲೆ ಹೊಣೆ ಹೊರಿಸಿದೆ.
ಇದಕ್ಕೆ ಉತ್ತರಿಸಿದ ಮುಖ್ಯ ನ್ಯಾಯಮೂರ್ತಿಗಳು, “ರೈತರಿಂದಲೇ ಮಾಲಿನ್ಯವಾಗಿದೆ ಎಂದು ಏಕೆ ಬಿಂಬಿಸುತ್ತಿದ್ದೀರಿ? ಅವರಿಂದ ಒಂದಷ್ಟು ಮಾಲಿನ್ಯವಾಗಿದೆ. ಆದರೆ ಉಳಿದ ಮಾಲಿನ್ಯದ ಬಗ್ಗೆ ಏನು ಹೇಳುತ್ತೀರಿ? ದೆಹಲಿಯಲ್ಲಿ ಮಾಲಿನ್ಯವನ್ನು ನಿಯಂತ್ರಿಸಲು ನೀವು ಏನು ಮಾಡುತ್ತಿದ್ದೀರಿ? ನೀವೇ ಹೇಳಿ? ನಿಮ್ಮ ಸರಿಯಾದ ಯೋಜನೆ ಏನು? ಕೇವಲ 2-3 ದಿನಗಳು ವಿಚಾರ ಅಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರೈತರಿಗೆ ಪ್ರೋತ್ಸಾಹಧನ ಸಿಗದಿದ್ದರೆ ಅವರು ಹೇಗೆ ತಾನೇ ಬದಲಾಗುತ್ತಾರೆ? ಅವರಿಗೆ ಸಿಗುವ ಒಂದಷ್ಟು ಸಬ್ಸಿಡಿಯ ಹೊರತಾಗಿಯೂ, ಅನೇಕ ರೈತರಿಗೆ ಹುಲ್ಲು ಸುಡುವ ಯಂತ್ರಗಳನ್ನು ಖರೀದಿಸಲು ಸಾಧ್ಯವಾಗುತ್ತಿಲ್ಲ ಎಂದು ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅಭಿಪ್ರಾಯಪಟ್ಟಿದ್ದಾರೆ. “ರೈತರನ್ನು ದೂಷಿಸುವುದು ಎಲ್ಲರಿಗೂ ಫ್ಯಾಶನ್ ಆಗಿದೆ. ನೀವು ಪಟಾಕಿಯನ್ನು ನಿಷೇಧಿಸಿದ್ದೀರಿ ಆದರೆ ಕಳೆದ 5-6 ದಿನಗಳಿಂದ ಏನಾಗುತ್ತಿದೆ” ಎಂದು ನ್ಯಾಯಮೂರ್ತಿ ಸೂರ್ಯ ಕಾಂತ್ ಪ್ರಶ್ನಿಸಿದ್ದಾರೆ.
ಕೇಂದ್ರವನ್ನು ಪ್ರತಿನಿಧಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, “ನಾವು ರೈತರನ್ನು ಮಾತ್ರ ದೂಷಿಸುತ್ತಿಲ್ಲ, ನಾವು ಅದನ್ನು ಎಂದಿಗೂ ಹೇಳಲಿಲ್ಲ” ಎಂದು ಸ್ಪಷ್ಟಪಡಿಸಿದರು.