ವಾರದಲ್ಲಿ 6 ದಿನ ಶಾಲಾ ಮಕ್ಕಳಿಗೆ ಮೊಟ್ಟೆ ನೀಡಿ: ಡಾ.ಹೆಚ್. ಸಿ ಮಹದೇವಪ್ಪ
1 min readಮೈಸೂರು: ಪ್ರಸ್ತುತ ಶಾಲೆಯಲ್ಲಿ ವಾರಕ್ಕೆ 2 ದಿನ ಮಾತ್ರ ಮೊಟ್ಟೆಯನ್ನು ನೀಡುತ್ತಾ ಬಂದಿದ್ದರು. ಆದರೆ ಪ್ರಗತಿಪರ ಕೈಗಾರಿಕಾ ಉದ್ಯಮಿಗಳಾದ ಅಜಿಮ್ ಪ್ರೇಮ್ ಜಿ ಯವರ ಸಿ.ಆರ್.ಎಫ್ ಫೌಂಡೇಶನ್ ವತಿಯಿಂದ 1591 ಕೋಟಿ ಹಣ ನೀಡಿದ್ದು, ಇದರಿಂದ 1 ರಿಂದ 10 ತರಗತಿಯ ಸರ್ಕಾರಿ ಶಾಲಾ ಮಕ್ಕಳಿಗೆ ವಾರದಲ್ಲಿ 6 ದಿನ ಮೊಟ್ಟೆಯನ್ನು ನೀಡಬೇಕು ಎಂದು ಸಮಾಜ ಕಲ್ಯಾಣ ಸಚಿವರು ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಎಚ್. ಸಿ ಮಹದೇವಪ್ಪ ಅವರು ಸೂಚನೆ ನೀಡಿದರು.
ಇಂದು ಮಹಾರಾಜ ಕಾಲೇನಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಪಂಚಾಯತ್ ವತಿಯಿಂದ ರಾಜ್ಯ ಸರ್ಕಾರದ ಪಿ.ಎಂ.ಪೋಷಣ್ -ಮಧ್ಯಾಹ್ನ ಉಪಹಾರ ಯೋಜನೆ, ಅಜೀಂ ಪ್ರೇಮ್ ಜಿ ಫೌಂಡೇಶನ್ ಸಹಯೋಗದಲ್ಲಿ ಶಾಲಾ ಮಕ್ಕಳ ಪೌಷ್ಠಿಕತೆ ವೃದ್ಧಿಸಲು ಎಲ್ಲಾ ಸರ್ಕಾರಿ ಹಾಗೂ ಅನುದಾನಿತ ಶಾಲೆಯ ವಿಧ್ಯಾರ್ಥಿಗಳಿಗೆ ವಾರದಲ್ಲಿ ಆರು ದಿನ ಪೌಷ್ಟಿಕ ಆಹಾರ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳಿಗೆ ವಿಟಮಿನ್ ಮತ್ತು ಪ್ರೋಟೀನ್ ಮುಖ್ಯ, ಆದ್ದರಿಂದ ಮಕ್ಕಳಿಗೆ ಬಿಸಿ ಊಟದ ಜೊತೆ ಮೊಟ್ಟೆಯನ್ನು ನೀಡಲಾಗುತ್ತಿದೆ. ವಾರದಲ್ಲಿ 2 ದಿನ ಮೊಟ್ಟೆಯನ್ನು ನೀಡುತ್ತಾ ಬಂದಿದ್ದೇವೆ. ಸಿಆರ್‌ಎಫ್ ಫೌಂಡೇಶನ್ ಬಗ್ಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪನವರು ಇಂದಿನ ಕ್ಯಾಬಿನೆಟ್ ಮೀಟಿಂಗ್ ನಲ್ಲಿ ಹೇಳಿದಂತೆ, ರಾಜ್ಯದಲ್ಲಿ 88% ಮಕ್ಕಳು ಮೊಟ್ಟೆಯನ್ನು ಪಡೆದರೆ ಇನ್ನು 8% ಮಕ್ಕಳು ಬಾಳೆಹಣ್ಣು ಹಾಗೂ ಉಳಿದ 4% ಮಕ್ಕಳು ಕಡಲೆಹಿಟ್ಟಿನ ಚಕ್ಕುಲಿಯನ್ನು ಪಡೆಯುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
