ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ವಾಟರ್ ಮ್ಯಾನ್: ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದ ಪತ್ರಕರ್ತ
1 min readಮೈಸೂರು,ಸೆ.22-ವಿಷ ಕುಡಿದು ನರಳಾಡುತ್ತಿದ್ದ ವಾಟರ್ ಮ್ಯಾನ್ ನನ್ನು ಆಸ್ಪತ್ರೆಗೆ ಕರೆದೊಯ್ದು ಪತ್ರಕರ್ತನೋರ್ವ ಮಾನವೀಯತೆ ಮೆರೆದಿದ್ದಾರೆ.
ನಂಜನಗೂಡು ತಾಲೂಕಿನ ನೇರಳೆ ಗ್ರಾಮ ಪಂಚಾಯತ್ ನಲ್ಲಿ ಘಟನೆ ನಡೆದಿದೆ. ಹಂಪಾಪುರ ಗ್ರಾಮದಲ್ಲಿ ವಾಟರ್ ಮ್ಯಾ ನ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಕುಮಾರಸ್ವಾಮಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದವರು.
ಕುಮಾರಸ್ವಾಮಿ ಅವರು ವಿಷ ಸೇವಿಸಿ ಒದ್ದಾಡುತ್ತಿದ್ದರೂ ಯಾರೊಬ್ಬರೂ ಸಹಾಯಕ್ಕೆ ಬಂದಿರಲಿಲ್ಲ. ವಿಷ ಕುಡಿದು ವ್ಯಕ್ತಿ ನರಳುತ್ತಿದ್ದರೂ ತಮ್ಮ ತಮ್ಮ ಕಿತ್ತಾಟಗಳಲ್ಲಿ ಗ್ರಾ.ಪಂ ಸದಸ್ಯರುಗಳು ನಿರತರಾಗಿದ್ದರು. ಸುದ್ದಿ ಮಾಡಲು ತೆರಳಿದ್ದ ಪತ್ರಕರ್ತ ರೇವಣ್ಣ ಸಮಯ ಪ್ರಜ್ಞೆ ಮೆರೆದು ವಾಟರ್ ಮ್ಯಾನ್ ನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪತ್ರಕರ್ತ ರೇವಣ್ಣನ ಮಾನವೀಯತೆ ಕಾರ್ಯಕ್ಕೆ ಕವಲಂದೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ ಸಂಪತ್ ಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ದೊಡ್ಡ ಕವಲಂದೆ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ಕಳುಹಿಸಲಾಗಿದೆ. ಕುಮಾರಸ್ವಾಮಿ ಕಳೆದ ಎಂಟು ವರ್ಷದಿಂದ ವಾಟರ್ ಮ್ಯಾನ್ ಆಗಿದ್ದರು. ಆದ್ರೆ 2016ರಲ್ಲಿ ಗ್ರಾಮ ಪಂಚಾಯಿತಿ ಪಿಡಿಒ ಮತ್ತು ಅಧ್ಯಕ್ಷರು ಕುಮಾರಸ್ವಾಮಿಯನ್ನು ಕೆಲಸದಿಂದ ವಜಾ ಮಾಡಿದ್ದರು. ಇದನ್ನು ಪ್ರಶ್ನಿಸಿ ಕುಮಾರಸ್ವಾಮಿ ಕೋರ್ಟ್ ಮೊರೆ ಹೋಗಿದ್ದರು.ಕುಮಾರಸ್ವಾಮಿಯನ್ನು ಕೆಲಸದಲ್ಲಿ ಮುಂದುವರಿಸಲು ಕೋರ್ಟ್ ಆದೇಶ ಮಾಡಿತ್ತು. ಆದರೆ ಕೋಟ್ ಆದೇಶವನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ ಕೆಲಸಕ್ಕೆ ನೇಮಿಸಿಕೊಳ್ಳದ ಹಿನ್ನೆಲೆಯಲ್ಲಿ ಬೇಸತ್ತು ಕಚೇರಿ ಮುಂದೆಯೇ ಕುಮಾರಸ್ವಾಮಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಸದ್ಯ ಕುಮಾರಸ್ವಾಮಿಗೆ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದ್ದು ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ ಎನ್ನಲಾಗಿದೆ.