ಈ ರಾಜ್ಯಕ್ಕೆ ಒಳ್ಳೆಯದಾಗಲು ಬಿಜೆಪಿಯನ್ನು ಅಧಿಕಾರದಿಂದ ಕಿತ್ತೊಗೆಯಿರಿ- ಆಗ ಜನ ನೆಮ್ಮದಿಯಿಂದ ಇರ್ತಾರೆ-

1 min read

ಗೌರಿ-ಗಣೇಶ ಹಬ್ಬದ ಅಂಗವಾಗಿ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕ ಕೃಷ್ಣಬೈರೇಗೌಡ ಅವರ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ದಿನಸಿ ಕಿಟ್ ಗಳನ್ನು ವಿತರಿಸುವ ಕಾರ್ಯಕ್ರಮಕ್ಕೆ ಮಾಜಿ ಮುಖ್ಯಮಂತ್ರಿಗಳು ಹಾಗೂ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಚಾಲನೆ ನೀಡಿ, ಮಾತನಾಡಿದರು.

ನಮ್ಮ ಪಕ್ಷದ ಶಾಸಕರಾದ ಕೃಷ್ಣಬೈರೇಗೌಡ ಅವರು ಈ ಭಾಗದ ಕಾರ್ಮಿಕರು ಹಾಗೂ ಬಡಜನರಿಗೆ ಸುಮಾರು 3000 ಆಹಾರ ಧಾನ್ಯಗಳ ಕಿಟ್ ಗಳನ್ನು ವಿತರಣೆ ಮಾಡುವ ಕೆಲಸ ಹಮ್ಮಿಕೊಂಡಿದ್ದಾರೆ. ಕಿಟ್ ವಿತರಣೆ ಮಾಡುವ ಜೊತೆಗೆ, ಈ ಕಾರ್ಯಕ್ರಮಕ್ಕೆ ಬಂದರೆ ಕ್ಷೇತ್ರದ ಜನರನ್ನು ನೋಡುವ ಅವಕಾಶ ಸಿಗುತ್ತೆ ಎಂಬ ಕಾರಣಕ್ಕೆ ಇಂದು ಆಗಮಿಸಿದ್ದೇನೆ.

ಕೃಷ್ಣಬೈರೇಗೌಡ ಅವರು ನನ್ನ ಮಂತ್ರಿಮಂಡಲದಲ್ಲಿ ಕೃಷಿ ಸಚಿವರಾಗಿದ್ದರು. ಇವರು ಒಬ್ಬ ದಕ್ಷ ಮಂತ್ರಿ ಎಂಬುದರಲ್ಲಿ ಯಾವ ಸಂದೇಹವಿಲ್ಲ. ಇವರ ತಂದೆ ಕೂಡ ಸಚಿವರಾಗಿ ಜನರ ಪರವಾಗಿ, ರೈತರ ಪರವಾಗಿ ಕೆಲಸ ಮಾಡಿದವರು. ತಂದೆಯ ಹಾದಿಯಲ್ಲೇ ಸಾಗುತ್ತಿದ್ದಾರೆ. ಐದು ವರ್ಷ ಕೃಷಿ ಸಚಿವರಾಗಿ ಕೃಷ್ಣಬೈರೇಗೌಡ ಅವರು ಒಳ್ಳೆ ಕೆಲಸಗಳನ್ನು ಮಾಡಿದ್ದಾರೆ. ನಮ್ಮ ಸರ್ಕಾರದ ಕೃಷಿ ಭಾಗ್ಯ ಕಾರ್ಯಕ್ರಮವನ್ನು ಈಗ ನಿಲ್ಲಿಸಿದ್ದಾರೆ. ಈ ಯೋಜನೆಯಡಿ ಸುಮಾರು ಎರಡು ಲಕ್ಷ ಕೃಷಿ ಹೊಂಡಗಳನ್ನು ತೋಡಲಾಗಿತ್ತು.

