ದಸರಾ ಉದ್ಘಾಟನೆಗೆ ಎಸ್.ಎಂ.ಕೃಷ್ಣರಿಗೆ ಸರ್ಕಾರದಿಂದ ಅಧಿಕೃತ ಆಹ್ವಾನ
1 min readಬೆಂಗಳೂರು/ಮೈಸೂರು,ಅ.2-ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವವನ್ನು ಉದ್ಘಾಟಿಸಲಿರುವ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರಿಗೆ ಸರ್ಕಾರದಿಂದ ಅಧಿಕೃತ ಆಹ್ವಾನ ನೀಡಲಾಯಿತು.
ಎಸ್.ಎಂ.ಕೃಷ್ಣ ಅವರ ಬೆಂಗಳೂರಿನ ನಿವಾಸಕ್ಕೆ ಇಂದು ತೆರಳಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಧಿಕೃತ ಆಹ್ವಾನ ನೀಡಿದರು.
ಮೈಸೂರು ಪೇಟ ತೊಡಿಸಿ ಹಾರ ಹಾಕಿ ಫಲತಾಂಬೂಲ ನೀಡಿ ಅಧಿಕೃತವಾಗಿ ದಸರಾ ಉದ್ಘಾಟಿಸಲು ಆಹ್ವಾನಿಸಿದರು.
ಈ ಸಂದರ್ಭ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ ಅವರು ಈ ವರ್ಷದ ದಸರಾ ಮಹೋತ್ಸವವನ್ನು ಚಾಮುಂಡೇಶ್ವರಿಯ ಪೂಜೆಯನ್ನು ಯಾರ ಬಳಿ ಮಾಡಿಸಬೇಕೆನ್ನುವ ಚರ್ಚೆ ಬಂದಾಗ ಕೂಡಲೇ ಎಲ್ಲರಿಗೂ ಸರ್ವ ಸಮ್ಮತವಾಗಿ ಬಂದಿರುವ ಹೆಸರು ಈ ನಾಡಿನ ಶ್ರೇಷ್ಠ ಆಡಳಿತಗಾರ, ರಾಜಕಾರಣಿ, ರಾಜ್ಯಕ್ಕೆ ಹಲವಾರು ಕೊಡುಗೆ ನೀಡಿದ, ಸಾಮಾನ್ಯ ರಾಜಕಾರಣದಿಂದ ಬಹಳಷ್ಟು ಎತ್ತರಕ್ಕೆ ಚಿಂತನೆ ಮಾಡಿ ಉನ್ನತ ಪರಂಪರೆಯನ್ನು ನೀಡಿದ ಮುತ್ಸದ್ಧಿ ರಾಜಕಾರಣಿ, ಕನ್ನಡ ನಾಡಿನ ಪ್ರೀತಿಯ ನಾಯಕ, ಆದರಣೀಯ ಎಸ್ ಎಂ ಕೃಷ್ಣ ಅವರ ಹೆಸರು.
ಇಂದು ಅಧಿಕೃತವಾಗಿ ಸಚಿವ ಸಂಪುಟದ ಸಹೋದರರಾದ ಆರ್. ಅಶೋಕ, ಎಸ್.ಟಿ.ಸೋಮಶೇಖರ್, ಮೈಸೂರು ಮೇಯರ್ ಸುನಂದಾ ಪಾಲನೇತ್ರ, ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಎಲ್ಲರೂ ಒಟ್ಟಾಗಿ ಬಂದು ಅವರನ್ನು ಬರಬೇಕೆಂದು ಆಮಂತ್ರಣ ನೀಡಿದ್ದೇವೆ. ಅವರು ಅತ್ಯಂತ ಸಂತೋಷದಿಂದ ನಮ್ಮ ಆಮಂತ್ರಣ ಒಪ್ಪಿಕೊಂಡಿದ್ದಾರೆ ಅವರು ಒಪ್ಪಿಕೊಂಡಿದ್ದಕ್ಕಾಗಿ ನಾನು ಅವರಿಗೆ ಆಭಾರಿಯಾಗಿದ್ದೇನೆ ಎಂದರು.
ಎಸ್. ಎಂ.ಕೃಷ್ಣ ಅವರು ಮಾತನಾಡಿ ಬಸವರಾಜ ಬೊಮ್ಮಾಯಿಯವರು ನನ್ನನ್ನು ಯೋಗ್ಯತೆಗೂ ಮೀರಿ ಈ ಗೌರವವನ್ನು ನನ್ನ ಮೇಲೆ ಹೊರಿಸಿದ್ದಾರೆ. ನಿಮ್ಮ ಆಹ್ವಾನವನ್ನು ವಿನಮೃನಾಗಿ ಸ್ವೀಕರಿಸುತ್ತೇನೆ ಎಂದರು.
ಅ. 7ರಿಂದ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಆರಂಭವಾಗಲಿದೆ.
ಈ ಸಂದರ್ಭದಲ್ಲಿ ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್, ಮೈಸೂರು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಮತ್ತಿತರರು ಉಪಸ್ಥಿತರಿದ್ದರು.