ರಾಷ್ಟ್ರಪ್ರಶಸ್ತಿ ಪುರಸ್ಕೃತ ಡೊಳ್ಳು ಸಿನಿಮಾ ವೀಕ್ಷಿಸಿದ ಸಿದ್ದರಾಮಯ್ಯ
1 min readಬೆಂಗಳೂರು: ನಾನಾ ಕಾರಣಗಳಿಂದ ಚಿತ್ರಪ್ರೇಮಿಗಳನ್ನು ಆವರಿಸಿಕೊಳ್ಳುತ್ತಿರುವ ಡೊಳ್ಳು ಸಿನಿಮಾವನ್ನು ವಿಪಕ್ಷ ನಾಯಕ, ಸಿದ್ದರಾಮಯ್ಯ ನಿನ್ನೆ ಬೆಂಗಳೂರಿನ ಒರಾಯನ್ ಮಾಲ್ ನಲ್ಲಿ ಕಣ್ತುಂಬಿಕೊಂಡು, ಚಿತ್ರದ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ರಾಜಕೀಯದ ಕೆಲಸದ ನಡುವೆಯೂಬಿಡುವು ಮಾಡಿಕೊಂಡು ಸಿನಿಮಾ ವೀಕ್ಷಣೆ ಅವರು, ಸಿನಿಮಾ ತುಂಬಾ ಚೆನ್ನಾಗಿದೆ. ಗ್ರಾಮೀಣ ಪ್ರದೇಶದಲ್ಲಿರುವ ಜನಪದ ಕಲೆಯನ್ನು ಬೆಳೆಸಬೇಕು, ಉಳಿಯಬೇಕು ಎಂಬ ನಿಟ್ಟಿನಲ್ಲಿ ಸಿನಿಮಾ ಮಾಡಿದ್ದಾರೆ. ಕಲೆಗೆ ಜಾತಿ ಧರ್ಮ ಲಿಂಗಭೇದ ಯಾವುದು ಇರುವುದಿಲ್ಲ. ನಾಡಿನ ಸಾಂಪ್ರದಾಯಿಕ ಡೊಳ್ಳು ಬಾರಿಸುವ ಕಲೆಯನ್ನು ಪ್ರಧಾನವಾಗಿರಿಸಿಕೊಂಡು ನಿರ್ಮಿಸಿದ ಈ ಸಿನಿಮಾ ಅತ್ಯಂತ ಸೊಗಸಾಗಿ ಮೂಡಿಬಂದಿದೆ. ಚಿತ್ರ ತಂಡಕ್ಕೆ ನನ್ನ ಶುಭ ಹಾರೈಕೆಗಳು. ಇಂತಹ ಸಿನಿಮಾಗಳು ಬರಬೇಕು. ಇಡೀ ತಂಡ ಒಳ್ಳೆದಾಗಲಿ ಎಂದು ಶುಭ ಹಾರೈಸಿದರು. ಇದೇ ವೇಳೆ ಶಾಸಕ ಜಮೀರ್ ಅಹಮದ್ ಖಾನ್, ಇಡೀ ಚಿತ್ರತಂಡ ಹಾಜರಿತ್ತು.
ತನ್ನ ವಿಭಿನ್ನ ಕಂಟೆಂಟ್ ಜೊತೆಗೆ ರಾಷ್ಟ್ರಪ್ರಶಸ್ತಿಗೂ ಭಜನವಾಗಿರುವ, ಅಂತರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಮೆಚ್ಚುಗೆ ಪಡೆದಿರುವ ಡೊಳ್ಳು ಸಿನಿಮಾವನ್ನು ರಾಷ್ಟ್ರಪ್ರಶಸ್ತಿ ವಿಜೇತ ಸಾಗರ್ ಪುರಾಣಿಕ್ ನಿರ್ದೆಶನ ಮಾಡಿದ್ದು, ಕಾರ್ತಿಕ್ ಮಹೇಶ್ ಮತ್ತು ನಿಧಿ ಹೆಗಡೆ ಜೊತೆಗೆ ಬಾಬು ಹಿರಣ್ಣಯ್ಯ, ಚಂದ್ರ ಮಯೂರ್, ಶರಣ್ಯ ಸುರೇಶ್ ಮುಂತಾದ ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದಾರೆ.
ನಾಡಿನ ಜಾನಪದ ಕಲೆಯನ್ನು ಜಗತ್ತಿನ ಮುಂದೆ ತೆರೆದಿಡುವಂತಹ ಈ ಸಿನಿಮಾವನ್ನು ಒಡೆಯರ್ ಮೂವೀಸ್ ಬ್ಯಾನರ್ ನಡಿ ಪವನ್ ಒಡೆಯರ್, ಪತ್ನಿ ಅಪೇಕ್ಷಾ ಜೊತೆಗೂಡಿ ನಿರ್ಮಾಣ ಮಾಡಿದ್ದಾರೆ. ಆಗಸ್ಟ್ 26ರಂದು ‘ಡೊಳ್ಳು’ ಚಿತ್ರ ರಾಜ್ಯಾದ್ಯಂತ ರಿಲೀಸ್ ಆಗಲಿದೆ. ಸಂಭಾಷಣೆ ಮತ್ತು ಚಿತ್ರಕಥೆಯನ್ನು ಶ್ರೀನಿಧಿ ಬರೆದಿದ್ದಾರೆ. ಅನಂತ್ ಕಾಮತ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಅಭಿಲಾಷ್ ಕಲಾಥಿ ಛಾಯಾಗ್ರಹಣ ಈ ಚಿತ್ರಕ್ಕಿದೆ.
ಈ ಚಿತ್ರವನ್ನು ನೋಡುವಂತೆ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರಿಗೂ ಚಿತ್ರತಂಡ ಇತ್ತೀಚೆಗೆ ಆಮಂತ್ರಣ ನೀಡಿತ್ತು. ಶೀರ್ಘದಲ್ಲಿಯೇ ರಾಜ್ಯಪಾಲರು ಸಿನಿಮಾ ವೀಕ್ಷಣೆ ಮಾಡಲಿದ್ದಾರೆ.