ಅಗತ್ಯ ಇರುವವರಿಗೆ ಉಚಿತ ಪೌಷ್ಟಿಕ ಆಹಾರ ಒದಗಿಸುವಂತೆ ಸರ್ಕಾರವನ್ನು ಒತ್ತಾಯಿಸಿದ ಸಿದ್ದರಾಮಯ್ಯ

1 min read

ಬೆಂಗಳೂರು: ಕೊರೋನಾದ ೩ ನೇ ಅಲೆಯನ್ನು ಸಮರ್ಥವಾಗಿ ಎದುರಿಸಬೇಕಾದರೆ ಜನರು ಹಸಿವಿನಿಂದ ನರಳದಂತೆ ನೋಡಿಕೊಳ್ಳಬೇಕು. ಪೌಷ್ಟಿಕಾಂಶಯುಕ್ತ ಆಹಾರಗಳನ್ನು ಜನರಿಗೆ ಕೈಗೆಟುಕುವ ದರಗಳಲ್ಲಿ ನೀಡಬೇಕು. ಅಗತ್ಯ ಇರುವವರನ್ನು ಗುರ್ತಿಸಿ ಅವರಿಗೆ ಉಚಿತವಾಗಿ ಪೌಷ್ಟಿಕ ಆಹಾರವನ್ನು ಒದಗಿಸಬೇಕು ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಈ ಸಂಬಂಧ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಬರೆದಿರುವ ಪತ್ರದ ಮುಖ್ಯಾಂಶಗಳು ಹೀಗಿದೆ :

ಉತ್ತಮ ಆಹಾರವು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ರೋಗ ನಿರೋಧಕ ಶಕ್ತಿಯಿದ್ದರೆ ಕೊರೋನಾದಂತಹ ಮಾರಣಾಂತಿಕ ಸಾಂಕ್ರಾಮಿಕವನ್ನು ಸಮರ್ಥವಾಗಿ ಎದುರಿಸಬಹುದಾಗಿದೆ.

ಆರೋಗ್ಯ ವ್ಯವಸ್ಥೆಯನ್ನು ಸಿದ್ಧವಾಗಿಟ್ಟುಕೊಳ್ಳವ ಜೊತೆಯಲ್ಲೆ ಜನರ ರೋಗ ನಿರೋಧಕ ಶಕ್ತಿಯನ್ನು ಸುಧಾರಿಸುವ ಕ್ರಮಗಳನ್ನು ಸರ್ಕಾರವು ಗಂಭೀರವಾಗಿ ಪರಿಗಣಿಸಿ ಕೂಡಲೇ ಕಾರ್ಯೋನ್ಮುಖರಾಗಬೇಕು.

ಬಾದಾಮಿಯಿಂದ ನೂರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಅಭಿಮಾನಿಗಳು ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮುಂಬರುವ ಚುನಾವಣೆಯಲ್ಲಿ ಬಾದಾಮಿ ಕ್ಷೇತ್ರದಿಂದಲೇ ಸ್ಪರ್ಧಿಸುವಂತೆ ಮನವಿ ಮಾಡಿದರು.

ಕೋವಿಡ್‌ನ ಮೊದಲ ಮತ್ತು ಎರಡನೆ ಅಲೆಗಳು ರಾಷ್ಟ್ರ ಮತ್ತು ರಾಜ್ಯದ ಜನರ ಮೇಲೆ ಮಾರಣಾಂತಿಕ ಪರಿಣಾಮಗಳನ್ನು ಬೀರಿವೆ. ದೇಶದಲ್ಲಿ ಸೂತಕದ ವಾತಾವರಣ ಮುಗಿವ ಮೊದಲೆ, ವೈರಾಣು ಮತ್ತು ಸಾಂಕ್ರಾಮಿಕ ರೋಗಗಳ ತಜ್ಞರು ಹಾಗೂ ಆರೋಗ್ಯ ಕ್ಷೇತ್ರದ ಪರಿಣತರು ಮೂರನೆ ಅಲೆಯ ಕುರಿತು ಆತಂಕದ ಮಾತುಗಳನ್ನಾಡುತ್ತಿದ್ದಾರೆ.

