ನಾವು ಸ್ವಾತಂತ್ರ್ಯ ಹೋರಾಟಗಾರರಲ್ಲ- ಅದರ ಫಲಾನುಭವಿಗಳು- ಸಿದ್ದರಾಮಯ್ಯ

1 min read

ಬೆಂಗಳೂರಿನ ತಮ್ಮ ನಿವಾಸದಲ್ಲಿ ಮಾಜಿ ಮುಖ್ಯಮಂತ್ರಿಗಳು ಹಾಗೂ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದರು.

ನಾನು ಯಾವತ್ತೂ ಜನ್ಮದಿನ ಆಚರಿಸಿಕೊಂಡವನಲ್ಲ, ನನ್ನ ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು ಪ್ರೀತಿಯಿಂದ ಶುಭ ಹಾರೈಸಲು ನನ್ನ ಮನೆಗೆ ಬರುತ್ತಾರೆ. ಅವರನ್ನು ಭೇಟಿ ಮಾಡುತ್ತಿದ್ದೇನೆ. ನಾನು ಐದನೇ ತರಗತಿಗೆ ನೇರವಾಗಿ ದಾಖಲಾತಿ ಆದ ಸಂದರ್ಭದಲ್ಲಿ ಶಾಲೆಯ ಶಿಕ್ಷಕರು ಬರೆದುಕೊಂಡ ಪ್ರಕಾರ ನನಗೀಗ 74 ವರ್ಷ ತುಂಬಿ 75 ನೇ ವರ್ಷಕ್ಕೆ ಕಾಲಿಟ್ಟಿದ್ದೇನೆ.

ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾಗುತ್ತಿದೆ. ಈ ಸಂದರ್ಭದಲ್ಲಿ ನಾವು ಹಿಂದಿನ 74 ವರ್ಷಗಳ ಇತಿಹಾಸವನ್ನು ಹಿಂತಿರುಗಿ ನೋಡಬೇಕು. ಸಂವಿಧಾನದ ಆಶಯಗಳು ಈಡೇರಿವೆಯೋ ಇಲ್ಲವೋ ಎಂಬುದನ್ನು ಗಮನಿಸಿ, ಈಡೇರದೇ ಇದ್ದರೆ ಅದನ್ನು ಈಡೇರಿಸುವ ಶಪಥ ಮಾಡಬೇಕು. ದೇಶದಲ್ಲಿ ಪ್ರಮುಖ ದಿನಗಳ ಆಚರಣೆಯ ಉದ್ದೇಶ ಸಾಮಾಜಿಕ, ಆರ್ಥಿಕ ಬದಲಾವಣೆ ಮಾಡುವ ಸಂಕಲ್ಪ ಮಾಡಬೇಕೆಂಬುದು.

ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟದಲ್ಲಿ ಪಾಲ್ಗೊಂಡವರು ತಮ್ಮ ವೈಯಕ್ತಿಕ ಹಿತಾಸಕ್ತಿಗಾಗಿಯಾಗಲೀ, ಅಧಿಕಾರ ಪಡೆಯಬೇಕೆಂಬ ಉದ್ದೇಶದಿಂದಾಗಲೀ ಹೋರಾಟ ಮಾಡಿಲ್ಲ. ಬ್ರಿಟಿಷರು ದೇಶದಿಂದ HB ತೊಲಗಬೇಕು, ನಮ್ಮ ಭವಿಷ್ಯವನ್ನು ರೂಪಿಸುವ ಸ್ವಾತಂತ್ರ್ಯ ನಮಗೆ ಸಿಗಬೇಕು ಎಂಬ ಧ್ಯೇಯದೊಂದಿಗೆ ತ್ಯಾಗ, ಬಲಿದಾನ ಮಾಡಿದ್ದಾರೆ. 75 ನೇ ಸ್ವಾತಂತ್ರ್ಯೋತ್ಸವದಂದು ನಾವೆಲ್ಲ ದೇಶ ಕಟ್ಟುವ, ಸಮಾಜದಲ್ಲಿ ಸೌಹಾರ್ದತೆ, ಸಾಮರಸ್ಯ, ಬ್ರಾತೃತ್ವ ಭಾವನೆಯನ್ನು ಬೆಳೆಸುವ ಸಂಕಲ್ಪ ಮಾಡಬೇಕು.

