ತಜ್ಞರು ನೀಡಿದ ಮುನ್ನೆಚ್ಚರಿಕೆಯಿಂದ ವೀಕೆಂಡ್ ಕರ್ಫ್ಯೂ ಆಗಿತ್ತು!
1 min readವಾರಾಂತ್ಯ ಕರ್ಫ್ಯೂ ಮುಖ್ಯಮಂತ್ರಿಯೊಬ್ಬರ ತೀರ್ಮಾನವಲ್ಲ: ಸಚಿವ ಎಸ್.ಟಿ.ಸೋಮಶೇಖರ್
ಮೈಸೂರು :
ವಾರಾಂತ್ಯ ಕರ್ಫ್ಯೂ ಮುಖ್ಯಮಂತ್ರಿಯೊಬ್ಬರ ತೀರ್ಮಾನವಲ್ಲ. ತಜ್ಞರು ನೀಡಿದ ಮುನ್ನೆಚ್ಚರಿಕೆ, ಸಂಪುಟದ ಸಚಿವರ ತೀರ್ಮಾನದ ಬಳಿಕ ವಾರಾಂತ್ಯ ಕರ್ಫ್ಯೂ ಜಾರಿ ಮಾಡಲಾಗಿದೆಯೇ ವಿನಃ ಮುಖ್ಯಮಂತ್ರಿಗಳೊಬ್ಬರೇ ಕೈಗೊಂಡ ತೀರ್ಮಾನವಲ್ಲ ಎಂದು ಸಹಕಾರ ಸಚಿವರು ಹಾಗೂ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.
ಮೈಸೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವರು, ಜನರ ಆರೋಗ್ಯದ ದೃಷ್ಟಿಯಿಂದ ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ವಾರಾಂತ್ಯ ಕರ್ಫ್ಯೂ ಮುಂದುವರಿಸುವ ಸಂಬಂಧ ಮುಖ್ಯಮಂತ್ರಿಗಳು ಶುಕ್ರವಾರ ನಿರ್ಧಾರ ಕೈಗೊಳ್ಳಲಿದ್ದಾರೆ. ಈ ಕುರಿತು ಸಾರ್ವಜನಿಕರಿಂದ ಅಹವಾಲನ್ನು ಕೂಡ ಸ್ವೀಕರಿಸುತ್ತಿದ್ದಾರೆ ಎಂದರು.
ಪ್ರತಾಪ್ ಸಿಂಹ, ಸಿ.ಟಿ.ರವಿ ಅವರು ಸಾರ್ವಜನಿಕರ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ತಜ್ಞರು ನೀಡಿದ ವರದಿ ಆಧಾರದ ಮೇಲೆ ಸರ್ಕಾರ ನಿರ್ಧಾರ ಕೈಗೊಂಡಿದೆ. ಜೊತೆಗೆ ಆಯಾ ಜಿಲ್ಲೆಯ ಪರಿಸ್ಥಿತಿ ನೋಡಿ ಆಯಾ ಜಿಲ್ಲಾಧಿಕಾರಿಗಳಿಗೆ ನಿರ್ಧಾರ ಕೈಗೊಳ್ಳುವ ಅಧಿಕಾರ ನೀಡಲಾಗಿದೆ ಎಂದು ಹೇಳಿದರು.
ಕೋವಿಡ್ ವಿಚಾರವಾಗಿ ಕೆಲವರು ಮಾತ್ರ ಹೇಳಿಕೆ ನೀಡಬೇಕು ಎಂಬ ಸಚಿವ ಸುಧಾಕರ್ ಹೇಳಿಕೆ ಕುರಿತ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಒಬ್ಬೊಬ್ಬರು ಒಂದೊಂದು ಹೇಳಿಕೆ ನೀಡಿದರೆ ಜನರಿಗೆ ಗೊಂದಲ ಉಂಟಾಗುತ್ತದೆ. ಸಂಪೂರ್ಣ ಜ್ಞಾನ ಹೊಂದಿದವರು ಮಾತನಾಡಿದರೆ ಸೂಕ್ತ ಎಂಬ ದೃಷ್ಟಿಯಿಂದ ಹೇಳಿಕೆ ನೀಡಿದ್ದಾರೆ ಅಷ್ಟೇ ಎಂದರು.
ಸಂಪುಟ ವಿಸ್ತರಣೆ ಬಗ್ಗೆ ಮಾಹಿತಿ ಇಲ್ಲ. ಪಕ್ಷದ ಅಧ್ಯಕ್ಷರು, ಪದಾಧಿಕಾರಿಗಳನ್ನು ಮುಖ್ಯಮಂತ್ರಿಗಳು ತಿಂಗಳು, ಎರಡು ತಿಂಗಳಿಗೊಮ್ಮೆ ಭೇಟಿ ಮಾಡಿ ಚರ್ಚಿಸುವುದು ರೂಢಿ. ಇದರಲ್ಲಿ ವಿಶೇಷವೇನೂ ಇಲ್ಲ. ಬಿಬಿಎಂಪಿ ಚುನಾವಣೆ ಬಗ್ಗೆ ಪಕ್ಷ ಉತ್ಸುಕವಾಗಿದೆ. ಸದ್ಯದಲ್ಲೇ ಸುಪ್ರೀಂ ಕೋರ್ಟ್ ಆದೇಶ ಬರಲಿದೆ. ಸರ್ಕಾರ ಕೂಡ ರೆಡಿಯಿದೆ ಎಂದು ಹೇಳಿದರು.