ರಾಷ್ಟ್ರಮಟ್ಟದ ಕಲೋತ್ಸವ ಸ್ಪರ್ಧೆಗೆ ಸರಗೂರಿನ ವಿದ್ಯಾರ್ಥಿನಿ ಆಯ್ಕೆ!
1 min readಮೈಸೂರು : ಭಾರತ ಸರ್ಕಾರದ ಶಿಕ್ಷಣ ಸಚಿವಾಲಯವು ಶಾಲಾ ಕಾಲೇಜಿನ ವಿದ್ಯಾರ್ಥಿಗಳ ಪ್ರತಿಭೆಯನ್ನು ಅನಾವರಣಗೊಳಿಸಲು ವೇದಿಕೆ ಕಲ್ಪಿಸಿಕೊಟ್ಟಿರುವ ‘ರಾಷ್ಟ್ರಮಟ್ಟದ ಕಲೋತ್ಸವ’ ಸ್ಪರ್ಧೆಗೆ ಜಿಲ್ಲೆಯ ಎಚ್.ಡಿ.ಕೋಟೆ ತಾಲ್ಲೂಕಿನ ಜಿ.ಬಿ.ಸರಗೂರು ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿನಿ ಭವ್ಯ ಆಯ್ಕೆಯಾಗಿದ್ದಾರೆ.
ಶಿಕ್ಷಣದಲ್ಲಿ ಕಲೆಯನ್ನು ಪ್ರೋತ್ಸಾಹಿಸಿ, ಪೋಷಿಸುವ ನಿಟ್ಟಿನಲ್ಲಿ ದೇಶದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಹಾಗೂ ಅದರ ವೈವಿದ್ಯತೆಯನ್ನು ಕಲೆಯ ಮೂಲಕ ಶಾಲಾ ಮಕ್ಕಳಿಗೆ ಅರ್ಥೈಸಲು ಸ್ಪರ್ಧೆಯನ್ನು ಆಯೋಜಿಸಲಾಗುತ್ತದೆ.
ಈ ಹಿನ್ನೆಲೆ 2021-22ನೇ ಸಾಲಿನಲ್ಲಿ 9 ರಿಂದ 12 ತರಗತಿವರೆಗಿನ ವಿದ್ಯಾರ್ಥಿಗಳಿಗೆ ವರ್ಚುಯಲ್ ಆಗಿ ನಡೆದ ರಾಜ್ಯಮಟ್ಟದ ಕಲೋತ್ಸವ ಸ್ಪರ್ಧೆಗೆ ಭಾಗವಹಿಸಿ ದೃಶ್ಯಕಲಾ 3D ವಿಭಾಗದಲ್ಲಿ ‘ಸೋಮನಕುಣಿತ ಮುಖವಾಡ’ ತಯಾರಿಸಿದ 9ನೇ ತರಗತಿ ವಿದ್ಯಾರ್ಥಿನಿ ಭವ್ಯ ಪ್ರಥಮ ಸ್ಥಾನವನ್ನು ಪಡೆದುಕೊಂಡಿರುತ್ತಾರೆ. ಈ ಮೂಲಕ 2022ನೇ ಜನವರಿಯಲ್ಲಿ ನಡೆಯುವ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ಕಳೆದ ಬಾರಿ ನಡೆದ ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ಜಿ.ಬಿ.ಸರಗೂರಿನ ಸರ್ಕಾರಿ ಪ್ರೌಢಶಾಲೆಯ ಕಲಾ ಶಿಕ್ಷಕಿ ಸಂಗೀತ ಕೆ. ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿನಿ ಚಂದನ ಭಾಗವಹಿಸಿ ದ್ವಿತೀಯ ಸ್ಥಾನ ಪಡೆದಿದ್ದರು. ಇದೀಗ ಶಾಲೆಯಿಂದ ಎರಡನೇ ಬಾರಿ ಸ್ಪರ್ಧಿಸಲಾಗುತ್ತಿದೆ.
ಗ್ರಾಮೀಣ ಪ್ರತಿಭೆಯಾದ ಭವ್ಯ ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ಶಾಲೆಗೆ ಕೀರ್ತಿ ತಂದಿರುವ ಹಿನ್ನೆಲೆ ವಿದ್ಯಾರ್ಥಿನಿಗೆ ಮಾರ್ಗದರ್ಶನ ನೀಡಿದ ಶಾಲೆಯ ಕಲಾ ಶಿಕ್ಷಕಿ ಸಂಗೀತ ಕೆ. ಹಾಗೂ ಶಾಲಾ ಮುಖ್ಯಶಿಕ್ಷಕರಾದ ಜಿ.ಎಸ್.ಮಲ್ಲೇಶ್ ಅವರು ವಿದ್ಯಾರ್ಥಿನಿಗೆ ಅಭಿನಂದನೆ ಕೋರಿದ್ದಾರೆ.