ನಾವು ಸ್ವಾತಂತ್ರ್ಯ ಹೋರಾಟಗಾರರಲ್ಲ, ನಾವೆಲ್ಲಾ ಸ್ವಾತಂತ್ರ್ಯದ ಫಲಾನುಭವಿಗಳು. ಆದರೆ ಸ್ವಾತಂತ್ರ್ಯ ಹೋರಾಟದಲ್ಲಿ ನಿಸ್ವಾರ್ಥವಾಗಿ ಪಾಲ್ಗೊಂಡವರ ಹೆಜ್ಜೆ ಗುರುತುಗಳನ್ನು ನಾವು ಅರ್ಥಮಾಡಿಕೊಂಡು, ಅವರ ದಾರಿಯಲ್ಲಿ ಸಾಗುವ ಪ್ರಯತ್ನ ಮಾಡಬೇಕು.

ಚುನಾವಣೆಗೆ ಇನ್ನೂ ಒಂದು ವರ್ಷ ಎಂಟು ತಿಂಗಳುಗಳು ಬಾಕಿ ಇವೆ. ರಾಜ್ಯದ ಜನ ಬಿಜೆಪಿ ಆಡಳಿತದಿಂದ ಬೇಸತ್ತಿದ್ದಾರೆ. ಸರ್ಕಾರ ಕೊರೊನಾ ನಿಯಂತ್ರಣ, ನೆರೆ ಪರಿಹಾರ ನೀಡುವಲ್ಲಿ ವಿಫಲವಾಗಿದೆ. ಸುಳ್ಳು ಭರವಸೆಗಳನ್ನು ನೀಡುವುದಷ್ಟೇ ಅಲ್ಲ ಕೊರೊನಾದಿಂದ ಸಾವಿಗೀಡಾದವರ ಲೆಕ್ಕದಲ್ಲೂ ಸುಳ್ಳು ಹೇಳುತ್ತಿದ್ದಾರೆ. ದೇಶದಲ್ಲಿ ಕೊರೊನಾದಿಂದ ಕನಿಷ್ಟ 50 ಲಕ್ಷ ಜನ ಸತ್ತಿದ್ದಾರೆ, ಕರ್ನಾಟಕವೊಂದರಲ್ಲೇ ಸುಮಾರು ನಾಲ್ಕು ಲಕ್ಷ ಜನ ಸಾವಿಗೀಡಾಗಿದ್ದಾರೆ. ಸರ್ಕಾರ 36 ಸಾವಿರ ಜನ ಸತ್ತಿದ್ದಾರೆ ಅಂತ ಸುಳ್ಳು ಹೇಳುತ್ತಿದೆ.

ಅಹ್ಮದಾಬಾದ್ ಸ್ಟೇಡಿಯಂಗೆ ಮೋದಿಯವರ ಹೆಸರು ಏಕೆ ಇಟ್ಟಿರೋದು? ಮೇಲ್ಸೇತುವೆಗೆ ದೀನದಾಯಾಳು ಉಪಾಧ್ಯಾಯ ಎಂದು ಹೆಸರಿಟ್ಟುವುದು ಏಕೆ? ವಾಜಪೇಯಿ ಅವರ ಹೆಸರಿನ ರಸ್ತೆಗಳಿಲ್ಲವೇ? ಯಲಹಂಕ ಮೇಲ್ಸೇತುವೆಗೆ ಸಾವರ್ಕರ್ ಹೆಸರಿಟ್ಟಿದ್ದು ಏಕೆ? ಸಿ.ಟಿ ರವಿ ಹೇಳಿದಂತೆ ಇವರ ಹೆಸರನ್ನು ಏಕೆ ಹುಕ್ಕಾ ಬಾರ್ ಗಳಿಗೆ ಇಟ್ಟಿಲ್ಲ ಎಂದು ನಾವು ಕೇಳಬಹುದಾ? ಹಾಗೆ ಕೇಳೋದು ಸರಿನಾ?

ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಲಘುವಾಗಿ ಮಾತನಾಡಬಾರದು. ನೆಹರು ಕುಟುಂಬ ದೇಶಕ್ಕಾಗಿ ತ್ಯಾಗ ಬಲಿದಾನಗೈದಿದೆ.‌ ಸಿ.ಟಿ ರವಿ ಸ್ವಾತಂತ್ರ್ಯ ಹೋರಾಟಗಾರನಾ? ಸಂವಿಧಾನ ಬದಲಿಸುತ್ತೇವೆ ಎನ್ನುವವರಿಗೆ ದೇಶದ ಇತಿಹಾಸ, ದೇಶ ಕಟ್ಟಿದ ಮಹಾನ್ ವ್ಯಕ್ತಿಗಳ ಬಗ್ಗೆ ಗೌರವವಿದೆಯಾ? ಒಂದು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಯಲ್ಲಿರುವ ವ್ಯಕ್ತಿಯ ಮಾತಿಗೆ ಘನತೆ ಇರಬೇಕು. ಸಾರ್ವಜನಿಕ ಜೀವನದಲ್ಲಿರುವವರು ಸಂಸ್ಕೃತಿ ಹೀನರಂತೆ ಮಾತನಾಡಬಾರದು ಎಂಬುದನ್ನು ಅವರೇ ಅರ್ಥಮಾಡಿಕೊಳ್ಳಬೇಕು.

