ದ್ವಿಚಕ್ರ ವಾಹನದಲ್ಲಿ ಪ್ರವಾಹ ಪೀಡಿತ ಪ್ರದೇಶ ಪರಿಶೀಲನೆ ನಡೆಸಿದ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ
1 min readನಂಜನಗೂಡು: ದ್ವಿಚಕ್ರ ವಾಹನದಲ್ಲಿ ತೆರಳಿ ಪ್ರವಾಹ ಪೀಡಿತ ಪ್ರದೇಶಕ್ಕೆ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ರವರ ಸರಳತೆಗೆ ವರುಣಾ ಕ್ಷೇತ್ರದ ಜನರು ಫಿದಾ ಆಗಿದ್ದಾರೆ. ಕಪಿಲಾ ನದಿ ಪ್ರವಾಹದ ನೀರಿನಿಂದ ಹಾನಿಗೊಳಗಾಗಿರುವ ಕೃಷಿ ಭೂಮಿಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ತಾಲ್ಲೂಕು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ದೀಪಕ್ ಜತೆ ತೆರಳಿ ಕೃಷಿ ಭೂಮಿಗಳನ್ನು, ನಂಜನಗೂಡು ತಾಲ್ಲೂಕಿನ ವರುಣ ವಿಧಾನಸಭೆ ಕ್ಷೇತ್ರದ ಆಲತ್ತೂರು, ಮೂಡಹಳ್ಳಿ ಹಾಗೂ ಬೊಕ್ಕಹಳ್ಳಿ ಗ್ರಾಮದ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕಪಿಲಾ ನದಿಯ ಪ್ರವಾಹದಿಂದ ಹಾನಿಗೊಳಗಾಗಿರುವ ಕೃಷಿ ಭೂಮಿಯ ರೈತರಿಗೆ ಕೂಡಲೆ ಪರಿಹಾರ ಕಲ್ಪಿಸಿಕೊಡಬೇಕು. ಜಿಟಿ ಜಿಟಿ ಮಳೆಯಿಂದ ಅನಾದಿ ಕಾಲದ ಮಣ್ಣಿನ ಗೋಡೆಗಳು ಕುಸಿತ ಕಂಡಿವೆ ಅವುಗಳನ್ನು ಕೂಡಲೇ ತಾಲ್ಲೂಕು ಆಡಳಿತದ ಅಧಿಕಾರಿಗಳು ಪರಿಶೀಲನೆ ಮಾಡಿ ಪಟ್ಟಿ ತಯಾರಿಸಬೇಕು. ಹಾನಿಗೊಳಗಾಗಿರುವ ವಾಸದ ಮನೆ ಮತ್ತು ಕಪಿಲಾ ನದಿಯ ಪ್ರವಾಹದ ನೀರಿನಿಂದ ಮುಳುಗಡೆಯಾಗಿರುವ ಕೃಷಿಭೂಮಿಯ ಬೆಳೆಗಳಿಗೆ ಕೂಡಲೇ ಪರಿಹಾರ ನೀಡಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಕಪಿಲಾ ನದಿಯ ಅಂಚಿನಲ್ಲಿರುವ ಗ್ರಾಮಗಳ ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ತಾಲ್ಲೂಕು ಆಡಳಿತ ನಿಗಾ ಇಡಬೇಕು .ಕಪಿಲಾ ನದಿಯಲ್ಲಿ ಪ್ರವಾಹದ ನೀರು ಹೆಚ್ಚಾದಂತ ಸಂದರ್ಭದಲ್ಲಿ ಆಶ್ರಯತಾಣಗಳಿಗೆ ಸಾರ್ವಜನಿಕರನ್ನು ಸ್ಥಳಾಂತರಿಸಬೇಕು. ಜನ ಜಾನುವಾರುಗಳಿಗೆ ಕಪಿಲಾ ನದಿಯ ಪ್ರವಾಹ ಮತ್ತು ಜಿಟಿ ಜಿಟಿ ಮಳೆಯಿಂದ ತೊಂದರೆಯಾಗದಂತೆ ಜಿಲ್ಲಾ ಮತ್ತು ತಾಲ್ಲೂಕು ಆಡಳಿತ ಜಾಗ್ರತಿ ವಹಿಸಬೇಕು ಎಂದು ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸಲಹೆ ನೀಡಿದರು.