ಐಟಿ ದಾಳಿಯಲ್ಲಿ ರಾಜಕೀಯ ವಾಸನೆ ಬರುತ್ತಿದೆ: ಸಿದ್ದರಾಮಯ್ಯ
1 min readಮೈಸೂರು,ಅ.9 –ಯಡಿಯೂರಪ್ಪ ಆಪ್ತರ ಮೇಲಿನ ಐಟಿ ದಾಳಿಯಲ್ಲಿ ರಾಜಕೀಯ ಇದೆ. ನನಗಂತೂ ಇದರಲ್ಲಿ ರಾಜಕೀಯ ವಾಸನೆ ಬರುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಐಟಿ ದಾಳಿಯಲ್ಲಿ ರಾಜಕೀಯ ಇದೆ ಎಂಬುದು ನನ್ನ ಅನುಮಾನ. ಯಡಿಯೂರಪ್ಪ ಅವರ ಆಪ್ತರನ್ನೇ ಸೆಲೆಕ್ಟ್ ಮಾಡಿಕೊಂಡು ದಾಳಿ ಮಾಡಿರೋದು. ಸಾಕಷ್ಟು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ನನಗಂತೂ ಇದರಲ್ಲಿ ರಾಜಕೀಯ ವಾಸನೆ ಬರುತ್ತಿದೆ ಎಂದರು.
ಉಪಚುನಾವಣೆಯಲ್ಲಿ ಎರಡೂ ಕ್ಷೇತ್ರದಲ್ಲೂ ಕಾಂಗ್ರೆಸ್ ಗೆಲ್ಲಲಿದೆ. ಚುನಾವಣೆ ಪಾರದರ್ಶಕವಾಗಿಯೇ ನಡೆಯಲಿದೆ ಎನ್ನುವ ನಂಬಿಕೆ. ಪ್ರಜಾಪ್ರಭುತ್ವದಲ್ಲಿನಂಬಿಕೆ ಇಟ್ಟುಕೊಂಡು ಚುನಾವಣೆಗೆ ಹೋಗೋದು ಮುಂದೆ ನೋಡೋಣ. ಉಪಚುನಾವಣೆ ಫಲಿತಾಂಶ ಭವಿಷ್ಯದ ಚುನಾವಣೆ ದಿಕ್ಸೂಚಿ ಅಂತ ಹೇಳುವುದಿಲ್ಲ. ಹಾಗೇ ಹೇಳುವುದಕ್ಕೂ ಸಾಧ್ಯವಿಲ್ಲ. ಆದರೆ ಈ ಫಲಿತಾಂಶದಿಂದ ಈ ಸರ್ಕಾರದ ಮೇಲೆ ಜನರ ಅಭಿಪ್ರಾಯ ಏನು ಎಂಬುದು ಗೊತ್ತಾಗುತ್ತೆ ಎಂದರು.
ಬಿಜೆಪಿ ಸರ್ಕಾರದಿಂದ ಜನ ಬೇಸತ್ತಿದ್ದಾರೆ. ರಾಜ್ಯ ಹಾಗೂ ಕೇಂದ್ರ ಎರಡರಲ್ಲೂ ಬಿಜೆಪಿ ಇದ್ದು ಸ್ವರ್ಗ ಮಾಡುತ್ತೇವೆ ಅಂದಿದ್ದರು, ಈಗ ನರಕ ಮಾಡಿದ್ದಾರೆ. ಜನ ಸಾಮಾನ್ಯರ ಬದುಕು ಕಷ್ಟವಾಗಿದೆ ಎಂದು ವಾಗ್ದಾಳಿ ನಡೆಸಿದರು.
ಜೆಡಿಎಸ್ ನವರು ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಜೆಡಿಎಸ್ ನವರು ಒಳ್ಳೆಯ ಉದ್ದೇಶದಿಂದ ಅಲ್ಪಸಂಖ್ಯಾತರಿಗೆ ಟಿಕೆಟ್ ಕೊಟ್ಟಿಲ್ಲ. ಅಲ್ಪಸಂಖ್ಯಾತ ಅಭ್ಯರ್ಥಿ ಗೆಲ್ಲಿಸಿಕೊಳ್ಳಬೇಕು ಅನ್ನುವ ಆಸಕ್ತಿ ಜೆಡಿಎಸ್‌ಗೆ ಇಲ್ಲ. ಒಂದು ವೇಳೆ ಗೆಲ್ಲಿಸಲೇಬೇಕು ಅನ್ನುವ ಉದ್ದೇಶವಿದ್ದರೆ ರಾಮನಗರ, ಚನ್ನಪಟ್ಟಣ, ಹಾಸನದಲ್ಲಿ ಟಿಕೆಟ್ ಕೊಡಲಿ. ಮೈಸೂರು ಭಾಗದಲ್ಲಿ ಟಿಕೆಟ್ ಕೊಡಲ್ಲ, ಉತ್ತರ ಕರ್ನಾಟಕದಲ್ಲಿ ಟಿಕೆಟ್ ಕೊಡ್ತಾರೆ ಅಂದರೆ ಏನರ್ಥ? ಆದರೆ ಜನ ಬುದ್ದಿವಂತರಿದ್ದಾರೆ. ಇಂತಹ ತಂತ್ರಗಳು ಜನರಿಗೆ ಅರ್ಥವಾಗುತ್ತದೆ ಎಂದರು.
ರಾಷ್ಟ್ರ ರಾಜಕಾರಣ ಕುರಿತು ಪ್ರತಿಕ್ರಿಯಿಸಿದ ಸಿದ್ದು, ನಾನು ರಾಷ್ಟ್ರ ರಾಜಕಾರಣಕ್ಕೆ ಹೋಗುವುದು ಊಹಾಪೋಹ. ಸೋನಿಯಾ ಗಾಂಧಿಯವರೂ ರಾಷ್ಟ್ರ ರಾಜಕಾರಣಕ್ಕೆ ಕರೆದಿಲ್ಲ. ಆ ಬಗ್ಗೆ ಚರ್ಚೆಯೂ ಆಗಿಲ್ಲ. ಸುಮ್ಮನೆ ಊಹಾಪೋಹದ ಚರ್ಚೆಗಳು ಬೇಡ. ನಾನು ಎಂದೂ ಆ ಯೋಚನೆ ಮಾಡಿಯೂ ಇಲ್ಲ. ಆ ಬಗ್ಗೆ ಚರ್ಚೆ ಬೇಡ, ನಾನು ರಾಜ್ಯ ರಾಜಕಾರಣದಲ್ಲೇ ಸಕ್ರಿಯನಾಗಿರುತ್ತೇನೆ. ನ್ಯಾಷನಲ್ ಪಾಲಿಟಿಕ್ಸ್ ಗೆ ಹೋಗಲ್ಲ ಎಂದು ಸ್ಪಷ್ಟಪಡಿಸಿದರು.