ಟಿ20 ನಾಯಕತ್ವಕ್ಕೆ ವಿದಾಯ ಘೋಷಿಸಿದ ವಿರಾಟ್ ಕೊಹ್ಲಿ

1 min read

ದುಬೈ,ಸೆ.17-ಭಾರತ ಟಿ20 ತಂಡದ ನಾಯಕತ್ವಕ್ಕೆ ವಿದಾಯ ಹೇಳುವುದಾಗಿ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಘೋಷಿಸಿದ್ದಾರೆ.

ಮುಂಬರುವ ಐಸಿಸಿ ಟಿ20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿ ಬಳಿಕ ಟಿ20 ತಂಡದ ನಾಯಕತ್ವ ಸ್ಥಾನದಿಂದ ಕೆಳಗಿಳಿಯಲು ಕೊಹ್ಲಿ ನಿರ್ಧರಿಸಿದ್ದಾರೆ. ಈ ಬಗ್ಗೆ ಸ್ವತಃ ಅವರೇ ಸಾಮಾಜಿಕ ಜಾಲತಾಣದಲ್ಲಿ ನಿನ್ನೆ ಪತ್ರವೊಂದನ್ನು ಪೋಸ್ಟ್ ಮಾಡಿದ್ದಾರೆ.

`ನನ್ನ ಸಂಪೂರ್ಣ ಸಾಮರ್ಥ್ಯದೊಂದಿಗೆ ಭಾರತ ತಂಡವನ್ನು ಪ್ರತಿನಿಧಿಸುವ ಮತ್ತು ಮುನ್ನಡೆಸುವ ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟವೇ ಸರಿ. ನನ್ನ ಈ ಪಯಣದಲ್ಲಿ ಬೆಂಬಲಿಸಿದ ಪ್ರತಿಯೊಬ್ಬರಿಗೂ ಧನ್ಯವಾದ ಹೇಳಲು ಬಯಸುತ್ತೇನೆ. ತಂಡದ ಆಟಗಾರರು, ಸಹಾಯಕ ಸಿಬ್ಬಂದಿ, ಆಯ್ಕೆ ಸಮಿತಿ, ಕೋಚ್‌ಗಳು ಹಾಗೂ ಭಾರತ ತಂಡದ ಅಭಿಮಾನಿಗಳ ಬೆಂಬಲ ಇಲ್ಲದೆ ನನಗೆ ಏನನ್ನೂ ಸಾಧಿಸಲು ಸಾಧ್ಯವಾಗುತ್ತಿರಲಿಲ್ಲ ಎಂದಿದ್ದಾರೆ.

`ಆಟಗಾರರ ಮೇಲಿನ ಹೊರೆಯನ್ನು ಅರ್ಥ ಮಾಡಿಕೊಳ್ಳುವುದು ಮುಖ್ಯವಾಗುತ್ತದೆ. ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲಿ ಕಳೆದ 8-9 ವರ್ಷಗಳಲ್ಲಿ ಹೊತ್ತ ಆಟದ ಹೊರೆಯನ್ನು ಪರಿಗಣಿಸಿ, ಕಳೆದ 5-6 ವರ್ಷಗಳಿಂದ ಎಲ್ಲಾ ಮಾದರಿಯಲ್ಲಿ ಭಾರತ ತಂಡವನ್ನು ಮುನ್ನಡೆಸಿರುವುದನ್ನು ಪರಿಗಣಿಸಿ, ಈಗ ಟೆಸ್ಟ್‌ ಮತ್ತು ಏಕದಿನ ಕ್ರಿಕೆಟ್‌ನಲ್ಲಿ ಮಾತ್ರವೇ ನಾಯಕನಾಗಿ ಉಳಿಯುವ ನಿರ್ಧಾರ ಮಾಡಿದ್ದೇನೆ. ಟಿ20 ತಂಡದ ನಾಯಕನಾಗಿ ನನ್ನ ಸಾಮರ್ಥ್ಯ ಮೀರಿ ಭಾರತ ತಂಡಕ್ಕೆ ಸೇವೆ ಸಲ್ಲಿಸಿದ್ದೇನೆ. ಈಗ ಒಬ್ಬ ಬ್ಯಾಟ್ಸ್‌ಮನ್‌ ಆಗಿ ಅದೇ ಸೇವೆಯನ್ನು ಮುಂದುವರಿಸಲಿದ್ದೇನೆ. ಈ ವಿಚಾರವನ್ನು ಈಗಾಗಗಲೇ ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ಮತ್ತು ಕಾರ್ಯದರ್ಶಿ ಜಯ್‌ ಶಾ ಅವರ ಗಮನಕ್ಕೆ ತಂದಿರುವುದಾಗಿ ಕೊಹ್ಲಿ ತಿಳಿಸಿದ್ದಾರೆ.

ವಿರಾಟ್‌ ಕೊಹ್ಲಿ ಮುಂಬರುವ ಐಸಿಸಿ ಟಿ20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿ ಬಳಿಕ ಒಡಿಐ ಮತ್ತು ಟಿ20 ತಂಡಗಳ ನಾಯಕತ್ವ ಬಿಡಲಿದ್ದಾರೆ ಎಂಬ ಸುದ್ದಿ ಕೆಲವು ದಿನಗಳಿಂದ ಹರಿದಾಡಿದ ಬೆನ್ನಲ್ಲೇ ತಮ್ಮ ನಿರ್ಧಾರ ಪ್ರಕಟಿಸಿದ್ದಾರೆ. ಕೊಹ್ಲಿ 2017ರಲ್ಲಿ ಮಹೇಂದ್ರ ಸಿಂಗ್ ಧೋನಿಯಿಂದ ಸೀಮಿತ ಓವರ್ ಗಳ ಪಂದ್ಯದ ನಾಯಕತ್ವ ವಹಿಸಿಕೊಂಡಿದ್ದರು. ವಿರಾಟ್‌ ಕೊಹ್ಲಿ ನಾಯಕತ್ವ ಬಿಡುವ ನಿರ್ಧಾರದೊಂದಿಗೆ ಅನುಭವಿ ಆರಂಭಿಕ ಬ್ಯಾಟ್ಸ್‌ಮನ್‌ ರೋಹಿತ್‌ ಶರ್ಮಾ ಟಿ20 ತಂಡದ ನಾಯಕನಾಗಲಿದ್ದಾರೆ ಎನ್ನಲಾಗಿದೆ.

ವಿರಾಟ್ ಕೊಹ್ಲಿ ಇದುವರೆಗೂ 90 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದು, 3159 ರನ್ ಬಾರಿಸಿದ್ದಾರೆ. ಅದರಲ್ಲಿ 28 ಅರ್ಧಶತಕಗಳು ಸೇರಿವೆ. 45 ಪಂದ್ಯಗಳಿಗೆ ನಾಯಕರಾಗಿದ್ದು, 27 ಗೆಲುವು ಹಾಗೂ 14 ಸೋಲು ಕಂಡಿದ್ದಾರೆ. ನಾಯಕರಾಗಿ 48.45 ಸರಾಸರಿಯಲ್ಲಿ 12 ಅರ್ಧ ಶತಕಗಳ ಸಮೇತ 1,502 ರನ್ ಬಾರಿಸಿದ್ದಾರೆ.

About Author

Leave a Reply

Your email address will not be published. Required fields are marked *