ಮುಂಬರುವ ಚುನಾವಣೆಯಲ್ಲಿ 30-35 ಕ್ಷೇತ್ರದಲ್ಲಿ ಮಹಿಳೆಯರಿಗೆ ಟಿಕೆಟ್: ಎಚ್.ಡಿ.ಕುಮಾರಸ್ವಾಮಿ

1 min read

ರಾಮನಗರ,ಸೆ.29-ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ 30-35 ಕ್ಷೇತ್ರದಲ್ಲಿ ಮಹಿಳೆಯರಿಗೆ ಟಿಕೆಟ್ ಮೀಸಲಿಡುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಬಿಡದಿಯಲ್ಲಿ ನಡೆಯುತ್ತಿರುವ ಜೆಡಿಎಸ್ ಸಂಘಟನಾ ಕಾರ್ಯಾಗಾರದ ಮೂರನೇ ದಿನವಾದ ಇಂದು ಜೆಡಿಎಸ್ ಮಹಿಳಾ ಘಟಕದ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮಹಿಳೆಯರಿಗೂ ಹೆಚ್ಚಿನ ಶಕ್ತಿ ತುಂಬಲು ಈ ಬಾರಿ 30-35 ಸೀಟನ್ನು ಮಹಿಳೆಯರಿಗೆ ಕೊಡ್ತೀವಿ. ಈಗಾಗಲೇ ಮೊದಲ ಹಂತದಲ್ಲಿ 7-8 ಜನ ಅಭ್ಯರ್ಥಿಗಳನ್ನ ಆಯ್ಕೆ ಮಾಡಿದ್ದೇವೆ ಎಂದರು.
ಚುನಾವಣೆಯಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಕೊಡಬೇಕು ಅಂತ ದೇವೇಗೌಡರು ಧ್ವನಿ ಎತ್ತಿದ್ದರು. ಆದರೆ ಕಾಂಗ್ರೆಸ್- ಬಿಜೆಪಿ ಸರ್ಕಾರ ಮೀಸಲಾತಿ ಜಾರಿ ಮಾಡಲಿಲ್ಲ. ಕರ್ನಾಟಕದಿಂದಲೇ ಮಹಿಳಾ ಮೀಸಲಾತಿಗೆ ಧ್ವನಿ ಎತ್ತುವ ಕೆಲಸ ನಾವು ಮಾಡ್ತೀವಿ. 2023ರಲ್ಲಿ ಪಕ್ಷ ಅಧಿಕಾರಕ್ಕೆ ಬಂದ್ರೆ ಶೇ.33 ಮೀಸಲಾತಿ ವಿಧೇಯಕಕ್ಕೆ ಜೀವ ತುಂಬುತ್ತೇವೆ ಎಂದು ಹೇಳಿದರು.
ಬಿಜೆಪಿ ಮತ್ತು ಕಾಂಗ್ರೆಸ್ ಗೆ ಹೋಲಿಸಿದಲ್ಲಿ ನಮ್ಮ ಮಹಿಳಾ ಘಟಕ ಸ್ವಲ್ಪ ಹಿಂದೆ ಉಳಿದಿದೆ. ಇದನ್ನು ಸರಿ ಮಾಡೋ ಕೆಲಸ ಮಾಡ್ತೀವಿ. ಮಹಿಳಾ ಘಟಕಕ್ಕೆ ಹೆಚ್ಚಿನ ಶಕ್ತಿ ತುಂಬುವ ಕೆಲಸವನ್ನು ಈ ಕಾರ್ಯಾಗಾರದಿಂದಲೇ ಪ್ರಾರಂಭ ಮಾಡ್ತೀವಿ. ಬೂತ್ ಮಟ್ಟದಿಂದ ಮಹಿಳಾ ಘಟಕಕ್ಕೆ ಶಕ್ತಿ ತುಂಬುವ ಟಾಸ್ಕ್ ಕೊಡ್ತೀವಿ ಎಂದರು.
ಪ್ರತಿ ಕ್ಷೇತ್ರದಲ್ಲಿ 100 ಕುಟುಂಬಗಳ ಸಮಸ್ಯೆಗೆ ಪರಿಹಾರ ನೀಡುವ ಜವಾಬ್ದಾರಿಯನ್ನ ಪ್ರತಿ ಮಹಿಳಾ ನಾಯಕಿಯರಿಗೆ ನೀಡಲಾಗುತ್ತೆ ಎಂದರು.
ಮಾಜಿ ಪ್ರಧಾನಿ ದೇವೇಗೌಡ, ಶಾಸಕಿ ಅನಿತಾ ಕುಮಾರಸ್ವಾಮಿ ಹಾಗೂ ಮಹಿಳಾ ಘಟಕದ ಪದಾಧಿಕಾರಿಗಳು ಉಪಸ್ಥಿತರಿದ್ದರು.

About Author

Leave a Reply

Your email address will not be published. Required fields are marked *