ನದಿ ಜೋಡಣೆ ವಿಷಯ: ರಾಜ್ಯ ಸರ್ಕಾರ ಕೂಡಲೇ ಸರ್ವಪಕ್ಷ ಸಭೆ ಕರೆಯಬೇಕು; ಸಿದ್ದರಾಮಯ್ಯ

1 min read

ಬೆಂಗಳೂರು,ಫೆ.4- ಕೇಂದ್ರ ಸರ್ಕಾರ ರಾಜ್ಯದ ಅಧಿಕಾರವನ್ನು ಮೊಟಕುಗೊಳಿಸಲು ಹೊರಟಿದೆ. ಆದರೂ ಸರ್ಕಾರ ಮಾತನಾಡದೆ ಸುಮ್ಮನಿದೆ. ರಾಜ್ಯ ಸರ್ಕಾರ ಕೂಡಲೇ ಸರ್ವಪಕ್ಷ ಸಭೆ ಕರೆಯಬೇಕು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದರು.

ಇಂದು ಮಾಧ್ಯಮ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಬಜೆಟ್ ಮಂಡಿಸಿ ಮೂರು ದಿನ ಆದರೂ ರಾಜ್ಯದ ಯಾವೊಬ್ಬ ಸಂಸದ, ಬಿಜೆಪಿ ಸರ್ಕಾರದ ಸಚಿವರು, ಶಾಸಕರು, ಮುಖ್ಯಮಂತ್ರಿಗಳು ಯಾರೂ ಮಾತನಾಡಿಲ್ಲ. ಇವರು ರಾಜ್ಯದ ಹಿತರಕ್ಷಣೆ ಮಾಡುತ್ತಾರ? ರಾಜ್ಯ ಸರ್ಕಾರ ಕೂಡಲೇ ಸರ್ವಪಕ್ಷ ಸಭೆ ಕರೆಯಬೇಕು ಎಂದು ಆಗ್ರಹಿಸಿದರು.

ಸರ್ಕಾರ ನದಿ ಜೋಡಣೆ ವಿಷಯದಲ್ಲಿ ತನ್ನ ನಿಲುವು ಹೇಳಲಿ. ರಾಜ್ಯಕ್ಕೆ ಇದರಿಂದ ಲಾಭ ಆಗುತ್ತಾ ಇಲ್ಲವೋ? ನಷ್ಟವಾಗುವುದಾದರೆ ಏನೆಲ್ಲಾ ನಷ್ಟವಾಗುತ್ತೆ? ಈ ಎಲ್ಲಾ ವಿಚಾರಗಳು ಜನರಿಗೆ ಗೊತ್ತಾಗಬೇಕು. ಸಚಿವರಾದ ಈಶ್ವರಪ್ಪ ಮತ್ತು ಆರ್.ಅಶೋಕ್ ಅವರ ಮಾತು ಕೇಳಿದರೆ ಸಂಪುಟದಲ್ಲಿ ಈ ಬಗ್ಗೆ ಚರ್ಚೆಯೇ ನಡೆದಿಲ್ಲ ಎಂಬುದು ಗೊತ್ತಾಗುತ್ತೆ. ಇದು ಕೇಂದ್ರ ಸರ್ಕಾರದ ಏಕಮುಖ ನಿರ್ಧಾರ. ಒಕ್ಕೂಟ ವ್ಯವಸ್ಥೆಯಲ್ಲಿ ನಾವು ಕೇಂದ್ರದ ಗುಲಾಮರಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೃಷಿ ಕಾಯ್ದೆ ರಾಜ್ಯಪಟ್ಟಿಯ ವಿಷಯ. ಇದನ್ನು ರಾಜ್ಯಗಳ ಮೇಲೆ ಹೇರಲು ಹೊರಟಿದ್ದು ಸರ್ವಾಧಿಕಾರಿ ಮನಸ್ಥಿತಿ ಆಗುತ್ತೆ. ಇದಕ್ಕೆ ಅವಕಾಶ ಮಾಡಿಕೊಡಬಾರದು. ನೆಲ, ಜಲ, ಭಾಷೆ, ಗಡಿಗಳ ವಿಚಾರದಲ್ಲಿ ನಾವು ರಾಜಕಾರಣ ಮಾಡಲ್ಲ. ಕರ್ನಾಟಕವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ನದಿ ಜೋಡಣೆ ಯೋಜನೆ ಘೋಷಣೆ ಮಾಡಿರುವುದು ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾಗಿದೆ. ಇದರಿಂದ ರಾಜ್ಯ ಸರ್ಕಾರ ಸರ್ವಪಕ್ಷ ಸಭೆ ಕರೆದು, ಚರ್ಚಿಸಿ, ಒಮ್ಮತದ ವಿರೋಧವನ್ನು ಕೇಂದ್ರಕ್ಕೆ ತಿಳಿಸಬೇಕು ಎಂದು ಆಗ್ರಹಿಸುತ್ತೇನೆ ಎಂದರು.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ ಮುಂಗಡ ಪತ್ರದಲ್ಲಿ ದಕ್ಷಿಣದ ನದಿಗಳನ್ನು ಜೋಡಣೆ ಮಾಡುತ್ತೇವೆ, ಇದಕ್ಕಾಗಿ ಸುಮಾರು 46,000 ಕೋಟಿ ರೂಪಾಯಿ ಯೋಜನೆಗೆ ಇಡುತ್ತೇವೆ ಎಂದು ಹೇಳಿದ್ದಾರೆ. ಇದು ಕಾರ್ಯಸಾಧುವಾದ ಯೋಜನೆಯಲ್ಲ. ನಿರ್ಮಲಾ ಸೀತಾರಾಮನ್ ಅವರು ತಮಿಳುನಾಡಿನವರಾಗಿದ್ದ ಕಾರಣಕ್ಕೆ ಈ ಯೋಜನೆ ಪ್ರಸ್ತಾಪ ಮಾಡಿರಬಹುದು. ನಮ್ಮ ರಾಜ್ಯದ ಜೊತೆ ಚರ್ಚಿಸಿದಂತೆ ಕಾಣುತ್ತಿಲ್ಲ ಎಂದು ಹೇಳಿದರು.

