ಮುಖ್ಯಮಂತ್ರಿಯವರೇ, ನಿಮ್ಮ ಕುರ್ಚಿ ರಕ್ಷಣೆಯ ಕಸರತ್ತು ಮುಗಿದಿದ್ದರೆ ಸ್ವಲ್ಪ ಈ ಕಡೆ ಗಮನ ಹರಿಸಿ: ಸಿದ್ದರಾಮಯ್ಯ
1 min readಬೆಂಗಳೂರು: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಲಸಿಕೆ ಪಡೆಯುತ್ತಿರುವವರ ಸಂಖ್ಯೆ ಇಳಿಕೆಯ ಹಾದಿಯಲ್ಲಿರುವ ಬಗ್ಗೆ ಮಾಜಿ ಮುಖ್ಯಮಂತ್ರಿಗಳು, ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರ ಪ್ರತಿಕ್ರಿಯೆ ನೀಡಿದ್ದಾರೆ.
ಪ್ರಧಾನಿ ನರೇಂದ್ರಮೋದಿಯವರ ಪ್ರಚಾರ ವೈಭವದ ಲಸಿಕೋತ್ಸವ ಮುಗಿದ ನಂತರದ ದಿನಗಳಲ್ಲಿ ಲಸಿಕೆ ಪಡೆದವರ ಸಂಖ್ಯೆ ಕುಸಿಯುತ್ತಾ ಬಂದು ಈಗ ಅರ್ಧಕ್ಕಿಳಿದಿದೆ. ಮೈಸೂರು,ಧಾರವಾಡ, ಉಡುಪಿ ಜಿಲ್ಲೆಗಳು ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಲಸಿಕೆ ಪೂರೈಕೆ ಇಲ್ಲದೆ ಹಾಹಾಕಾರ ಎದ್ದಿದೆ. ಮುಖ್ಯಮಂತ್ರಿಯವರೇ, ನಿಮ್ಮ ಕುರ್ಚಿ ರಕ್ಷಣೆಯ ಕಸರತ್ತು ಮುಗಿದಿದ್ದರೆ ಸ್ವಲ್ಪ ಈ ಕಡೆ ಗಮನ ಹರಿಸಿ.
ಜೂನ್ 21ರಂದು ರಾಜ್ಯದಲ್ಲಿ ನೀಡಿರುವ ಕೊರೊನಾ ಲಸಿಕೆಯ ಸಂಖ್ಯೆ-5,78,841 ಈ ಸಂಖ್ಯೆ ಕಡಿಮೆಯಾಗುತ್ತಾ ಬಂದು ಜೂನ್ 24ರಂದು 2,89,581ಕ್ಕೆ ಇಳಿದಿದೆ. ಜಿಲ್ಲೆಗಳಿಂದ ಲಭ್ಯವಾಗುತ್ತಿರುವ ಮಾಹಿತಿ ಪ್ರಕಾರ ಕೆಲವು ತಾಲೂಕು ಮತ್ತು ಹೋಬಳಿ ಕೇಂದ್ರಗಳಿಗೆ ಕಳೆದೆರಡು ದಿನಗಳಿಂದ ಲಸಿಕೆ ಪೂರೈಕೆಯಾಗಿಲ್ಲ.
ಔಷಧಿ ಇಲ್ಲದ ಕೊರೊನಾ ಸೋಂಕಿಗೆ ಸದ್ಯ ಲಸಿಕೆಯೇ ಸಂಜೀವಿನಿ. ಲಸಿಕೆ ನೀಡಿಕೆಯಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ಕೇಂದ್ರ ಸರ್ಕಾರವೇ ಜವಾಬ್ದಾರಿ ವಹಿಸಿಕೊಂಡಿದೆ. ಈಗ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಆದರೆ ಪ್ರಧಾನಿ ನರೇಂದ್ರ ಮೋದಿಯವರ ಲಸಿಕೋತ್ಸವದ ಪ್ರಚಾರ ವೈಭವ ಮಾತ್ರ ನಿಂತಿಲ್ಲ. ಅವರನ್ನು ಪ್ರಶ್ನಿಸುವ ಧೈರ್ಯ ರಾಜ್ಯದ ಬಿಜೆಪಿ ಸರ್ಕಾರಕ್ಕೂ ಇಲ್ಲ.
ಕಾರ್ಯಕ್ರಮಗಳ ಘೋಷಣೆ, ಜನತೆಗೆ ಬೋದನೆಗಾಗಿ ಮಾತ್ರ ಟಿವಿ ಪರದೆ ಮೇಲೆ ಕಾಣಿಸಿಕೊಳ್ಳುವ ಪ್ರಧಾನಿ ನರೇಂದ್ರ ಮೋದಿಯವರು ತಕ್ಷಣ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ನಡೆಸಿ ಲಸಿಕೆ ನೀಡಿಕೆಯ ಕಾರ್ಯಕ್ರಮದ ಪರಿಶೀಲನೆ ನಡೆಸಬೇಕು.
ಮುಖ್ಯಮಂತ್ರಿಯವರು ತಕ್ಷಣ ಜಿಲ್ಲಾಧಿಕಾರಿಗಳ ಸಭೆ ಕರೆದು ಲಸಿಕೆ ನೀಡಿಕೆಯಲ್ಲಿನ ಸಮಸ್ಯೆ ಬಗ್ಗೆ ಚರ್ಚಿಸಬೇಕು. ಜಿಲ್ಲಾ ಉಸ್ತುವಾರಿ ಸಚಿವರನ್ನು ಜಿಲ್ಲೆಗಳಿಗೆ ಕಳಿಸಿ ಅಲ್ಲಿಂದ ಮಾಹಿತಿಯನ್ನು ಪಡೆದುಕೊಳ್ಳಬೇಕು. ಲಸಿಕೆ ಕೊರತೆಗೆ ಕಾರಣ ಪೂರೈಕೆಯಲ್ಲಿನ ಸಮಸ್ಯೆಯೇ ಇಲ್ಲವೇ ವಿತರಣೆಯಲ್ಲಿನ ಅವ್ಯವಸ್ಥೆಯೇ ಎನ್ನುವುದನ್ನು ಪರಿಶೀಲಿಸಬೇಕು ಎಂದು ಆಗ್ರಹಿಸಿದ್ದಾರೆ.