ಕೃಷ್ಣಬೈರೇಗೌಡ ಅವರು ಕೃಷಿ ಸಚಿವರಾಗಿದ್ದಾಗ ಒಂದು ದಿನವೂ ರೈತರಿಗೆ ಗೊಬ್ಬರ, ಬೀಜದ ಕೊರತೆಯಾಗದಂತೆ ಕೆಲಸ ಮಾಡಿದ್ದರು. ರೈತರ ಪರವಾದ ಕಾಳಜಿ ಇರುವಂತವರು ಮಾತ್ರ ಈ ರೀತಿ ಕೆಲಸ ಮಾಡಲು ಸಾಧ್ಯ. ಕೃಷ್ಣಬೈರೇಗೌಡ ಅವರು ರಾಜ್ಯದಲ್ಲಿ ಉತ್ತಮ ಭವಿಷ್ಯ ಇರುವ ನಾಯಕ, ಜೊತೆಗೆ ಒಳ್ಳೆಯ ಮಾತುಗಾರ. ಯಾವುದೇ ವಿಷಯ ಮಂಡನೆಗೆ ಮೊದಲು ಅಗತ್ಯ ಅಧ್ಯಯನ ನಡೆಸುತ್ತಾರೆ, ಇತರರಂತೆ ಸಂತೆ ಭಾಷಣ ಮಾಡಲ್ಲ. ಇದೇ ಕಾರಣಕ್ಕೆ ದೆಹಲಿಯಲ್ಲಿ ನಡೆಯುತ್ತಿದ್ದ ಜಿಎಸ್‌ಟಿ ಕೌನ್ಸಿಲ್ ಗೆ ಹೋಗಲು ನನ್ನ ಬದಲಿಗೆ ಕೃಷ್ಣಬೈರೇಗೌಡ ಅವರನ್ನು ಕಳಿಸುತ್ತಿದ್ದೆ. ಇಂತಹ ಯೋಗ್ಯ ಶಾಸಕರನ್ನು ಕ್ಷೇತ್ರದ ಜನ ಪಡೆದಿದ್ದಾರೆ. ಇಂತವರಿಗೆ ಇನ್ನಷ್ಟು ಶಕ್ತಿ ತುಂಬುವ ಕೆಲಸ ಕ್ಷೇತ್ರದ ಜನ ಮಾಡಬೇಕು.

ಬಿಜೆಪಿಯವರು ಜನರಿಗೆ ಸುಳ್ಳು ಹೇಳಿ ಹೇಗೆ ಜನರ ದಾರಿ ತಪ್ಪಿಸುತ್ತಿದ್ದಾರೆ ಎಂಬುದನ್ನು ನಾವೆಲ್ಲ ಅರ್ಥಮಾಡಿಕೊಳ್ಳಬೇಕು. ಮುಂದಿನ ವಿಧಾನಸಭಾ ಚುನಾವಣೆಗೆ ಇನ್ನು ಒಂದು ವರ್ಷ ಏಳು ತಿಂಗಳುಗಳಿದೆ. ರಾಜ್ಯದ ಬಿಜೆಪಿ ಸರ್ಕಾರ ಯಾವತ್ತೂ ಮುಂಬಾಗಿಲ ಮೂಲಕ ಅಧಿಕಾರ ಹಿಡಿದಿಲ್ಲ. ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಬೊಮ್ಮಾಯಿಯವರು ಅವರ ಸಚಿವ ಸಂಪುಟದ ಸದಸ್ಯರಾಗಿದ್ದರು. ಯಡಿಯೂರಪ್ಪ ಅವರ ಎಲ್ಲಾ ಭ್ರಷ್ಟಾಚಾರದಲ್ಲೂ ಇವರ ಬೆಂಬಲವಿದ್ದ ಹಾಗೆಯೇ. ಇಂಥಾ ಸರ್ಕಾರದಿಂದ ಇನ್ನೇನು ನಿರೀಕ್ಷೆ ಮಾಡೋಕಾಗುತ್ತೆ.

ಸರ್ಕಾರ ಅಭಿವೃದ್ಧಿ ಕೆಲಸಗಳಿಗೆ ಹಣ ಇಲ್ಲ, ಕೊರೊನಾ ನಿರ್ವಹಣೆಗೆ ಖರ್ಚು ಮಾಡಿದ್ದೀವಿ ಅನ್ನುತ್ತೆ. ಕೊರೊನಾಗೆ ಖರ್ಚಾದ ಹಣ ಐದಾರು ಸಾವಿರ ಕೋಟಿ ರೂಪಾಯಿ. ರಾಜ್ಯದ ಬಜೆಟ್ ಗಾತ್ರ 1ಲಕ್ಷದ 45 ಸಾವಿರ ಕೋಟಿ. ರಾಜ್ಯ ಸರ್ಕಾರದ ಭ್ರಷ್ಟಾಚಾರ ಮತ್ತು ದುರಾಡಳಿತ, ಹಣಕಾಸು ನಿರ್ವಹಣೆ ಸರಿಯಾಗಿ ಮಾಡದಿರುವುದು ಇಂದಿನ ದುಸ್ಥಿತಿಗೆ ಕಾರಣ.