ಬರಲಿರುವ ಮೂರನೆ ಅಲೆಯು ಮಕ್ಕಳ ಮೇಲೆ ಹಾಗೂ ಮೊದಲ ಎರಡು ಅಲೆಗಳಲ್ಲಿ ಕೊರೋನಾದಿಂದ ಬಚಾವಾದವರ ಮೇಲೆ ದುಷ್ಪರಿಣಾಮಗಳನ್ನುಂಟು ಮಾಡುವ ಸಾಧ್ಯತೆ ಇದೆಯೆಂದು ಅಂದಾಜಿಸುತ್ತಿದ್ದಾರೆ.

ರಾಜ್ಯದ ಮಕ್ಕಳು ದೊಡ್ಡ ಪ್ರಮಾಣದಲ್ಲಿ ಅಪೌಷ್ಟಿಕತೆಯ ಸಮಸ್ಯೆಯನ್ನೆದುರಿಸುತ್ತಿದ್ದಾರೆ. ಅಪೌಷ್ಟಿಕತೆಯು ಮಾರಣಾಂತಿಕವಾದ ಗಂಭೀರ ಸಮಸ್ಯೆಗಳಿಗೆ ಮಕ್ಕಳು ಮತ್ತು ಯುವಜನತೆಯನ್ನು ದೂಡುತ್ತಿದೆ. ಕೊರೋನ ನೆಪದಲ್ಲಿ ಅಂಗನವಾಡಿ ನೀಡುತ್ತಿದ್ದ ಪೌಷ್ಟಿಕ ಆಹಾರ ಮತ್ತು ಶಾಲೆಗಳಲ್ಲಿ ತಯಾರಿಸುತ್ತಿದ್ದ ಬಿಸಿಯೂಟವನ್ನು ನಿಲ್ಲಿಸಿದ್ದರಿಂದಾಗಿ ಅಪೌಷ್ಟಿಕತೆಯ ಪ್ರಮಾಣ ಇನ್ನಷ್ಟು ಹೆಚ್ಚಾಗಿದೆ.

ಮೂರು ನಾಲ್ಕು ತಿಂಗಳಿಗೊಮ್ಮೆ ಅಕ್ಕಿ ಮುಂತಾದ ಆಹಾರ ಪದಾರ್ಥಗಳನ್ನು ಮನೆಗಳಿಗೆ ನೀಡುತ್ತಿರುವುದರಿಂದ ಮಕ್ಕಳಿಗೆ ಸಿಗಬೇಕಾದ ಆಹಾರ ಸಮರ್ಪಕವಾಗಿ ಸಿಗುತ್ತಿಲ್ಲ.

ರಾಜ್ಯದ ಮಕ್ಕಳು, ಮಹಿಳೆಯರು ಹಾಗೂ ಯುವಜನರಲ್ಲಿನ ಅಪೌಷ್ಟಿಕತೆಯ ಪ್ರಮಾಣ ಗಾಬರಿ ಹುಟ್ಟಿಸುವಂತಿದೆ.

ಒಕ್ಕೂಟ ಸರ್ಕಾರದ ಆರೋಗ್ಯ ಇಲಾಖೆಯ ವತಿಯಿಂದ ನಡೆಸಿರುವ ಸಮೀಕ್ಷೆ-೫ (೨೦೧೯-೨೦ ) ರ ಪ್ರಕಾರ ರಾಜ್ಯದಲ್ಲಿರುವ ನಿಗಧಿತ ಪ್ರಮಾಣಕ್ಕಿಂತ ಕಡಿಮೆ ತೂಕದ ಮಕ್ಕಳ ಪ್ರಮಾಣ ಶೇ.೩೩ ರಷ್ಟಿದೆ. ಶೇ.೬೫.೫ ರಷ್ಟು ಮಕ್ಕಳ ಹಿಮೊಗ್ಲೋಬಿನ್ ಪ್ರಮಾಣ ೧೧ ಗ್ರಾಂ ಗಿಂತ ಕಡಿಮೆ ಇದೆ. ಇದು ಅತ್ಯಂತ ಗಾಬರಿ ಹುಟ್ಟಿಸುವ ಸಂಗತಿಯಾಗಿದೆ.

