ಮಳೆಯಿಂದಾಗಿ ಇಟ್ಟಿಗೆಗೂಡಿನಲ್ಲಿ ಎರಡಂತಸ್ತಿನ ಕಟ್ಟಡ ಕುಸಿತ
1 min readಮೈಸೂರು,ಅ.12-ಕಳೆದೆರಡು ದಿನಗಳಿಂದ ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಇಟ್ಟಿಗೆಗೂಡಿನಲ್ಲಿ ಎರಡು ಅಂತಸ್ತಿನ ಮನೆಯೊಂದು ಕುಸಿದು ಬಿದ್ದಿರುವ ಘಟನೆ ನಿನ್ನೆ ನಡೆದಿದೆ.
ಇಟ್ಟಿಗೆಗೂಡಿನ ಪೆರಿಯತಂಬಿ ರಸ್ತೆಯಲ್ಲಿರುವ ಎರಡು ಅಂತಸ್ತಿನ ಮನೆಯೊಂದು ಕುಸಿದು ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಕಟ್ಟಡದ ಒಂದು ಪಾರ್ಶ್ವ ಕುಸಿಯುತ್ತಿದ್ದಂತೆಯೇ ಸ್ಥಳೀಯರು ಪಾಲಿಕೆಗೆ ದೂರವಾಣಿ ಕರೆ ಮಾಡಿದ್ದು, ಸ್ಥಳಕ್ಕೆ ಬಂದ ಅಭಯ್ ರಕ್ಷಣಾ ತಂಡದ ಕಾರ್ಯಕರ್ತರು ಮನೆಯಲ್ಲಿದ್ದ ರಾಣಿಯಮ್ಮ (65), ಪೂಜಾ ಮಣಿ (75) ಎಂಬುವವರನ್ನು ರಕ್ಷಿಸಿದ್ದಾರೆ.
ವಸ್ಥಿ ಹಿಡಿದಿದ್ದ ಪೆರಿಯತಂಬಿ ರಸ್ತೆಯ #1066 ಎರಡಂತಸ್ತಿನ ಮನೆಯು ಭಾಗಶಃ ಕುಸಿದು ಬಿದ್ದಿದೆ. ಇದು ಹಲವು ವರ್ಷಗಳ ಹಿಂದೆ ನಿರ್ಮಿಸಿದ ಕಟ್ಟಡ. ಕೆಲ ವರ್ಷಗಳ ಹಿಂದೆಯೇ ಅಲ್ಲಲ್ಲಿ ಶಿಥಿಲವಾಗಿತ್ತು. ಆದರೂ ಕುಟುಂಬಗಳು ಅಲ್ಲಿ ವಾಸವಾಗಿದ್ದವು. 60 ವರ್ಷದ ರಾಣಿಯಮ್ಮ, 65 ವರ್ಷದ ಪೂಜಾಮಣಿ ಹಾಗೂ 30 ವರ್ಷದ ಸತೀಶ್ ಎಂಬವರು ಈ ಮನೆಯಲ್ಲಿ ವಾಸವಾಗಿದ್ದರು. ಮನೆಯ ಕೆಲವರು ಹೊರ ಹೋಗಿದ್ದರೆ ವೃದ್ಧೆಯರು ಮಾತ್ರ ಮನೆಯಲ್ಲಿದ್ದರು. ಮಳೆಯಿಂದ ಶಿಥಿಲವಾಗಿದ್ದ ಕಟ್ಟಡ ನಿನ್ನೆ ಮಳೆ ಬಂದಾಗ ಕುಸಿದು ಬಿದ್ದಿದೆ. ಆಗ ಮನೆಯಲ್ಲಿದ್ದವರು ಕೂಡಲೇ ಹೊರ ಬಂದಿದ್ದಾರೆ. ಇದನ್ನು ಕಂಡ ನೆರೆ ಹೊರೆಯವರು ಪಾಲಿಕೆಗೆ ಮಾಹಿತಿ ನೀಡಿದ್ದು ರಕ್ಷಣೆ ಮಾಡಲಾಗಿದ್ದು, ಅಭಯ ತಂಡದ ಡಿ.ಮಂಜುನಾಥ್, ಸಿದ್ದರಾಜು, ಭುವನ್, ಸೂರಿ ಅಲ್ಲಿದ್ದ ವಸ್ತುಗಳನ್ನು ತೆಗೆದಿದ್ದಾರೆ.
ಹಳೆಯ ಮನೆ ಕುಸಿತದಿಂದ ಯಾವುದೇ ಹಾನಿಯಾಗಿಲ್ಲ. ಆದರೂ ಅಭಯ ತಂಡ ಈಗಾಗಲೇ ತೆರವು ಕಾರ್ಯಾಚರಣೆ ನಡೆಸಿದೆ. ಮನೆಯ ಮಾಲೀಕತ್ವದ ಮಾಹಿತಿ ಕಲೆ ಹಾಕಲಾಗುತ್ತಿದೆ.