ಡಿಸಿಸಿ ಬ್ಯಾಂಕ್‌ನಲ್ಲಿ ಸಾಲಪಡೆದು ಕೋವಿಡ್‌ನಿಂದ ಮೃತಪಟ್ಟವರ ಸಾಲ ಮನ್ನಾ: ಸಚಿವ ಎಸ್ ಟಿ ಎಸ್

1 min read

ಮೈಸೂರು: ರಾಜ್ಯ ಸರ್ಕಾರ ರೈತರ ಪರವಿದೆ. ರೈತರ ಸಂಕಷ್ಟಕ್ಕೆ ಸದಾ ನೆರವಾಗುತ್ತಿದೆ. ಜಿಲ್ಲಾ ಸಹಕಾರ ಬ್ಯಾಂಕ್ ಗಳ ಮೂಲಕ ಸಾಲ ಪಡೆದವರ ಕುಟುಂಬದವರು ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದರೆ, ಅಂಥವರ ಸಾಲ ಮನ್ನಾ ಮಾಡುವ ಚಿಂತನೆಯನ್ನು ಮುಖ್ಯಮಂತ್ರಿಗಳು ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಶೀಘ್ರದಲ್ಲಿಯೇ ಕ್ರಮ ಕೈಗೊಳ್ಳಲಾಗುವುದು ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ತಿಳಿಸಿದರು.

ಮೈಸೂರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ವತಿಯಿಂದ ರೈತರಿಗೆ ಸಾಲ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ರಾಜ್ಯದಲ್ಲಿ ಡಿಸಿಸಿ ಬ್ಯಾಂಕ್ ಗಳಿಂದ ಸಾಲ ಪಡೆದಿರುವವರು ಕೋವಿಡ್ ನಿಂದ ಮೃತಪಟ್ಟಿದ್ದರೆ ಅಂಥವರ ಪಟ್ಟಿ ಹಾಗೂ ಸಾಲ ವಿವರವನ್ನು ಕೊಡುವಂತೆ ಈಗಾಗಲೇ ಅಪೆಕ್ಸ್ ಬ್ಯಾಂಕ್, ಡಿಸಿಸಿ ಬ್ಯಾಂಕ್ ಎಂಡಿಗಳಿಗೆ ನಾನು ಸೂಚನೆಯನ್ನು ನೀಡಿದ್ದೇನೆ. ಶೀಘ್ರದಲ್ಲಿಯೇ ವಿವರಗಳನ್ನು ಪಡೆದು ಕಾರ್ಯಕ್ರಮವನ್ನು ಆಯೋಜಿಸಿ ಸಾಲಮನ್ನಾವನ್ನು ಘೋಷಿಸಲಾಗುವುದು ಎಂದು ತಿಳಿಸಿದರು.

ಪ್ರಸಕ್ತ ಸಾಲಿನಲ್ಲಿ 30 ಲಕ್ಷ ರೈತರಿಗೆ 20810 ಕೋಟಿ ರೂಪಾಯಿ ಬೆಳೆ ಸಾಲ ನೀಡುವಂತೆ ಮುಖ್ಯಮಂತ್ರಿಗಳು ಗುರಿಯನ್ನು ನಿಗದಿಪಡಿಸಿದ್ದು, ಕಳೆದ ವರ್ಷದಂತೆ ಶೇಕಡಾ 100ರ ಗುರಿಯನ್ನು ಮೀರಿ ಸಾಲ ವಿತರಣೆ ಮಾಡಬೇಕೆಂಬ ಸೂಚನೆ ನೀಡಿದ್ದಾಗಿ ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ತಿಳಿಸಿದರು.

ಕಳೆದ ವರ್ಷ ಸಾಲ ನೀಡಿಕೆ ಗುರಿಯನ್ನು ಮೀರಿ ಹೇಗೆ ಶೇ. 114ರಷ್ಟು ಬೆಳೆಸಾಲವನ್ನು ನೀಡಲಾಗಿದೆಯೋ ಹಾಗೆಯೇ ಈ ಬಾರಿಯೂ ಸಹಕಾರ ಇಲಾಖೆ ಸಾಧನೆ ಮಾಡಲಿ ಎಂದು ಮುಖ್ಯಮಂತ್ರಿಗಳು ಸೂಚಿಸಿದ್ದಾರೆ. ಇದರಂತೆ ಈಚೆಗೆ ಬೆಂಗಳೂರಿನಲ್ಲಿ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆದ ಸಮಾರಂಭದಲ್ಲಿ ಬೆಂಗಳೂರು, ಬೆಂಗಳೂರು ಗ್ರಾಮಾಂತರ ವಿಭಾಗದ ಡಿಸಿಸಿ ಬ್ಯಾಂಕ್ ವತಿಯಿಂದ ಕಾರ್ಯಕ್ರಮ ನಡೆಸಿ, ಪ್ರಸಕ್ತ ಸಾಲಿನ ಸಾಲ ನೀಡಿಕೆ ಪ್ರಕ್ರಿಯೆಗೆ ಮುಖ್ಯಮಂತ್ರಿಗಳು ಚಾಲನೆಯನ್ನು ನೀಡಿದ್ದಾರೆ. ಮೈಸೂರಿನಲ್ಲಿ ಈಗ 2ನೇ ಹಂತದ ಕಾರ್ಯಕ್ರಮಕ್ಕೆ ನಾನು ಚಾಲನೆ ಕೊಟ್ಟಿದ್ದೇನೆ ಎಂದು ತಿಳಿಸಿದರು.

ನಾಳೆ ಕೊಡಗು ಜಿಲ್ಲೆಗೆ ಭೇಟಿ ನೀಡಲಿದ್ದು, ಅಲ್ಲಿ ಸಾಲ ನೀಡಿಕೆಗೆ ಚಾಲನೆಯನ್ನು ಕೊಡಲಿದ್ದೇನೆ. ಹೀಗೆ 21 ಡಿಸಿಸಿ ಬ್ಯಾಂಕ್ ಗಳಿಗೂ ಭೇಟಿ ನೀಡಿ ಸಾಲ ನೀಡಿಕೆ ಪ್ರಕ್ರಿಯೆಗೆ ಚಾಲನೆ ನೀಡಲು ನಾನು ಪ್ರಾಮಾಣಿಕವಾಗಿ ಬದ್ಧನಿದ್ದೇನೆ. ಸಹಕಾರ ಸಚಿವನಾಗಿ ಇದರ ಎಲ್ಲ ಕಾರ್ಯಗಳ ಮೇಲೆ ನಿಗಾ ವಹಿಸಿ, ಸೂಕ್ತ ಮಾರ್ಗದರ್ಶನವನ್ನು ನೀಡುವ ಮುಖಾಂತರ ನಾನು ಕ್ರಮವಹಿಸುತ್ತೇನೆ ಎಂದು ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಹೇಳಿದರು.

ಕಳೆದ ವರ್ಷ ಶೇ.114 ಸಾಧನೆ; ಎಸ್ ಟಿ ಎಸ್ ಸಂತಸ

ಕಳೆದ ವರ್ಷ 24.50 ಲಕ್ಷ ರೈತರಿಗೆ 15,300 ಕೋಟಿ ರೂಪಾಯಿ ಅಲ್ಪಾವಧಿ, ಮಧ್ಯಮಾವಧಿ ಬೆಳೆಸಾಲವನ್ನು ವಿತರಣೆ ಮಾಡುವ ಗುರಿಯನ್ನು ಹಾಕಿಕೊಳ್ಳಲಾಗಿತ್ತು. ಆದರೆ, ಈ ನಿಟ್ಟಿನಲ್ಲಿ 21 ಡಿಸಿಸಿ ಬ್ಯಾಂಕ್ ಗಳು ಉತ್ತಮ ಸಾಧನೆ ಮಾಡಿದ್ದು, 17,108 ಕೋಟಿ ರೂಪಾಯಿ ಸಾಲವನ್ನು ವಿತರಣೆ ಮಾಡುವ ಮೂಲಕ ಶೇ. 114 ಸಾಧನೆ ಮಾಡಿದೆ ಎಂದು ಸಚಿವರು ತಿಳಿಸಿದರು.

