ಗ್ರಾಮ ಒನ್ ಯೋಜನೆ ಕಾಂತ್ರಿಕಾರಿ ಯೋಜನೆ: ಸಿಎಂ ಬೊಮ್ಮಾಯಿ
1 min readಬೆಂಗಳೂರು,ಜ.26-ಗ್ರಾಮ ಒನ್ ಜನರ ಬಳಿಗೆ ಸೇವೆಗಳನ್ನು ತಲುಪಿಸುವ ಕ್ರಾಂತಿಕಾರಿ ಯೋಜನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು 12 ಜಿಲ್ಲೆಗಳಲ್ಲಿ ಈ ಯೋಜನೆ ಜಾರಿಯಾಗಲಿದೆ. ಸುಮಾರು 3000 ಗ್ರಾಮ ಪಂಚಾಯಿತಿಗಳಲ್ಲಿ ಪ್ರಾರಂಭವಾಗಲಿದೆ. ಮುಂದಿನ ಕೆಲವೇ ದಿನಗಳಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಯೋಜನೆಯನ್ನು ವಿಸ್ತರಿಸಲಾಗುವುದು ಎಂದು ಹೇಳಿದರು.
ಜನರ ಬಳಿಗೆ ಸರ್ಕಾರ ಮತ್ತು ಸೇವೆಗಳು ತಲುಪಬೇಕು ಎಂಬ ನೀತಿಯ ಆಧಾರದ ಮೇಲೆ ಯೋಜನೆಯನ್ನು ರೂಪಿಸಲಾಗಿದೆ. ಇದೊಂದು ಕ್ರಾಂತಿಕಾರಿ ಯೋಜನೆಯಾಗಿದೆ. ಎಲ್ಲರೂ ಸಹಕರಿಸುವ ಮೂಲಕ ಯೋಜನೆಯನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಗ್ರಾಮ ಒನ್ ಯೋಜನೆ ಗ್ರಾಮ ಪಂಚಾಯಿತಿಯಲ್ಲಿ ಜಾತಿ, ಆದಾಯ ಪ್ರಮಾಣ ಪತ್ರಗಳು ಹಾಗೂ ಬ್ಯಾಂಕಿಂಗ್ ಸೇವೆಗಳು ಸೇರಿದಂತೆ ಹಲವಾರು ಸೇವೆಗಳನ್ನು ಒದಗಿಸುವ ವಿಶಿಷ್ಟ ಯೋಜನೆ. ಇದಕ್ಕಾಗಿ ಗ್ರಾಮಗಳಲ್ಲಿ ಅಗತ್ಯ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಳಿಸಿದರು.