ಕೇಂದ್ರ ಸರ್ಕಾರಕ್ಕೆ ಮುಖಭಂಗ: ಕರ್ನಾಟಕಕ್ಕೆ ಆಮ್ಲಜನಕ ಪೂರೈಕೆ ಆದೇಶ ಎತ್ತಿ ಹಿಡಿದ ಸುಪ್ರೀಂ ಕೋರ್ಟ್

1 min read

ನವದೆಹಲಿ: ಕರ್ನಾಟಕಕ್ಕೆ 1,200 ಮೆಟ್ರಿಕ್ ಟನ್ ಆಮ್ಲಜನಕವನ್ನು ನೀಡಲು ಹೈಕೋರ್ಟ್ ನೀಡಿದ್ದ ಆದೇಶದ ವಿರುದ್ಧ ಕೇಂದ್ರವು ಸಲ್ಲಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ತಿರಸ್ಕರಿಸಿದೆ.

ಆಮ್ಲಜನಕ ವಿತರಣೆಗೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್‌ ಕೇಂದ್ರಕ್ಕೆ ನೀಡಿದ ಆದೇಶದ ವಿಷಯದಲ್ಲಿ ಮಧ್ಯಪ್ರವೇಶಿಸಲು ಸುಪ್ರೀಂ ಕೋರ್ಟ್‌ ನಿರಾಕರಿಸಿದೆ. ಹೈಕೋರ್ಟ್‌ ತನ್ನ ಅಧಿಕಾರವನ್ನು ಸಮರ್ಥವಾಗಿ ಬಳಸಿದೆ ಎಂದು ನ್ಯಾ. ಚಂದ್ರಚೂಡ್‌ ನೇತೃತ್ವದ ಸುಪ್ರೀಂ ಪೀಠ ಅಭಿಪ್ರಾಯ ಪಟ್ಟಿದೆ.

ಕೊರೋನಾ ರೋಗಿಗಳಿಗೆ ಚಿಕಿತ್ಸೆ ನೀಡಲು ಕರ್ನಾಟಕದ ದೈನಂದಿನ ದ್ರವ ವೈದ್ಯಕೀಯ ಆಮ್ಲಜನಕದ ಹಂಚಿಕೆಯನ್ನು 965 ಮೆಟ್ರಿಕ್ ಟನ್ ನಿಂದ 1200 ಮೆಟ್ರಿಕ್ ಟನ್ ಗೆ ಹೆಚ್ಚಿಸುವಂತೆ ಹೈಕೋರ್ಟ್ ನೀಡಿದ್ದ ಆದೇಶದ ವಿರುದ್ಧ ಕೇಂದ್ರ ಸರ್ಕಾರವು ಗುರುವಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಕೇಂದ್ರವನ್ನು ಪ್ರತಿನಿಧಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಕರ್ನಾಟಕಕ್ಕೆ 965 ಮೆ.ಟನ್ ಆಮ್ಲಜನಕವನ್ನು ಪೂರೈಸಲಾಗುತ್ತಿದೆ ಮತ್ತು ಅದನ್ನು ಹೆಚ್ಚಿಸುವ ಆದೇಶವನ್ನು ತುರ್ತಾಗಿ ತಡೆಹಿಡಿಯಬೇಕಾಗಿದೆ ಎಂದು ಹೇಳಿದ್ದರು.

ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಕರ್ನಾಟಕ ಹೈಕೋರ್ಟ್‌ ನೀಡಿರುವ ನಿರ್ದೇಶನಗಳಲ್ಲಿ ಯಾವುದೇ ತಪ್ಪಿಲ್ಲ. ರಾಜ್ಯದಲ್ಲಿ ಆಮ್ಲಜನಕದ ಬೇಡಿಕೆ ಮತ್ತು ಪೂರೈಕೆಯನ್ನು ಪರಿಶೀಲಿಸುವಂತೆ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. ಈ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರದ ಪ್ರಾತಿನಿಧ್ಯದ ದೃಷ್ಟಿಯಿಂದ, ಆಮ್ಲಜನಕದ ಬೇಡಿಕೆಯನ್ನು ಪೂರೈಸಬೇಕಾಗುತ್ತದೆ ಎಂದು ಹೇಳಿದೆ.

About Author

Leave a Reply

Your email address will not be published. Required fields are marked *