ಚಿಕ್ಕಮಗಳೂರು: ದಯಾಮರಣ ಕೋರಿ ರಾಷ್ಟ್ರಪತಿಗೆ ಸಾವಿರ ಮಂದಿಯಿಂದ ಪತ್ರ
1 min readಚಿಕ್ಕಮಗಳೂರು,ಜ.13-ಕಾಫಿ ನಾಡಿನ ಸಾವಿರ ಮಂದಿ ದಯಾಮರಣ ಕೋರಿ ರಾಷ್ಟ್ರಪತಿ ರಾಮನಾಥ್ ಕೋವಿಂದ್‍ಗೆ ಪತ್ರ ಬರೆದಿದ್ದಾರೆ.
ಭದ್ರಾ ಹುಲಿ ಯೋಜನೆ ಹಾಗೂ ಬಫರ್ ಝೋನ್‍ನಿಂದ ನಮ್ಮ ಬದುಕು ಬೀದಿಗೆ ಬೀಳುವಂತಾಗಿದೆ. ಯೋಜನೆ ಜಾರಿಗೆ ಬರುವ ಮುನ್ನ ನಮಗೆ ದಯಾಮರಣಕ್ಕೆ ಅನುಮತಿ ನೀಡಿ ಎಂದು ಪತ್ರ ಬರೆದಿದ್ದಾರೆ. ಈಗ ಒಂದು ಸಾವಿರ ಜನ ಪತ್ರ ಬರೆದಿದ್ದಾರೆ. ಮುಂದಿನ ದಿನಗಳಲ್ಲಿ ಐದು ಸಾವಿರ ಜನ ಪತ್ರ ಬರೆಯಲು ನಿರ್ಧರಿಸಿದ್ದಾರೆ.
ಭದ್ರಾ ಹುಲಿ ಯೋಜನೆ ಹಾಗೂ ಬಫರ್ ಝೋನ್ ನೂರಾರು ಹಳ್ಳಿಯ ಜನರಿಗೆ ಮರಣಶಾಸನವಾಗಿದೆ. ಹಾಗಾಗಿ ಯೋಜನೆ ಜಾರಿಗೆ ಬರುವ ಮುನ್ನ ದಯಾಮರಣಕ್ಕೆ ಅನುಮತಿ ನೀಡುವಂತೆ ಮನವಿ ಮಾಡಿದ್ದಾರೆ.
ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ತಾಲೂಕಿನ 10ಕ್ಕೂ ಹೆಚ್ಚು ಹಳ್ಳಿಯ ಮಂದಿ ಪತ್ರ ಬರೆದಿದ್ದಾರೆ. ಎನ್.ಆರ್.ಪುರ ತಾಲೂಕಿನ ಸಾಲೂರು, ಹೊನ್ನಂಗಿ, ಬೆಳ್ಳಂಗಿ, ಅಳೇಹಳ್ಳಿ, ಆಡುವಳ್ಳಿ, ಕೊಳಲೆ, ಮುದುಗುಣಿ, ಬಾಳೆಗದ್ದೆ, ನಂದಿಗಾವೆ, ಬೈರಾಪುರ ಸೇರಿದಂತೆ ವಿವಿಧ ಹಳ್ಳಿಗಳ ಸಾವಿರಕ್ಕೂ ಹೆಚ್ಚು ಜನ ರಾಷ್ಟ್ರಪತಿಗೆ ದಯಾಮರಣಕ್ಕಾಗಿ ಪತ್ರ ಬರೆದಿದ್ದಾರೆ.
ಈ ಹಿಂದೆ ಕೂಡ ಸರ್ಕಾರ ವಿವಿಧ ಕಾರಣಗಳಿಂದ ಜನರನ್ನ ಒಕ್ಕಲೆಬ್ಬಿಸಿತ್ತು. ಆಗ ಇಲ್ಲಿಗೆ ಬಂದು ಬದುಕು ಕಟ್ಟಿಕೊಂಡಿದ್ದೇವೆ. ಈಗ ಇಲ್ಲಿಂದ ಮತ್ತೆ ಒಕ್ಕಲೆಬ್ಬಿಸಿದರೆ ಎಲ್ಲಿಗೆ ಹೋಗೋದು ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.