ಸಿದ್ದರಾಮಯ್ಯರಿಗೆ ಗಣ್ಯರಿಂದ ಶುಭಾಶಯ ಸಲ್ಲಿಕೆ.

ಬಿಜೆಪಿ ಶಾಸಕ ಎಂ.ಪಿ ಕುಮಾರಸ್ವಾಮಿ ತಮ್ಮದೇ ಸರ್ಕಾರ ಅನುದಾನ ಕೊಡುತ್ತಿಲ್ಲ ಎಂದು ಪ್ರತಿಭಟನೆ ಮಾಡುತ್ತಿದ್ದಾರೆಂದರೆ ಇನ್ನು ಕಾಂಗ್ರೆಸ್, ಜೆಡಿಎಸ್ ಶಾಸಕರ ಕ್ಷೇತ್ರಗಳಿಗೆ ಸಿಗುವ ಅನುದಾನದ ಬಗ್ಗೆ ನೀವೆ ಊಹೆ ಮಾಡಿ.

ಮೇಕೆದಾಟು ಯೋಜನೆ ನಮ್ಮ ರಾಜ್ಯದ ಹಕ್ಕು.‌ ಅದನ್ನು ತಡೆಯುವ ಅಧಿಕಾರ ತಮಿಳುನಾಡಿಗಾಗಲೀ, ಕೇರಳಕ್ಕಾಗಲೀ ಇಲ್ಲ. ಸಿ.ಟಿ ರವಿಗೆ ನೆಲ ಜಲದ ಬಗ್ಗೆ ಬದ್ಧತೆ ಇದ್ದರೆ ಕೇಂದ್ರ ಸರ್ಕಾರದೊಂದಿಗೆ ಮಾತನಾಡಿ ಯೋಜನೆ ಜಾರಿಗೆ ಅನುಮತಿ ಕೊಡಿಸಲಿ. ಸಿ.ಟಿ ರವಿ ತಮಿಳುನಾಡಿನ ಬಿಜೆಪಿ ಉಸ್ತುವಾರಿಯಾದ ಕಾರಣಕ್ಕೆ ಹೀಗೆ ಎಡಬಿಡಂಗಿ ನಿಲುವು ತಾಳಿದ್ದಾರೆ, ಅವರು ನಮ್ಮ ರಾಜ್ಯದ ಪರ ಇಲ್ಲ. ರಾಜ್ಯದಿಂದ ಬಿಜೆಪಿಯ 25 ಸಂಸದರು ಆಯ್ಕೆಯಾದರು ಅವರಿಂದ ಯಾವ ಪ್ರಯೋಜನವಾಗುತ್ತಿಲ್ಲ. ನಮ್ಮ ನ್ಯಾಯಯುತ ಜಿ.ಎಸ್.ಟಿ ಪಾಲು, ನಮ್ಮ ಪಾಲಿನ ಅನುದಾನ, ನೆರೆ – ಬರ ಪರಿಹಾರ, ರೂ. 5,495 ಕೋಟಿ ವಿಶೇಷ ಅನುದಾನ ಕೊಡಿಸುವ ವಿಚಾರದಲ್ಲಿ ಒಂದು ದಿನವಾದರೂ ಬಾಯಿ ಬಿಟ್ಟಿದ್ದಾರಾ?

ಈಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಜಿ.ಎಸ್.ಟಿ ಕೌನ್ಸಿಲ್ ಸದಸ್ಯರಾಗಿದ್ದರು. ಒಮ್ಮೆಯಾದರೂ 15 ನೇ ಹಣಕಾಸು ಆಯೋಗ ಶಿಫಾರಸ್ಸು ಮಾಡಿದ್ದ ವಿಶೇಷ ಅನುದಾನವನ್ನು ಕೇಳಿದ್ದಾರಾ? ಈ ಬಗ್ಗೆ ಬಿಜೆಪಿ ಶಾಸಕರು, ಸಂಸದರು, ರಾಜ್ಯಸಭಾ ಸದ್ಸಯರು ಯಾರಾದ್ರೂ ಮಾತನಾಡ್ತಾರಾ? ಇಂಥವರಿಂದ ರಾಜ್ಯದ ಹಿತ ರಕ್ಷಣೆ ಸಾಧ್ಯವೇ? ರಾಜ್ಯಕ್ಕೆ ಅನ್ಯಾವಾಗುತ್ತಿರೋದನ್ನು ರಾಜ್ಯದ ಜನ ನೋಡುತ್ತಿದ್ದಾರೆ.

ಜಾತಿ ಸಮೀಕ್ಷೆ ವರದಿಯನ್ನೇ ಸ್ವೀಕರಿಸದರೆ ಸಮೀಕ್ಷೆ ವೈಜ್ಞಾನಿಕವಾಗಿ ನಡೆದಿಲ್ಲ ಎಂದು ಬಿಜೆಪಿಯವರಿಗೆ ಹೇಗೆ ಗೊತ್ತಾಯ್ತು. ಒಲ್ಲದ ಗಂಡನಿಗೆ ಮೊಸರಲ್ಲೂ ಕಲ್ಲು ಎಂಬ ಗಾಧೆ ಮಾತಿದೆ ಹಾಗೆ ಬಿಜೆಪಿಯವರಿಗೆ ಎಲ್ಲದರಲ್ಲೂ ಸಮಸ್ಯೆ ಕಾಣುತ್ತೆ. ಸಮೀಕ್ಷೆಯ ವರದಿ ಸ್ವೀಕರಿಸಿ ಸದನದಲ್ಲಿ ಚರ್ಚೆ ಮಾಡಲಿ, ಆಗ ಅದು ವೈಜ್ಞಾನಿಕವೋ, ಅವೈಜ್ಞಾನಿಕವೋ ಗೊತ್ತಾಗಲಿದೆ.

ಬಿಜೆಪಿಯ ಮಿತ್ರ ಪಕ್ಷದ ಮುಖಂಡರಾದ ನಿತೀಶ್ ಕುಮಾರ್ ಅವರೇ ಕೇಂದ್ರ ಸರ್ಕಾರ ಜಾತಿ ಸಮೀಕ್ಷೆ ಮಾಡಬೇಕು, ಇಲ್ಲದಿದ್ದರೆ ನಾವೇ ರಾಜ್ಯದಲ್ಲಿ ಸಮೀಕ್ಷೆ ಮಾಡುತ್ತೇವೆ ಎಂದಿದ್ದಾರೆ. ಇದರಿಂದ ಜಾತಿ ಸಮೀಕ್ಷೆಯ ಪ್ರಾಮುಖ್ಯತೆ ಎಷ್ಟು ಎಂದು ನೀವೇ ಅರ್ಥಮಾಡಿಕೊಳ್ಳಿ. ಸಾಮಾಜಿಕ ನ್ಯಾಯವನ್ನು ಜಾರಿಗೊಳಿಸಬೇಕಾದರೆ ಯಾರು ಹಿಂದುಳಿದ್ದಾರೆ? ಯಾರು ಮುಖ್ಯ ವಾಹಿನಿಗೆ ಬಂದಿದ್ದಾರೆ? ಯಾರು ಬಂದಿಲ್ಲ? ಅವರು ಹಿಂದುಳಿಯಲು ಏನು ಕಾರಣ? ಅವರನ್ನು ಮುಂದಕ್ಕೆ ತರಲು ಏನು ಮಾಡಬೇಕು? ಇವೆಲ್ಲಾ ತಿಳಿದುಕೊಳ್ಳಬೇಕು.

ಅಖಂಡ ಶ್ರೀನಿವಾಸ ಮೂರ್ತಿಗೆ ನ್ಯಾಯ ಸಿಗಬೇಕು ಎಂಬುದರ ಬಗ್ಗೆ ಎರಡು ಮಾತಿಲ್ಲ. ಆದರೆ ಈ ವಿಚಾರ ಈಗಾಗಲೇ ನ್ಯಾಯಾಲಯದ ಮುಂದೆ ಇರುವುದರಿಂದ ನಾನು ನನ್ನ ಅಭಿಪ್ರಾಯ ವ್ಯಕ್ತಪಡಿಸುವುದು ಸರಿಯಲ್ಲ ಎಂದರು.

About Author

Leave a Reply

Your email address will not be published. Required fields are marked *