ಕೋವಿಡ್ ತಡೆಗೆ ಜಿಲ್ಲಾಡಳಿತ ಸಕಲ ರೀತಿಯಲ್ಲಿ ಸಜ್ಜು: ಸಚಿವ ಎಸ್.ಟಿ.ಸೋಮಶೇಖರ್

1 min read

ಕೋವಿಡ್ ತಡೆಗೆ ಜಿಲ್ಲಾಡಳಿತ ಸಕಲ ರೀತಿಯಲ್ಲಿ ಸಜ್ಜು: ಸಚಿವ ಎಸ್.ಟಿ.ಸೋಮಶೇಖರ್

ಮೈಸೂರು :- ಕೋವಿಡ್ ಮೂರನೇ ಅಲೆ ತಡೆಗೆ ಜಿಲ್ಲಾಡಳಿತ ಸಕಲ ರೀತಿಯಲ್ಲಿ ಸಜ್ಜಾಗಿದೆ. ಔಷಧಿ ದಾಸ್ತಾನು, ಆಸ್ಪತ್ರೆಗಳಲ್ಲಿ ಬೆಡ್ ಕಾಯ್ದಿರಿಸುವಿಕೆ, ಆಕ್ಸಿಜನ್ ವ್ಯವಸ್ಥೆ ಸೇರಿದಂತೆ ಕೋವಿಡ್ ಚಿಕಿತ್ಸೆಗೆ ಅಗತ್ಯವಿರುವ ಎಲ್ಲಾ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಸಹಕಾರ ಸಚಿವರು ಹಾಗೂ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಹೇಳಿದರು.

ಕೋವಿಡ್-19 ಪರಿಸ್ಥಿತಿ ನಿಯಂತ್ರಣ ಸಂಬಂಧ ಜಿಲ್ಲಾ ಪಂಚಾಯತ್ ಕಚೇರಿಯ ಡಿ.ದೇವರಾಜ ಅರಸು ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪರಿಶೀಲನೆ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಫೆಬ್ರವರಿಯಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗಲಿದೆ ಎಂದು ತಜ್ಞರ ತಂಡ ಮುನ್ನೆಚ್ಚರಿಕೆ ನೀಡಿರುವ ಹಿನ್ನೆಲೆಯಲ್ಲಿ ಅವಶ್ಯಕತೆಗೆ ಅನುಗುಣವಾಗಿ ಔಷಧಿ ದಾಸ್ತಾನು ಇರುವ ಬಗ್ಗೆ, ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿರುವ ಬಗ್ಗೆ ಸಭೆಯಲ್ಲಿ ಚರ್ಚೆಯಾಯಿತು. ಜಿಲ್ಲಾಡಳಿತ ಎಲ್ಲಾ ರೀತಿಯಲ್ಲಿ ಸಜ್ಜಾಗಿದೆ ಎಂದರು.

ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಸಚಿವರು, ಕಳೆದ ಬಾರಿಯಂತೆ ಈ ಬಾರಿ ಯಾವುದೇ ರೀತಿಯ ತೊಂದರೆಯಾಗದಂತೆ ಮುಂಜಾಗ್ರತೆ ವಹಿಸಬೇಕು. ಸರ್ಕಾರ ಎಲ್ಲಾ ರೀತಿಯಲ್ಲಿ ಸಹಕಾರ ನೀಡಲಿದೆ. ಸರ್ಕಾರದ ಹಂತದಲ್ಲಿ ಏನಾಗಬೇಕು ಎಂಬುದನ್ನು ಗಮನಕ್ಕೆ ತನ್ನಿ. ಶಾಸಕರು, ಸ್ಥಳೀಯ ಜನಪ್ರತಿನಿಧಿಗಳನ್ನು ಅಧಿಕಾರಿಗಳು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಿದರೆ ಆರಂಭಿಕ ಹಂತದಲ್ಲೇ ಸಮಸ್ಯೆ ಬಗೆಹರಿಸಬಹುದು ಎಂದು ಸಲಹೆ ನೀಡಿದರು.

ಬೆಂಗಳೂರು, ಬೆಳಗಾವಿ ಮೈಸೂರು ಜಿಲ್ಲೆಯಲ್ಲಿ ಹೆಚ್ಚು ಪ್ರಕರಣಗಳು ಕಂಡುಬರುತ್ತಿವೆ. ಶಾಲೆಗಳಿಗೆ ರಜೆ ನೀಡಬೇಕೆಂದು ಅನೇಕರು ಕರೆ ಮಾಡಿ ಹೇಳುತ್ತಿದ್ದಾರೆ. ಶಾಲೆಗೆ ರಜೆ ನೀಡುವ ವಿಚಾರವಾಗಿ ಶಿಕ್ಷಣ ಸಚಿವರು ಮುಖ್ಯಮಂತ್ರಿಗಳ ಬಳಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಿದ್ದಾರೆ. ಶಿಕ್ಷಣ ಸಚಿವರು ಸಹ ಪ್ರತಿ ಜಿಲ್ಲೆಯ ಮಾಹಿತಿ ತರಿಸಿಕೊಂಡು ತಜ್ಞರ ಸಲಹೆಗಳನ್ನು ಪಡೆಯುತ್ತಿದ್ದಾರೆ ಎಂದರು.

