ಐಎಎಸ್ ಅಧಿಕಾರಿಗಳೇನು ಸತ್ಯ ಹರಿಶ್ಚಂದ್ರರೇ? ಎಸ್ ಟಿ ಸೋಮಶೇಖರ್ ಪ್ರಶ್ನೆ!
1 min readಎರಡು ವರ್ಷ ಕಳೆದರು ಮೌದ್ಗಿಲ್ ಗೆ ರೈತರ ಭೂದಾಖಲೆಗಳನ್ನು ಸರಿಪಡಿಸಲಾಗಿಲ್ಲ: ಸಚಿವ ಎಸ್.ಟಿ.ಸೋಮಶೇಖರ್
ಐಎಎಸ್ ಅಧಿಕಾರಿಗಳೇನು ಸತ್ಯ ಹರಿಶ್ಚಂದ್ರರೇ?
ಚಾಮರಾಜನಗರ: ಎರಡು ವರ್ಷ ಕಳೆದರೂ ರೈತರ ಭೂ ದಾಖಲೆಗಳನ್ನು ಸರಿಪಡಿಸಲಾಗದ ಮನೀಶ್ ಮೌದ್ಗಿಲ್ ಗೆ ತನಿಖೆಯಾಗಿರುವ ಭೂಅಕ್ರಮ ಆರೋಪದ ಕುರಿತು ಮತ್ತೊಮ್ಮೆ ತರಾತುರಿಯಲ್ಲಿ ತನಿಖೆಗೆ ಮುಂದಾಗಿರುವುದರ ಹಿಂದಿನ ಉದ್ದೇಶವಾದರೂ ಏನು ಎಂದು ಸಹಕಾರ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಪ್ರಶ್ನಿಸಿದರು.
ಶಿಕ್ಷಕರ ದಿನಾಚರಣೆ ಅಂಗವಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಶಿಕ್ಷಕರಿಗೆ ಪುರಸ್ಕಾರ ಸಮಾರಂಭದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಭೂ ದಾಖಲೆಗಳನ್ನು ಸರಿಪಡಿಸುವ ಕಾರ್ಯ ಮಾಡಿದ್ದರೆ ರೈತರಿಗೆ ಅನುಕೂಲವಾಗುತ್ತಿತ್ತು. ಆದರೆ ಅದನ್ನು ಬಿಟ್ಟು ಪ್ರಾದೇಶಿಕ ಆಯುಕ್ತರ ನೇತೃತ್ವದಲ್ಲಿ ನಡೆದಿದ್ದ ತನಿಖೆಯನ್ನು ಮರು ತನಿಖೆ ಮಾಡಿಸುವುದರಲ್ಲಿ ಅರ್ಥವೇನಿದೆ ಎಂದು ಪ್ರಶ್ನಿಸಿದರು.
ಐಎಎಸ್ ಅಧಿಕಾರಿಗಳು ಏನೂ ಸತ್ಯ ಹರಿಶ್ಚಂದ್ರರಾ? ಅವರು ಮಾಡಿರುವ ಅಕ್ರಮಗಳ ಬಗ್ಗೆ ಮಾತನಾಡಬಾರದಾ? ಐಎಎಸ್ ಅಧಿಕಾರಿ ಭೂ ಅಕ್ರಮದ ಬಗ್ಗೆ ಸಾ.ರಾ.ಮಹೇಶ್ ಅವರು ಸರ್ಕಾರದ ಗಮನಕ್ಕೆ ತಂದಿದ್ದಾರೆ. ಮುಖ್ಯಮಂತ್ರಿಗಳು ಆ ಬಗ್ಗೆ ಕ್ರಮಕೈಗೊಳ್ಳುತ್ತಾರೆ ಎಂದು ಹೇಳಿದರು.
ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಬುದ್ಧಿವಂತರಿದ್ದಾರೆ, ಸಮರ್ಥರಿದ್ದಾರೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸರ್ಕಾರ ನಡೆಸುತ್ತಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಎಲ್ಲರನ್ನು ಒಟ್ಟಿಗೆ ಕರೆದುಕೊಂಡು ಚುನಾವಣೆ ಎದುರಿಸಲಿದ್ದಾರೆ. ಈ ವಿಚಾರದಲ್ಲಿ ಅಮಿತ್ ಶಾ ಅವರು ಹೇಳಿದ್ದೇ ಅಂತಿಮ ಎಂದರು.
ಜಿಲ್ಲೆಯ ಕೆರೆಗಳಿಗೆ ನೀರು ತುಂಬಿಸುವ ವಿಚಾರವಾಗಿ ಈ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಮಾತನಾಡುತ್ತೇನೆ ಎಂದು ಹೇಳಿದರು.