ಅದೇ ರೀತಿ ೧೦೦೦ ಮಕ್ಕಳಲ್ಲಿ ೨೫ ಮಕ್ಕಳು ೫ ವರ್ಷ ತುಂಬುವ ಮೊದಲೆ ರಾಜ್ಯದಲ್ಲಿ ಮರಣ ಹೊಂದುತ್ತಿದ್ದಾರೆ. ಗ್ರಾಮೀಣ ಕರ್ನಾಟಕದಲ್ಲಿ ೨೮ ಮಕ್ಕಳು ಮರಣ ಹೊಂದುತ್ತಿದ್ದಾರೆ. ಒಕ್ಕೂಟ ಸರ್ಕಾರದ ಸುಸ್ಥಿರ ಅಭಿವೃದ್ಧಿ ಗುರಿ ೨೦೨೦-೨೧ ರ ಸಮೀಕ್ಷೆಯ ಪ್ರಕಾರ ಈ ವಯಸ್ಸಿನ ಮಕ್ಕಳ ಮರಣ ಪ್ರಮಾಣವ ೨೮ ರಷ್ಟಿದೆ. ಹಾಗಾಗಿ ೨೦೧೯ -೨೦ ಕ್ಕೆ ಹೋಲಿಸಿದರೆ ಈ ಪ್ರಮಾಣ ಹೆಚ್ಚಾಗಿದೆ.

ಕಡಿಮೆ ತೂಕದ ಮಕ್ಕಳ ಪ್ರಮಾಣ ಶೇ. ೪೦ ಕ್ಕಿಂತ ಹೆಚ್ಚು ಇರುವ ಜಿಲ್ಲೆಗಳಲ್ಲಿ ಯಾದಗಿರಿ, ಕೊಪ್ಪಳ, ಬಾಗಲಕೋಟೆ, ರಾಯಚೂರು, ಧಾರವಾಡ ಮುಂತಾದ ಜಿಲ್ಲೆಗಳಿವೆ. ರಾಜ್ಯದ ಸರಾಸರಿ ಪ್ರಮಾಣ ಶೇ.೩೨ ರಷ್ಟಿದೆ.

ತೀವ್ರ ಅಪೌಷ್ಟಿಕತೆಯುಳ್ಳವರಲ್ಲಿ ಶೇ. ೨೫ ರಷ್ಟು ಮಕ್ಕಳು ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲೆ ಇದ್ದಾರೆ ಎಂಬುದು ತೀವ್ರ ಕಳವಳದ ವಿಚಾರ.

ಇಂಥ ಸ್ಥಿತಿಯಿರುವಾಗ ರಾಜ್ಯ ಸರ್ಕಾರವು ಮಕ್ಕಳ ಆರೋಗ್ಯವನ್ನು ಸುಧಾರಿಸುವ ನಿಟ್ಟಿನಲ್ಲಿ ಸಮರೋಪಾದಿ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ.

ಅಪೌಷ್ಟಿಕತೆಯ ಸಮಸ್ಯೆಗಳಿಂದ ಬಳಲುತ್ತಿರುವ ಮಕ್ಕಳು, ಮಹಿಳೆಯರು ಮತ್ತಿತರರನ್ನು ಸಮರ್ಪಕವಾಗಿ ಗುರ್ತಿಸಿ ಅವರ ಆರೋಗ್ಯವನ್ನು ಸುಧಾರಿಸುವ ಕೆಲಸವನ್ನು ಮಾಡಲೇಬೇಕಾಗಿದೆ. ಈಗಾಗಲೆ ನಮ್ಮ ಪಕ್ಷದ ಹಲವು ಶಾಸಕರು ಸಿದ್ಧ ಪೌಷ್ಟಿಕಾಂಶಗಳುಳ್ಳ ಔಷಧಿ, ಆಹಾರಗಳನ್ನು ವಿತರಿಸುತ್ತಿದ್ದಾರೆ.

ಸರ್ಕಾರವು ಕೇವಲ ಬಾಯಿಮಾತಿನ ಕೆಲಸಗಳನ್ನು ಬಿಟ್ಟು ಅಪೌಷ್ಟಿಕತೆಯ ಸಮಸ್ಯೆಗಳನ್ನು ಎದುರಿಸುತ್ತಿರುವ ಮಕ್ಕಳು ಮತ್ತು ಇತರೆ ವಯಸ್ಸಿನ ಜನರನ್ನು ಗುರ್ತಿಸಿ ಸಮರೋಪಾದಿಯಲ್ಲಿ ಪೌಷ್ಟಿಕಾಂಶಯುಕ್ತ ಆಹಾರ ವಿತರಣೆ ಮಾಡುವಂತೆ ಆಗ್ರಹಿಸುತ್ತೇನೆ.

About Author

Leave a Reply

Your email address will not be published. Required fields are marked *