ಕೃಷ್ಣ, ಗೋಧಾವರಿ, ತೆನ್ನಾರ್ ಮತ್ತು ಕಾವೇರಿ ನದಿಗಳ ಜೋಡಣೆ ಪ್ರಸ್ತಾಪವಿದೆ. ರಾಷ್ಟ್ರೀಯ ಜಲ ಅಭಿವೃದ್ಧಿ ಏಜೆನ್ಸಿ ಯಲ್ಲಿ ಚರ್ಚಿಸಲಾಗಿದೆ, ಇದರಿಂದ 347 ಟಿ.ಎಂ.ಸಿ ನೀರು ಸಿಗಲಿದೆ, ಇದರಿಂದ ದಕ್ಷಿಣ ರಾಜ್ಯಗಳಿಗೆ ನೀರು ಕೊಡಲು ಸಾಧ್ಯ ಎಂಬುದು ಅವರ ಆಲೋಚನೆ. ರಾಜಸ್ಥಾನ ಬಿಟ್ಟರೆ ದೇಶದಲ್ಲಿ ಹೆಚ್ಚು ಒಣ ಭೂಮಿ ಇರುವುದು ಕರ್ನಾಟಕದಲ್ಲಿ. ಶೇ. 70 ಕೃಷಿ ಭೂಮಿ ಮಳೆ ಆಶ್ರಿತ ಪ್ರದೇಶವಾಗಿದೆ. ನದಿಗಳ ಜೋಡಣೆ ಇಮನದ ಹೆಚ್ಚು ನೀರು ತಮಿಳುನಾಡಿಗೆ ಹೋಗುತ್ತೆ. ರಾಜ್ಯಗಳ ಸಮ್ಮತಿ ಪಡೆಯದೆ, ಚರ್ಚೆ ನಡೆಸದೆ ಯೋಜನೆ ಜಾರಿ ಮಾಡಲು ಹೊರಟರೆ ರಾಜ್ಯಗಳ ನಡುವೆ ಜಲ ವಿವಾದ ಉದ್ಭವವಾಗಲಿದೆ. ದಕ್ಷಿಣ ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಸರ್ವಪಕ್ಷಗಳ ಸಭೆ ಕರೆದು ಯಾವ ನದಿಯಿಂದ ಎಷ್ಟು ನೀರು ಸಿಗುತ್ತದೆ, ಯಾವ ರಾಜ್ಯಗಳಿಗೆ ಎಷ್ಟು ನೀರು ಸಿಗುತ್ತದೆ ಎಂಬೆಲ್ಲ ಮಾಹಿತಿಯನ್ನು ನೀಡಬೇಕು. ಒಕ್ಕೂಟ ವ್ಯವಸ್ಥೆಯಲ್ಲಿ ಮಾಹಿತಿ ಪಡೆಯುವುದು ಪ್ರತಿ ರಾಜ್ಯದ ಹಕ್ಕು ಎಂದರು.

