ಸದನದಲ್ಲಿ ಪಂಚೆ ಕಾಮಿಡಿ: ಪಂಚೆ ಕಳಚಿಕೊಂಡಿದೆ ಎಂದು ಬಹಿರಂಗವಾಗಿ ಹೇಳಿದ ಸಿದ್ದರಾಮಯ್ಯ
1 min readಬೆಂಗಳೂರು,ಸೆ.22-ವಿಧಾನಸಭೆಯ ಕಲಾಪದಲ್ಲಿ ಮೈಸೂರಿನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ ಕುರಿತು ಚರ್ಚೆ ನಡೆಯುತ್ತಿದ್ದ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಪಂಚೆ ಕಳಚಿಕೊಂಡಿದೆ. ಇದರಿಂದ ಕಲಾಪ ಕೆಲ ಕ್ಷಣ ಹಾಸ್ಯ ಪ್ರಸಂಗಕಕ್ಕೆ ಕಾರಣವಾಯಿತು.
ವಿಧಾನಸಭೆಯಲ್ಲಿ ನಿಲುವಳಿ ಸೂಚನೆ ಅಡಿಯಲ್ಲಿ ಸಿದ್ದರಾಮಯ್ಯ ಮಾತನಾಡುತ್ತಿದ್ದ ಸಂದರ್ಭದಲ್ಲಿ ಸಿದ್ದರಾಮಯ್ಯ ಪಂಚೆ ಜಾರುತ್ತಿದ್ದನ್ನು ಗಮನಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಅವರ ಹತ್ತಿರ ಬಂದು ಪಂಚೆ ಜಾರುತ್ತಿರುವುದನ್ನು ಅವರ ಗಮನಕ್ಕೆ ತಂದರು. ಈ ವೇಳೆ ಅಧ್ಯಕ್ಷರೇ ನನ್ನ ಪಂಚೆ ಕಳಚಿದೆ, ಇರೀ ಕಟ್ಟಿಕೊಂಡು ಮಾತಾಡ್ತೇನೆ ಎಂದು ಸಿದ್ದರಾಮಯ್ಯ ಕುಳಿತುಕೊಂಡರು.
ಹೊಟ್ಟೆ ದಪ್ಪ ಆಗಿ ನನ್ನ ಪಂಚೆ ಕಳಚಿದೆ ಈಶ್ವರಪ್ಪ ಎಂದು ಸಿದ್ದರಾಮಯ್ಯ ಹೇಳಿದರೆ, ಈ ವೇಳೆ ರಮೇಶ್ ಕುಮಾರ್ ಎದ್ದು ನಿಂತು, ಮರ್ಯಾದೆ ಪ್ರಶ್ನೆ ಎಂದು ಡಿಕೆಶಿ ಅವರು ಗುಟ್ಟಾಗಿ ಕಿವಿಯಲ್ಲಿ ಹೇಳಿದ್ರೆ, ನೀವು ಅದನ್ನು ಬಹಿರಂಗ ಮಾಡ್ತೀರಲ್ಲ ಎಂದು ನಕ್ಕರು.
ಬಳಿಕ ಪಂಚೆ ಕಟ್ಟಿಕೊಂಡು ಮಾತನಾಡಿದ ಸಿದ್ದರಾಮಯ್ಯ, ಮೊದಲು ಪಂಚೆ ಬಿಚ್ಚಿ ಹೋಗ್ತಿರಲಿಲ್ಲ. ಕೊರೊನಾ ಬಂದ ಮೇಲೆ ಮೂರ್ನಾಲ್ಕು ಕೆಜಿ ದಪ್ಪ ಆಗಿದ್ದೇನೆ. ಹೀಗಾಗಿ ಬೊಜ್ಜು ಜಾಸ್ತಿ ಆಗಿ ಹೊಟ್ಟೆ ಬಂದಿದೆ. ಅದಕ್ಕೆ ಪಂಚೆ ಕಳಚಿಕೊಳ್ಳೋಕೆ ಶುರುವಾಗಿದೆ ಎಂದರು.
ಆದರೆ ಜುಬ್ಬ ಉದ್ದ ಇದೆ ತೊಂದರೆ ಇಲ್ಲ ಎಂದು ರಮೇಶ್ ಕುಮಾರ್ ಹೇಳಿದರೆ, ಇಂತಹ ಸಂದರ್ಭಗಳಲ್ಲಿ ರಕ್ಷಣೆ ಕೊಡುತ್ತೆ ಎಂದು ಆರಗ ಜ್ಞಾನೇಂದ್ರ ಕಾಲೆಳೆದರು. ಅದಕ್ಕೆ ಜುಬ್ಬ ಉದ್ದ ಹೊಲಿಸಿಕೊಳ್ಳುವುದು. ಪಂಚೆ
ಕಳಚಿ ಹೋದಾಗ ರಕ್ಷಣೆ ಸಿಗುತ್ತದೆ ಎಂದರು ಸಿದ್ದರಾಮಯ್ಯ. ಒಟ್ಟಿನಲ್ಲಿ ಸಿದ್ದರಾಮಯ್ಯರ ಪಂಚೆ ಪ್ರಸಂಗಕ್ಕೆ ಇಡೀ ಸದನವೇ ಕೆಲ ಕಾಲ ನಗೆಗಡಲಲ್ಲಿ ತೇಲಿತ್ತು.