ಜೆಡಿಎಸ್ ಅಧಿಕಾರಕ್ಕೆ ಬಂದರೆ ಮಹಿಳೆಯರ ಸಾಲ ಮನ್ನಾ ಮಾಡಿ: ಎಚ್ಡಿಕೆಗೆ‌ ಶಾಸಕಿ ಅನಿತಾ ಕುಮಾರಸ್ವಾಮಿ ಸಲಹೆ

1 min read

ಬಿಡದಿ,ಸೆ.೨೯-ಜೆಡಿಎಸ್ ಮತ್ತೆ ಅಧಿಕಾರಕ್ಕೆ ಬಂದರೆ ಮಹಿಳೆಯರ ಸಾಲ ಮನ್ನಾ ಮಾಡಬೇಕು ಎಂದು ಶಾಸಕಿ ಅನಿತಾ ಕುಮಾರಸ್ವಾಮಿ ಅವರು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಸಲಹೆ ನೀಡಿದರು.
ಜನತಾ ಪರ್ವ 1.O’ / ‘ಮಿಷನ್ 123’ ಗುರಿಯೊಂದಿಗೆ ಬಿಡದಿಯ ತೋಟದಲ್ಲಿ ಆಯೋಜಿಸಲಾಗಿರುವ  ಜೆಡಿಎಸ್ ಸಂಘಟನಾ ಕಾರ್ಯಗಾರ ಮಹಿಳಾ ಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹೆಚ್.ಡಿ.ಕುಮಾರಸ್ವಾಮಿ ಅವರು ಹಿಂದೆ ಅಧಿಕಾರದಲ್ಲಿದ್ದಾಗ ರೈತರ ಸಾಲ ಮನ್ನಾ ಮಾಡಿದರು. ಮಹಿಳೆಯರು ಸಾಲ ಮನ್ನಾ ಮಾಡಿ ಎಂದು ಕೇಳುತ್ತಿದ್ದಾರೆ. ಕಷ್ಟದಲ್ಲಿ ಇರುವ ಮಹಿಳೆಯರ ನೆರವಿಗೆ ಧಾವಿಸಬೇಕು ಎಂದರು.
ಮಹಿಳೆಯರಿಗೆ ವಿಶೇಷವಾದ ಕಾರ್ಯಕ್ರಮ‌ ಕೊಡಿ. ಇದು ನಾನು ಕುಮಾರಸ್ವಾಮಿ ಅವರಿಗೆ ನೀಡುವ ಮುಖ್ಯವಾದ ಸಲಹೆ. ರೈತರ ಸಾಲ ಮನ್ನಾ ಕ್ರಾಂತಿಕಾರಿ ಕ್ರಮ. ಹಾಗೆಯೇ ಕುಟುಂಬ ನಿರ್ವಹಣೆಗೆ, ಮಕ್ಕಳ ಶಿಕ್ಷಣಕ್ಕೆ ಮಹಿಳೆಯರು ಸಾಲ ಮಾಡಿಕೊಂಡಿದ್ದಾರೆ. ಮುಂದೆ ನೀವು ಅಧಿಕಾರಕ್ಕೆ ಬಂದರೆ ಅಂತಹ ಮಹಿಳೆಯರ ಸಾಲವನ್ನೂ ಮನ್ನಾ ಮಾಡಿ ಎಂದು ಹೇಳಿದರು.
ಪಂಚರತ್ನ ಯೋಜನೆ ರೂಪಿಸುವ ಯೋಚನೆ ಶ್ಲಾಘನೀಯ. ಇದರ ಜತೆಗೆ ಉಚಿತ ಶಿಕ್ಷಣ ನೀಡಿದರೆ ಸಮಾಜಕ್ಕೆ, ರಾಜ್ಯಕ್ಕೆ ಇನ್ನೂ ಒಳ್ಳೆಯದು. ಫ್ರೀ‌ ಹೆಲ್ತ್ ಸ್ಕೀಮ್ ಮಾಡಿದರೆ ಒಳ್ಳೆಯದು. ಈ ಮೂಲಕ ಬಡಜನರ ಆರೋಗ್ಯ ಬವಣೆ ತಪ್ಪುತ್ತದೆ. ಉತ್ತಮ ಆರೋಗ್ಯ ಇದ್ದರೆ ಉತ್ತಮ ಸಮಾಜ ನಿರ್ಮಾಣ ಆಗುತ್ತದೆ‌ ಎಂದರು.
ಮಹಿಳೆಯರಿಗೆ ಉತ್ತಮ ಅವಕಾಶಗಳಿವೆ. ಎಲ್ಲರೂ ಪ್ರೋತ್ಸಾಹ ನೀಡಬೇಕು. ಚುನಾವಣಾ ಅಭ್ಯರ್ಥಿಗಳು ಮಹಿಳೆಯರನ್ನು ಗೌರವದಿಂದ ನಡೆಸಿಕೊಳ್ಳಬೇಕು ಎಂದು ಹೇಳಿದರು.
ಸ್ವತಂತ್ರವಾಗಿ ಮಹಿಳೆಯರು ಕೆಲಸ ನಿಭಾಯಿಸಲು ಕಲಿಯಬೇಕು. ದೇವರು ಈ ಅವಕಾಶ ಕೊಟ್ಟಿದ್ದಾನೆ. ಸ್ವತಂತ್ರವಾಗಿ ಬದುಕಬೇಕು, ನಿರ್ಧಾರಗಳನ್ನು ಕೈಗೊಳ್ಳುವ ದಿಟ್ಟತನ ತೋರಬೇಕು.
ಮೊದಲು ಯಜಮಾನರನ್ನು ಕೇಳಬೇಕು ಅನ್ನೋದನ್ನು ಬಿಡಿ. ಸ್ವತಂತ್ರವಾಗಿ ಆಲೋಚನೆ ಮಾಡಿ. ಮಹಿಳೆಯರು ಯಾವುದರಲ್ಲೂ ಕಡಿಮೆ ಇಲ್ಲ. ಎಲ್ಲಾ ಕ್ಷೇತ್ರಗಳಲ್ಲಿ ಮುಂದೆ ಇದ್ದಾರೆ. ನೀವೆಲ್ಲರೂ ಮುಂದೆ ಹೇಗೆ ಬೆಳೆಯಬೇಕು ಎಂಬುದನ್ನು ತೀರ್ಮಾನ ಮಾಡಿ ಎಂದರು.
ವೇದಿಕೆಯ ಮೇಲೆ  ಜೆಡಿಎಸ್ ರಾಜ್ಯ ಮಹಿಳಾ ಅಧ್ಯಕ್ಷೆ ಲೀಲಾದೇವಿ ಆರ್.ಪ್ರಸಾದ್, ದೇವದುರ್ಗ ಮುಂದಿನ ಚುನಾವಣೆ ಅಭ್ಯರ್ಥಿ ಕರಿಯಮ್ಮ, ಬೆಂಗಳೂರು ನಗರದ ಮಹಿಳಾ ಜೆಡಿಎಸ್ ಅಧ್ಯಕ್ಷೆ ರುತ್ ಮನೋರಮಾ ಹಾಗೂ ಗೋಷ್ಠಿಯಲ್ಲಿ ಮುಖ್ಯ ಭಾಷಣ ಮಾಡಿದ ಕೆ.ಷರೀಫಾ ಇದ್ದರು.

About Author

Leave a Reply

Your email address will not be published. Required fields are marked *