ಎಲ್ಲಾ ಮಕ್ಕಳು ಪ್ರತಿಯೊಂದು ಸೌಲಭ್ಯಗಳನ್ನು ಪಡೆದು ಸದೃಢವಾಗಬೇಕು, ಉತ್ತಮ ರೀತಿಯ ಆಹಾರವನ್ನು ಸೇವಿಸಿ ಆರೋಗ್ಯಕರ ಜೀವನ ಶೈಲಿಯಲ್ಲಿ ಬೆಳೆಯಬೇಕು ಎಂದು ಸರ್ಕಾರ ಸಮವಸ್ತ್ರ, ಪಠ್ಯಪುಸ್ತಕ, ಬಿಸಿ ಹಾಲಿನ ವಿತರಣೆ, ಜೊತೆಗೆ ಇತ್ತೀಚಿಗೆ ರಾಗಿ ಮಾಲ್ಟ್ ಸಹ ಕೊಡುತ್ತಾ ಇದ್ದೇವೆ. ಇಷ್ಟೆಲ್ಲ ಸೌಲಭ್ಯವನ್ನು ಪಡೆದುಕೊಳ್ಳುತ್ತಿರುವ ನೀವು ಚೆನ್ನಾಗಿ ಓದಬೇಕು ಒಳ್ಳೆಯ ಸಂವಿಧಾನ ಕಟ್ಟುವಂತ ದೇಶದ ಉತ್ತಮ ಪ್ರಜೆಯಾಗಬೇಕು ಎಂದು ಸಲಹೆ ನೀಡಿದರು.
ಮಕ್ಕಳು ಶಾಲೆಯ ಹಂತದಲ್ಲಿ ಸಂವಿಧಾನದ ಪೀಠಿಕೆಯನ್ನು ಓದಬೇಕು ಜೊತೆಗೆ ಅರ್ಥೈಸಿ, ಬೇರೆಯವರಿಗೆ ಹೇಳಬೇಕು. ಸಂವಿಧಾನದ ಪೀಠಿಕೆಯನ್ನು ನೋಡಿಕೊಳ್ಳದೆ ಪ್ರತಿಯೊಬ್ಬರು ಹೇಳಲು ಕಲಿಯಬೇಕು ಭಾರತೀಯರಾದ ನಾವು ಯಾವುದೇ ಜಾತಿ ಧರ್ಮ ಬೇಧಕ್ಕೆ ತಲೆಕೊಡದೆ ಅಭಿವೃದ್ಧಿ ಕಡೆಗೆ ನಮ್ಮ ನಡೆ ಇರಬೇಕು. ನಾವು ಬಾಬಾ ಸಾಹೇಬ್ ಬಿ. ಆರ್. ಅಂಬೇಡ್ಕರ್ ರವರ ಸಂವಿಧಾನದ ಮಾರ್ಗದರ್ಶನದಲ್ಲಿ ಮುಂದುವರೆಯಬೇಕು. ನಮಗೆ ಧಾರ್ಮಿಕ ಸ್ವಾತಂತ್ರ್ಯವಿದೆ, ಮಾತನಾಡುವ ಸ್ವಾತಂತ್ರ್ಯವಿದೆ ಆಚಾರ ವಿಚಾರಗಳ ಬಗ್ಗೆ ತಿಳಿಯಲು ಮುಕ್ತವಾದ ಅವಕಾಶವಿದೆ. ನಾವೆಲ್ಲರೂ ಸಹೋದರತ್ವದಿಂದ ಇರಬೇಕು ಅದನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳಾದ ಕೆ.ಎಂ ಗಾಯತ್ರಿ, ವಿಧಾನ ಪರಿಷತ್ ನ ಸದಸ್ಯರಾದ ಸಿ. ಎನ್. ಮಂಜೇಗೌಡ ಸೇರಿದಂತೆ ಜಿಲ್ಲೆಯ ವಿವಿಧ ಇಲಾಖೆ ಅಧಿಕಾರಿಗಳು ಇನ್ನಿತರರು ಉಪಸ್ಥಿತರಿದ್ದರು.