ಕೋವಿಡ್ ಸಂದರ್ಭ ಸಹಿತ ಲಾಕ್ಡೌನ್ ಇದ್ದರೂ ಸಹ ಸಾಲ ಪಡೆದವರು ಪ್ರಾಮಾಣಿಕವಾಗಿ ಸಾಲವನ್ನು ಮರುಪಾವತಿ ಮಾಡುತ್ತಿದ್ದಾರೆ. ಈ ಮೂಲಕ ಕಳೆದ ವರ್ಷ ಶೇಕಡಾ 95ರಷ್ಟು ಸಾಲದ ಮರುಪಾವತಿಯಾಗಿದೆ. ರೈತರು ತಮ್ಮ ಪ್ರಾಮಾಣಿಕತನವನ್ನು ಉಳಿಸಿಕೊಂಡಿದ್ದಾರೆಂದು ಸಚಿವರು ಶ್ಲಾಘಿಸಿದರು.

ಶಿವಮೊಗ್ಗ ಡಿಸಿಸಿ ಬ್ಯಾಂಕ್ ಹಾಗೂ ಗುಲ್ಬರ್ಗ ಡಿಸಿಸಿ ಬ್ಯಾಂಕ್ ಗಳಲ್ಲಿನ ಅಕ್ರಮಗಳ ಮೇಲೆ ಕ್ರಮ ಕೈಗೊಂಡಿದ್ದು, ಅಲ್ಲಿಯೂ ಸಹ ಸೂಕ್ತ ಕ್ರಮವಹಿಸಿ ಸಾಲ ನೀಡಿಕೆಗೆ ಚಾಲನೆಯನ್ನು ನೀಡಲಾಗುವುದು. ಜೊತೆಗೆ ಗುಲ್ಬರ್ಗ ಡಿಸಿಸಿ ಬ್ಯಾಂಕ್ ನಿಂದ ಅಪೆಕ್ಸ್ ಬ್ಯಾಂಕ್ ಗೆ ಬಾಕಿ ಇರುವ ಹಣವನ್ನು ತುಂಬಿದ್ದಲ್ಲದೆ, ಈ ಬಾರಿ ಸುಮಾರು 50 ಕೋಟಿ ರೂಪಾಯಿಯಷ್ಟು ಸಾಲವನ್ನು ನೀಡುವ ಪ್ರಕ್ರಿಯೆಗೆ ಚಾಲನೆಯನ್ನು ನೀಡಲಾಗುತ್ತಿದೆ. ಹೀಗಾಗಿ ಲಾಭದಲ್ಲಿರುವ 21 ಡಿಸಿಸಿ ಬ್ಯಾಂಕ್ ಗಳ ಮೂಲಕ ರೈತರಿಗೆ ಯಾವುದೇ ತೊಂದರೆಯಾಗದಂತೆ ಸಾಲವನ್ನು ಕೊಡುವುದರ ಸಹಿತ ವಸೂಲಿಯನ್ನೂ ಮಾಡಲಾಗುತ್ತಿದೆ ಎಂದು ಸಚಿವರು ತಿಳಿಸಿದರು.

ಚಾಮರಾಜನಗರ, ಮೈಸೂರು ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಹರೀಶ್ ಗೌಡ ಅವರು ಉತ್ತಮವಾಗಿ ಕಾರ್ಯನಿರ್ವಹಣೆ ಮಾಡುತ್ತಿದ್ದು, ಡಿಸಿಸಿ ಬ್ಯಾಂಕ್ ಅನ್ನು ಲಾಭದಲ್ಲಿ ಕೊಂಡೊಯ್ಯುತ್ತಿದ್ದಾರೆ. ಹೀಗೆ ಮುಂದುವರಿಸಿಕೊಂಡು ಹೋಗಬೇಕೆಂದು ಸಚಿವರು ಸಲಹೆ ಮಾಡಿದರು.

ಚಾಮರಾಜನಗರ, ಮೈಸೂರು ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಹರೀಶ್ ಗೌಡ, ಮಿಲ್ಕ್ ಯೂನಿಯನ್ ಅಧ್ಯಕ್ಷರಾದ ಪ್ರಸನ್ನ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

About Author

Leave a Reply

Your email address will not be published. Required fields are marked *