ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರಿಂದ ಪ್ರತಿಭಟನೆ
1 min readಮೈಸೂರು,ಸೆ.24-ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೆಡರೇಷನ್ ನವರು ಇಂದು ಪ್ರತಿಭಟನೆ ನಡೆಸಿದರು.
ನಗರದ ಜಿಲ್ಲಾ ಪಂಚಾಯಿತಿ ಎದುರು ಜಮಾಯಿಸಿದ ಪ್ರತಿಭಟನಾಕಾರರು ಮುಂಚೂಣಿಯಲ್ಲಿರುವ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ನಿರ್ದಿಷ್ಟ ಕಾಲಮಿತಿಯೊಳಗೆ ಉಚಿತವಾಗಿ ವ್ಯಾಕ್ಸಿನೇಷನ್ ಮಾಡಬೇಕು. ಮುಂಚೂಣಿಯಲ್ಲಿರುವ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಸುರಕ್ಷತಾ ಸಾಧನಗಳನ್ನು ಒದಗಿಸಿ. ಕೋವಿಡ್-19 ಟೆಸ್ಟ್ ಕಡ್ಡಾಯವಾಗಿ ಮಾಡಿಸಿ, ಸೋಂಕಿನಿಂದ ರಕ್ಷಿಸುವಂತೆ ಆಗ್ರಹಿಸಿದರು.
ಜಿಡಿಪಿಯ ಶೇ.6ರಷ್ಟು ಹಣವನ್ನು ಆರೋಗ್ಯ ಇಲಾಖೆಗೆ ಮೀಸಲಿಟ್ಟು ಸಾರ್ವಜನಿಕರ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸಬೇಕು. ಮೂಲಭೂತ ಸೌಲಭ್ಯಗಳಾದ ಆಮ್ಲಜನಕ, ಔಷಧಿ ಇತ್ಯಾದಿಗಳನ್ನು ಒದಗಿಸಬೇಕು ಎಂದು ಒತ್ತಾಯಿಸಿದರು.
ಯೋಜನೆಗಳ ಕೆಲಸಗಾರರಿಗೆ ಮಾಸಿಕ 10ಕೆಜಿ ಆಹಾರ ಧಾನ್ಯಗಳನ್ನು ಕೊರೋನಾ ಅವಧಿಗೆ ನೀಡಬೇಕು. ಬೆಲೆ ಏರಿಕೆ ತಡೆಗಟ್ಟಬೇಕು. 6ತಿಂಗಳ ಅವಧಿಗೆ ತೆರಿಗೆದಾರರಲ್ಲದ ಕುಟುಂಬಗಳಿಗೆ 7,500ರೂ.ಗಳನ್ನು ಮಾಸಿಕವಾಗಿ ನೀಡಬೇಕು. ಯುಗಾದಿ. ದೀಪಾವಳಿ, ರಂಜಾನ್ ಹಾಗೂ ಕ್ರಿಸ್ಮಸ್ ಹಬ್ಬಗಳಿಗೆ ವಾರ್ಷಿಕ ಬೋನಸ್ ಜಾರಿ ಮಾಡಬೇಕು. ಕಾರ್ಯಕರ್ತೆ ಸಹಾಯಕಿಯರಾಗಿ ಆಯ್ಕೆಯಾದವರ ವಿವರಗಳನ್ನು ಪೊಲೀಸ್ ಇಲಾಖೆ ಮೂಲಕ ಪರಿಶೀಲಿಸಬೇಕು. ಎಸ್ ಎಸ್ ಎಲ್ ಸಿ ಮತ್ತು ಪದವಿ ಪಡೆದವರಿಗೆ ಮೇಲ್ವಿಚಾರಕಿ ಹುದ್ದೆಗೆ ಕಡ್ಡಾಯವಾಗಿ ಆಯ್ಕೆ ಮಾಡಬೇಕು. ಕಳೆದ ಮೂರು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಗಳನ್ನು ಕಡ್ಡಾಯವಾಗಿ ವರ್ಗಾವಣೆ ಮಾಡಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಮೈಸೂರು ನಗರ ಅಧ್ಯಕ್ಷೆ ಪುಟ್ಟಮ್ಮ, ಗ್ರಾಮಾಂತರ ಅಧ್ಯಕ್ಷೆ ಭಾಗ್ಯ, ಕಾರ್ಯದರ್ಶಿ ವೈ.ಮಹದೇವಮ್ಮ, ಹೆಚ್.ಡಿ.ಕೋಟೆ ಅಧ್ಯಕ್ಷೆ ಸುಮ, ಪಿರಿಯಾಪಟ್ಟಣ ಅಧ್ಯಕ್ಷೆ ಭುವನೇಶ್ವರಿ, ಖಜಾಂಚಿ ಗೀತಾ, ಸುನಂದ ಪಾಲ್ಗೊಂಡಿದ್ದರು.