ವಿಧಾನಮಂಡಲದ ಅಧಿವೇಶನದಲ್ಲಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಭಾಷಣ: ಬಹಿಷ್ಕರಿಸಿದ ಕಾಂಗ್ರೆಸ್

1 min read

ಬೆಂಗಳೂರು,ಸೆ.24-ಇಂದು ವಿಧಾನಮಂಡಲ ಅಧಿವೇಶನದ ಕೊನೇ ದಿನವಾಗಿದ್ದು, ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಜಂಟಿ ಅಧಿವೇಶನವನ್ನು ಕರೆಯಲಾಗಿದೆ. ಅಧಿವೇಶವನ್ನು ಉದ್ದೇಶಿಸಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಭಾಷಣ ಮಾಡಲಿದ್ದಾರೆ.
ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್ ಇದೊಂದು ಕೆಟ್ಟ ಸಂಪ್ರದಾಯವಾಗಿದ್ದು, ಇದರಲ್ಲಿ ನಾವು ಭಾಗವಹಿಸುವುದಿಲ್ಲ, ಬಹಿಷ್ಕರಿಸುತ್ತೇವೆ ಎಂದಿದೆ.
ಬೆಲೆ ಏರಿಕೆ ಖಂಡಿಸಿ ಟಾಂಗಾ ಜಾಥಾ ನಡೆಸಿದ ಬಳಿಕ ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಇಂದಿನ ಜಂಟಿ ಅಧಿವೇಶನವನ್ನು ಕಾಂಗ್ರೆಸ್ ಬಹಿಷ್ಕರಿಸುತ್ತೆ. ಭಾಷಣದ ಬಗ್ಗೆ ವಿಧಾನಸಭೆಯಾಗಲಿ, ವಿಧಾನಪರಿಷತ್ ವಿಪಕ್ಷ ನಾಯಕರನ್ನು ಸಂಪರ್ಕಿಸಿ ನಮ್ಮ ಪ್ರತಿಕ್ರಿಯೆಯನ್ನು ಸರ್ಕಾರ ಕೇಳಿರಲಿಲ್ಲ. ಓಂ ಬಿರ್ಲಾ ತಮ್ಮ ಭಾಷಣವನ್ನು ಲೋಕಸಭೆಯಲ್ಲಿ ಇಟ್ಟುಕೊಳ್ಳಲಿ. ಆದರೆ ರಾಜ್ಯ ವಿಧಾನಸಭೆಯಲ್ಲಿ ಜಂಟಿ ಅಧಿವೇಶ ಉದ್ದೇಶಿಸಿ ಅವರು ಭಾಷಣ ಮಾಡುವುದು ಸರಿಯಲ್ಲ. ಪಾರ್ಲಿಮೆಂಟ್ ವ್ಯವಸ್ಥೆಯಲ್ಲಿ ಇದಕ್ಕೆ ಅವಕಾಶವಿಲ್ಲ. ಬ್ಯಾಂಕ್ವೇಟ್ ಹಾಲ್ ಇದ್ದರೂ ವಿಧಾನಸಭೆ ಬಳಸಿಕೊಂಡು ಬಿಜೆಪಿಯಿಂದ ಕೆಟ್ಟ ಪದ್ಧತಿಗೆ ನಾಂದಿ ಹಾಡಲಾಗುತ್ತಿದೆ. ಈ ಮೂಲಕ ಹೊಸ ಇತಿಹಾಸ ನಿರ್ಮಿಸಲು ಹೊರಟಿದ್ದಾರೆ ಇದನ್ನು ಕಾಂಗ್ರೆಸ್ ವಿರೋಧಿಸುತ್ತದೆ. ಕಾಂಗ್ರೆಸ್ ಸದಸ್ಯರು ಜಂಟಿ ಅಧಿವೇಶನದಲ್ಲಿ ಭಾಗಿಯಾಗುವುದಿಲ್ಲ ಎಂದು ಹೇಳಿದರು.
ವಿಧಾನಮಂಡಲ ಕಲಾಪಕ್ಕೂ ಬಹಿಷ್ಕಾರ: ಇಂದು ವಿಧಾನಮಂಡಲ ಕಲಾಪದ ಕೊನೆಯ ದಿನವಾಗಿದ್ದು, ಇಂದಿನ ಕಲಾಪಕ್ಕೂ ಕಾಂಗ್ರೆಸ್ ಬಹಿಷ್ಕಾರ ಹಾಕಿದೆ. ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರುತ್ತಿದ್ದರೂ ಸರ್ಕಾರ ಕಣ್ಣು-ಕಿವಿ ಮುಚ್ಚಿಕೊಂಡು ಕುಳಿತಿದೆ ಎಂದು ಕಾಂಗ್ರೆಸ್ ನಾಯಕರು ಆಕ್ರೋಶ ಹೊರಹಾಕಿದ್ದಾರೆ.
ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಇಂದು ಮಧ್ಯಾಹ್ನ 2.30ಕ್ಕೆ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ವಿಧಾನಮಂಡಲ ಜಂಟಿ ಅಧಿವೇಶನದಲ್ಲಿ ‘ಪ್ರಜಾಪ್ರಭುತ್ವ-ಸಂಸದೀಯ ಮೌಲ್ಯಗಳ ರಕ್ಷಣೆ’ ವಿಷಯ ಕುರಿತು ಭಾಷಣ ಮಾಡಲಿದ್ದಾರೆ. ಈ ವೇಳೆ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪಾಲ್ಗೊಳ್ಳಲಿದ್ದು, ಇದೇ ವೇಳೆ ವಿಧಾನಸಭೆಯ ಶಾಸಕರೊಬ್ಬರಿಗೆ ಅತ್ಯುತ್ತಮ ಶಾಸಕ ಪ್ರಶಸ್ತಿಯನ್ನು ಲೋಕಸಭಾಧ್ಯಕ್ಷರು ಪ್ರದಾನ ಮಾಡಲಿದ್ದಾರೆ.

About Author

Leave a Reply

Your email address will not be published. Required fields are marked *