ಕೇಂದ್ರ ಬಜೆಟ್: ಕಾವೇರಿ- ಪೆನ್ನಾರ್, ಗೋದಾವರಿ- ಕೃಷ್ಣಾ ನದಿ ಜೋಡಣೆ ಯೋಜನೆ ಘೋಷಣೆ
1 min readನವದೆಹಲಿ,ಫೆ.1-ಬಹುದಿನಗಳ ಬೇಡಿಕೆಯ ಯೋಜನೆಗಳಾದ ಕಾವೇರಿ- ಪೆನ್ನಾರ್ ಹಾಗೂ ಗೋದಾವರಿ- ಕೃಷ್ಣಾ ನದಿ ಜೋಡಣೆ ಯೋಜನೆಗಳನ್ನು ಈ ಬಾರಿಯ ಬಜೆಟ್ ನಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ.
ಕಾವೇರಿ – ಪೆನ್ನಾರ್ ನದಿ ಜೋಡಣೆ ಸೇರಿ 5 ನದಿ ಜೋಡಣೆ ಯೋಜನೆಗಳನ್ನು ಘೋಷಿಸಿದ್ದಾರೆ. ದೇಶದಲ್ಲಿ ಒಟ್ಟು 30 ನದಿ ಜೋಡಣೆ ಯೋಜನೆಗಳನ್ನು ಕೇಂದ್ರ ಸರಕಾರ ಕೈಗೊಂಡಿದೆ. ಆ ಪೈಕಿ ಗೋದಾವರಿ- ಕಾವೇರಿ, ಕೆನ್-ಬೆತ್ವಾ, ದಮನ್ ಗಂಗಾ- ಪಿಂಜಲ್, ತಾಪಿ- ನರ್ಮದಾ ಸೇರಿ 5 ಯೋಜನೆಗಳು ಮುಂಚೂಣಿಯಲ್ಲಿವೆ.
ಬಂಗಾಳಕೊಲ್ಲಿ ಸಮುದ್ರದ ಪಾಲಾಗುವ ಗೋದಾವರಿ ನದಿಯ ಹೆಚ್ಚುವರಿ ನೀರನ್ನು ಕೊಳವೆ ಮಾರ್ಗದ ಮೂಲಕ ಕಾವೇರಿ ನದಿಗೆ ಜೋಡಣೆ ಮಾಡುವ ಮಹತ್ವಾಕಾಂಕ್ಷೆಯ ಯೋಜನೆ ಇದಾಗಿದ್ದು, ಸುಮಾರು 60 ಸಾವಿರ ಕೋಟಿ ರೂ. ಮೊತ್ತದ ಪ್ರಾಜೆಕ್ಟ್ ಆಗಿದೆ.
ಮೊದಲು ಆಂಧ್ರದಲ್ಲಿ ಪೊಲಾವರಂ ಅಣೆಕಟ್ಟನ್ನು ನಿರ್ಮಾಣ ಮಾಡಲಾಗುತ್ತದೆ. ಅದರ ಹಿನ್ನೀರನ್ನು ಕೃಷ್ಣಾ ನದಿ, ಪೆನ್ನಾರ್ (ಪಿನಾಕಿನಿ) ನದಿಗಳ ಮೂಲಕ ಕಾವೇರಿಗೆ ಕೊಳವೆ ಮಾರ್ಗದಲ್ಲಿ ಹರಿಸಲಾಗುತ್ತದೆ. ನೀರು ಆವಿಯಾಗುವುದನ್ನು ತಡೆಗಟ್ಟುವ ಉದ್ದೇಶದಿಂದ ಇಲ್ಲಿ ಕಾಲುವೆಗಳ ಬದಲಿಗೆ ವಿಶೇಷ ತಂತ್ರಜ್ಞಾನದ ಸ್ಟೀಲ್ ಕೊಳವೆಗಳ ಮೂಲಕ ನೀರನ್ನು ಹರಿಸುವ ಉದ್ದೇಶ ಹೊಂದಲಾಗಿದೆ. ಈ ನದಿ ಜೋಡಣೆಯಲ್ಲಿ ಎರಡು ಪ್ರಮುಖ ಯೋಜನೆಗಳಿವೆ. ಗೋದಾವರಿ ನದಿಯ ಹೆಚ್ಚುವರಿ ನೀರನ್ನು ಕೃಷ್ಣೆಗೆ ಹರಿಸಿ, ಅಲ್ಲಿಂದೆ ಮುಂದೆ ಪೆನ್ನಾರ್(ಉತ್ತರ ಪಿನಾಕಿನಿ) ನದಿಯಿಂದ ಕಾವೇರಿ ನದಿಗೆ ಹರಿಸುವ ಎರಡು ಯೋಜನೆಗಳು ನದಿ ಜೋಡಣೆಯ ಭಾಗವಾಗಿ
ಮೊದಲನೆಯ ಯೋಜನೆ:
ಪ್ರಾರಂಭಿಕ ಹಂತದಲ್ಲಿ 300 ಟಿಎಂಸಿ ಗೋದಾವರಿ ನದಿ ನೀರನ್ನು ಆಂಧ್ರ ಪ್ರದೇಶದ ನಾಗರ್ಜುನ ಸಾಗರ ಡ್ಯಾಮ್ ಮೂಲಕ ಪೋಲಾವರಂ ಯೋಜನೆಗೆ ಬೆಸೆದು ಬಳಿಕ ಕೃಷ್ಣಾ ನದಿಗೆ ತರುವುದು. ಅಲ್ಲಿಂದ ಮುಂದೆ ಪೆನ್ನಾರ್ ನದಿಗೆ ನಿರ್ಮಿಸಲಾಗಿರುವ ಸೋಮಸಿಲಾ ಅಣೆಕಟ್ಟೆಗೆ ತಂದು ಶೇಖರಿಸಿ, ಅದನ್ನು ಮುಂದೆ ಗ್ರ್ಯಾಂಡ್ ಅಣೆಕಟ್ ಡ್ಯಾಮ್ ಮೂಲಕ ಕಾವೇರಿ ನದಿಗೆ ಸೇರಿಸುವುದು. ಇಲ್ಲಿ ಸ್ಟೀಲ್ ಕೊಳವೆ ಮಾರ್ಗದ ಮೂಲಕವೇ ನೀರು ಹರಿದುಬರಲಿದೆ. ಈ ಪ್ರಾಜೆಕ್ಟ್ನಿಂದ ಕಾವೇರಿ ನದಿಗೆ ಹೆಚ್ಚುವರಿಯಾಗಿ 100 ಟಿಎಂಸಿ ನೀರು ಸೇರಲಿದ್ದು, ಕರ್ನಾಟಕ ಮತ್ತು ತಮಿಳುನಾಡಿಗೆ ಅನುಕೂಲವಾಗಲಿದೆ.
2ನೇ ಯೋಜನೆ:
ಗೋದಾವರಿಯ ಉಪನದಿಯಾಗಿರುವ ಇಂದ್ರಾವತಿ ನದಿ (ಮಧ್ಯ ಭಾರತ) ನೀರನ್ನು ನಾಗರ್ಜುನ ಡ್ಯಾಮ್ಗೆ ತಂದು, ಅಲ್ಲಿಂದ ಮುಂದೆ ಮತ್ತೆ ಸೋಮಸಿಲಾ ಅಣೆಕಟ್ಟೆಗೆ ಸಂಪರ್ಕಿಸಿ, ಬಳಿಕ ಅದನ್ನು ಕರ್ನಾಟಕದ ಸಂಪರ್ಕಕ್ಕೆ ಬಾರದೇ ನೇರವಾಗಿ ಕಾವೇರಿ ನದಿಗೆ ಜೋಡಿಸುವುದು ಎರಡನೇ ಯೋಜನೆ. ಇದರಿಂದ ತಮಿಳುನಾಡಿನ ಹಲವು ಭಾಗದ ರೈತರಿಗೆ ಅನುಕೂಲವಾಗಲಿದೆ.