ಏಕಮುಖವಾದ ನಿರ್ಧಾರ ಮಾಡಿ, ರಾಜ್ಯಗಳ ಮೇಲೆ ಹೇರುವ ಪ್ರಯತ್ನ ಸರ್ವಾಧಿಕಾರಿ ಧೋರಣೆಯಾಗುತ್ತದೆ. ಇದನ್ನು ನಾನು ಖಂಡಿಸುತ್ತೇನೆ. ಎರಡು ಹಂತದಲ್ಲಿ ಯೋಜನೆ ಜಾರಿ ಮಾಡ್ತೇವೆ, ಮೊದಲ ಹಂತದಲ್ಲಿ ಕರ್ನಾಟಕಕ್ಕೆ ಅನುಕೂಲ ಆಗಲ್ಲ, ಎರಡನೇ ಹಂತದಲ್ಲಿ ಸ್ವಲ್ಪ ಅನುಕೂಲ ಆಗಬಹುದು ಎಂದು ಕೇಂದ್ರ ಸರ್ಕಾರ ಹೇಳುತ್ತೆ. ನನ್ನ ಪ್ರಕಾರ ಶೇ. 90 ತಮಿಳುನಾಡಿಗೆ ಅನುಕೂಲವಾಗುತ್ತೆ. 1978 ರಲ್ಲಿ ಮೊರಾರ್ಜಿ ದೇಸಾಯಿ ಅವರು ಗಂಗಾ-ಕಾವೇರಿ ನದಿ ಜೋಡಣೆ ಮಾಡುತ್ತೇವೆ ಎಂದಿದ್ದರು. ಒಂದು ಹಿಮಾಲಯದಲ್ಲಿ ಹುಟ್ಟುವ ನದಿ ಆಗಿರುವುದರಿಂದ ಅನುಕೂಲವಾಗುತ್ತೆ. ವಾಜಪೇಯಿ ಅವರು ಇದೇ ಯೋಜನೆಯನ್ನು ಪ್ರಸ್ತಾಪ ಮಾಡಿದರು, ಆದರೆ ಈ ಬಗ್ಗೆ ಕ್ರಮ ಕೈಗೊಂಡಿಲ್ಲ. ಮತ್ತೆ ಈಗ ಅದೇ ಸುಳ್ಳನ್ನು ಹೇಳಲು ಆರಂಭ ಮಾಡಿದ್ದಾರೆ. ಬಿಜೆಪಿಯವರ ಸುಳ್ಳುಗಳಿಗೆ ಕೆಲವು ಮಾಧ್ಯಮಗಳು ಬೆಂಬಲಕ್ಕೆ ನಿಂತಿವೆ ಎಂದು ವಾಗ್ದಾಳಿ ನಡೆಸಿದರು.