ಯಾವ ಸರ್ಕಾರ ಬಂದರೂ ಸಾಲ ಮಾಡುತ್ತವೆ, ನಾನು ಮಾಡಿದ್ದೆ. ನನ್ನ ಐದು ವರ್ಷಗಳ ಆಡಳಿತದಲ್ಲಿ 1ಲಕ್ಷದ 25 ಸಾವಿರ ಕೋಟಿ ಸಾಲ ಮಾಡಿದ್ದೆ. ಆದರೆ ಯಡಿಯೂರಪ್ಪ ಸರ್ಕಾರ ಕೇವಲ ಎರಡು ವರ್ಷಗಳಲ್ಲಿ 1ಲಕ್ಷದ 45 ಸಾವಿರ ಕೋಟಿ ರೂಪಾಯಿ ಸಾಲ ಮಾಡಿದರು. ಇಂತಹ ಬಿಜೆಪಿಯವರಿಗೆ ಸರ್ಕಾರ ನಡೆಸಲು ಯಾವ ನೈತಿಕತೆ ಉಳಿದಿದೆ?

ಈ ರಾಜ್ಯಕ್ಕೆ ಒಳ್ಳೆಯದಾಗಬೇಕು ಎಂದಾರೆ ಬಿಜೆಪಿಯನ್ನು ಅಧಿಕಾರದಿಂದ ಕಿತ್ತೊಗೆಯಬೇಕು. ಆಗ ಮಾತ್ರ ಜನ ನೆಮ್ಮದಿಯಿಂದ ಇರಲು ಸಾಧ್ಯ.

ಇವತ್ತು ಕೃಷ್ಣಬೈರೇಗೌಡ ಅವರು ಜನರಿಗೆ ಕಿಟ್ ಹಂಚಿಕೆ ಮಾಡುತ್ತಿದ್ದಾರೆ, ನಿಜವಾಗಿ ಇದು ಕೃಷ್ಣಬೈರೇಗೌಡ ಅವರ ಕೆಲಸ ಅಲ್ಲ, ಯಾರು ಸರ್ಕಾರ ನಡೆಸುತ್ತಾ ಇದ್ದಾರೆ ಅವರು ಜನರಿಗೆ ಆಹಾರ ಧಾನ್ಯ, ಆರೋಗ್ಯ ಸೌಲಭ್ಯ ಒದಗಿಸಬೇಕು. ಇಪ್ಪತ್ತು ಲಕ್ಷ ಖರ್ಚು ಮಾಡಿ ಇಂದು ಕಿಟ್ ಹಂಚಿಕೆ ಮಾಡ್ತಿದ್ದಾರೆ. ಸರ್ಕಾರ ಸರಿಯಾಗಿ ಕೆಲಸ ಮಾಡುತ್ತಿದ್ದರೆ ಶಾಸಕರು ತಮ್ಮ ವೈಯಕ್ತಿಕ ಹಣದಿಂದ ಕಿಟ್ ಏಕೆ ಹಂಚಬೇಕಿತ್ತು? ಈ ಸರ್ಕಾರ ಅಸಮರ್ಥ ವಾಗಿದೆ ಎಂಬುದನ್ನು ಅರಿತ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಸುರ್ಜೆವಾಲ, ನಾನು, ಡಿ.ಕೆ ಶಿವಕುಮಾರ್ ಅವರು ನಮ್ಮ ಪಕ್ಷದ ಶಾಸಕರು, ಕಾರ್ಯಕರ್ತರು, ಮುಖಂಡರಿಗೆ ಮನವಿ ಮಾಡಿದೆವು. ಇವರೆಲ್ಲ ಬಡಜನರಿಗೆ ತಮ್ಮ ಕೈಲಾದ ಸಹಾಯ ಮಾಡಿದ್ದಾರೆ.

ಒಂದು ವೇಳೆ ನಮ್ಮ ಸರ್ಕಾರ ಅನ್ನಭಾಗ್ಯ ಯೋಜನೆ ಜಾರಿ ಮಾಡದೆ ಇದ್ದರೆ, ಮನಮೋಹನ್ ಸಿಂಗ್ ಅವರ ನೇತೃತ್ವದ ಕೇಂದ್ರ ಸರ್ಕಾರ ಉದ್ಯೋಗ ಖಾತ್ರಿ ಯೋಜನೆ ತರದೇ ಹೋಗಿದ್ದರೆ ಇಂದು ಬಡವರು ಕೆಲಸವಿಲ್ಲದೆ, ಆಹಾರವಿಲ್ಲದೆ ಹಸಿವಿನಿಂದ ನರಳುವ ಸ್ಥಿತಿ ಬರುತ್ತಿತ್ತು. ಅಂತಹಾ ಸ್ಥಿತಿ ನಮ್ಮ ರಾಜ್ಯದ ಜನರಿಗೆ ಬರಲಿಲ್ಲ ಎಂಬುದು ನೆಮ್ಮದಿಯ ವಿಚಾರ.

About Author

Leave a Reply

Your email address will not be published. Required fields are marked *