https://youtu.be/k6c9yoPZEqE

ಜಿಲ್ಲೆಗೆ 17 ಆಕ್ಸಿಜನ್ ಘಟಕ ಮಂಜೂರಾಗಿದೆ. ಇದರಲ್ಲಿ 12 ಘಟಕಗಳು ಪೂರ್ಣಗೊಂಡಿದ್ದು ಐದು ನಿರ್ಮಾಣ ಹಂತದಲ್ಲಿವೆ. ಆಸ್ಪತ್ರೆಗಳಲ್ಲಿ ಬೆಡ್ ಕಾಯ್ದಿರಿಸಲಾಗಿದೆ. ತಾಂತ್ರಿಕ ಸಮಿತಿ ನಿರ್ಧರಿಸಿರುವ ಎಲ್ಲಾ ಔಷಧಿಗಳನ್ನು ತಾಲೂಕು ಆಸ್ಪತ್ರೆಗಳಿಗೆ ಸರಬರಾಜು ಮಾಡಲಾಗಿದೆ. ಔಷಧಿ ಮತ್ತು ಪರಿಕರಗಳಿಗೆ ಯಾವುದೇ ಕೊರತೆ ಇಲ್ಲ. 4 ಸಾವಿರ ಹೋಮ್ ಐಸೋಲೇಷನ್ ಕಿಟ್ ಗಳನ್ನು ಪಡೆಯಲಾಗಿದೆ. ವೈದ್ಯರ ಹಾಗೂ ಸಿಬ್ಬಂದಿಗಳ ಸುರಕ್ಷತೆಗೆ ಬೇಕಿರುವ ಎಲ್ಲಾ ಪರಿಕರಗಳನ್ನು ದಾಸ್ತಾನು ಇರಿಸಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಸಭೆಗೆ ಮಾಹಿತಿ ನೀಡಿದರು.

ಇನ್ನೆರಡು ದಿನದಲ್ಲಿ ಮನೆಗಳಿಗೆ ಹೋಮ್ ಐಸೋಲೇಷನ್ ಕಿಟ್ ತಲುಪಿಸಲಾಗುವುದು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಹೇಳಿದಾಗ, ಸರ್ಕಾರಿ ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ದಿನದ 24 ಗಂಟೆ ಐಸೋಲೇಷನ್ ಕಿಟ್ ಸಿಗುವಂತೆ ನೋಡಿಕೊಳ್ಳಬೇಕೆಂಬ ಸಲಹೆ ಶಾಸಕರುಗಳಿಂದ ವ್ಯಕ್ತವಾಯಿತು. 

https://nannurumysuru.com/remove-night-curfew-weekend-lock-down-mp-pratap-simha-mysuru/https://nannurumysuru.com/remove-night-curfew-weekend-lock-down-mp-pratap-simha-mysuru/https://nannurumysuru.com/remove-night-curfew-weekend-lock-down-mp-pratap-simha-mysuru/

ಖಾಸಗಿ ಆಸ್ಪತ್ರೆಗಳಲ್ಲಿ ಬೆಡ್ ಕಾಯ್ದಿರಿಸಿರುವ‌ ಬಗ್ಗೆ ಪರಿಶೀಲನೆ ನಡೆಸಬೇಕು. ಕೋವಿಡ್ ಸೋಂಕಿತ ಗರ್ಭಿಣಿಯರಿಗೆ ಪ್ರತ್ಯೇಕ ಬೆಡ್ ವ್ಯವಸ್ಥೆ ಮಾಡಬೇಕು. ಆಸ್ಪತ್ರೆಗಳಲ್ಲಿ ಸಿಬ್ಬಂದಿ ಕೊರತೆಯಾಗದಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು. ಸಭೆಯಲ್ಲಿ ನಗರಾಭಿವೃದ್ಧಿ ಸಚಿವರಾದ ಬೈರತಿ ಬಸವರಾಜ್, ಶಾಸಕರುಗಳಾದ ತನ್ವೀರ್ ಸೇಠ್, ನಾಗೇಂದ್ರ, ಡಾ. ಯತೀಂದ್ರ ಸಿದ್ದರಾಮಯ್ಯ, ಮಂಜುನಾಥ್, ವಿಧಾನಪರಿಷತ್ ಸದಸ್ಯರಾದ ಮಂಜೇಗೌಡ, ಜಿಪಂ ಸಿಇಒ ಯೋಗೇಶ್, ಎಸ್ ಪಿ ಚೇತನ್, ಡಿಸಿಪಿ ಪ್ರದೀಪ್ ಗುಂಟಿ, ಮೈಸೂರು ಪಾಲಿಕೆ ಆಯುಕ್ತ ಲಕ್ಷ್ಮೀಕಾಂತ್ ರೆಡ್ಡಿ, ಮೂಡಾ ಆಯುಕ್ತ ದಿನೇಶ್ ಕುಮಾರ್, ಜಿಲ್ಲಾ ಆರೋಗ್ಯಾಧಿಕಾರಿ ಪ್ರಸಾದ್, ಮೆಡಿಕಲ್ ಕಾಲೇಜ್ ಡೀನ್ ಡಾ. ದಿನೇಶ್ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.

About Author

Leave a Reply

Your email address will not be published. Required fields are marked *