ಆರ್ಥರ್ ಕಾಟನ್ ಎಂಬ ಇಂಜಿನಿಯರ್ ಹಿಮಾಲಯದ ನದಿಗಳನ್ನು ದಕ್ಷಿಣಕ್ಕೆ ತಿರುಗಿಸಬೇಕು ಎಂದು ಹೇಳಿದ್ದರು. ಮಾಜಿ ಜಲಸಂಪನ್ಮೂಲ ಸಚಿವರಾದ ಕೆ.ಎಲ್ ರಾವ್ ಅವರು ಸಹ ಈ ವಿಚಾರ ಪ್ರಸ್ತಾಪ ಮಾಡಿದ್ದರು. ಹಿಮಾಲಯದಲ್ಲಿ ಹುಟ್ಟುವ ನದಿಗಳು ವರ್ಷವಿಡೀ ತುಂಬಿ ಹರಿಯುವುದರಿಂದ ದಕ್ಷಿಣದ ರಾಜ್ಯಗಳ ನದಿಗಳಿಗೆ ಗಂಗಾ, ಗೋಧಾವರಿ ನದಿ ಜೋಡಣೆಯಿಂದ ಲಾಭ ಆಗಲಿದೆ ಎಂಬ ಲೆಕ್ಕಾಚಾರ ಇತ್ತು. ರಾಜಕೀಯ ಲಾಭ ನಷ್ಟದ ಲೆಕ್ಕಾಚಾರ ಹಾಕಿ ಸರ್ಕಾರ ನಡೆಸಲು ಹೋಗಬಾರದು. ಜಲ ವಿವಾದ ಸೃಷ್ಟಿಯಾದರೆ ರಾಜ್ಯಗಳ ನಡುವೆ ವೈರತ್ವ ಹುಟ್ಟಲಿದೆ. ಕರ್ನಾಟಕ ಸರ್ಕಾರದ ಜೊತೆ ಚರ್ಚೆ ನಡೆಸದೆ ಯೋಜನೆ ಘೋಷಣೆ ಮಾಡಿದ್ದು ಸರಿಯಲ್ಲ. ಈ ಯೋಜನೆಗೆ ಆಸಕ್ತಿ ತೋರಿಸಿರುವ ನಿರ್ಮಲಾ ಸೀತಾರಾಮನ್ ಮೇಕೆದಾಟು ಯೋಜನೆ ಕಡೆಗೂ ತೋರಿಸಲಿ. ಒಂದು ಪರಿಸರ ಅನುಮತಿ ಪತ್ರ ಕೊಡಲು ಸಾಧ್ಯವಿಲ್ಲವ? ಕೇಂದ್ರ ಸರ್ಕಾರ ರಾಜ್ಯದ ಬಗ್ಗೆ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಇದೇ ಕಾರಣಕ್ಕೆ ನಾನು ವಿರೋಧ ಮಾಡುತ್ತಿರುವುದು ಎಂದರು.

ಹಿಜಾಬ್ ಧರಿಸುವುದರಿಂದ ಏನು ತೊಂದರೆ?

ಪಿ.ಯು.ಸಿ ಹಂತದಲ್ಲಿ ಸಮವಸ್ತ್ರ ಕಡ್ಡಾಯಗೊಳಿಸಬೇಕು ಎಂದು ಎಲ್ಲೂ ಸರ್ಕಾರ ಹೇಳಿಲ್ಲ. ಕುಂದಾಪುರದ ಸರ್ಕಾರಿ ಕಾಲೇಜೊಂದರ ಪ್ರಾಂಶುಪಾಲರು ಹಿಜಾಬ್ ಧರಿಸಿ ಬಂದ ಮುಸ್ಲಿಂ ವಿದ್ಯಾರ್ಥಿಗಳಿಗೆ ಕಾಲೇಜು ಗೇಟ್ ಹಾಕಿ ಪ್ರವೇಶ ನಿರಾಕರಿಸಿರುವುದು ವ್ಯಕ್ತಿಯೊಬ್ಬನ ಮೂಲಭೂತ ಹಕ್ಕಿನ ಉಲ್ಲಂಘನೆಯಾಗಿದೆ. ಹಿಜಾಬ್ ಧರಿಸುವುದು ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದಿದೆ, ಇದರಿಂದ ಇತರರಿಗೆ ಏನು ತೊಂದರೆ? ಮುಸ್ಲಿಂ ಹೆಣ್ಣು ಮಕ್ಕಳನ್ನು ವಿದ್ಯೆಯಿಂದ ವಂಚಿತಗೊಳಿಸುವ ಕುಟಿಲ ಪ್ರಯತ್ನವಿದು. ಕಾಲೇಜಿನ ಪ್ರಾಂಶುಪಾಲರು ಗೇಟ್ ನಲ್ಲಿ ಮಕ್ಕಳನ್ನು ತಡೆಯುವುದು ಅಮಾನವೀಯ. ಸಮವಸ್ತ್ರ ಕಡ್ಡಾಯ ಮಾಡಿ ಎಂದು ಹೇಳಲು ರಘುಪತಿ ಭಟ್ ಯಾರು? ಸರ್ಕಾರ ಇಂಥದಕ್ಕೆ ಕುಮ್ಮಕ್ಕು ಕೊಡಬಾರದು. ಪ್ರಾಂಶುಪಾಲರನ್ನು ವಜಾ ಮಾಡಬೇಕು. ಇದು ಮಾನವೀಯತೆ ಅಲ್ಲ ಎಂದು ಕಿಡಿಕಾರಿದರು.

About Author

Leave a Reply

Your email address will not be published. Required fields are marked *