ಗಾಂಜಾ ಮಾರಾಟ: ನಾಲ್ವರ ಬಂಧನ; 20.6 ಕೆಜಿ ಗಾಂಜಾ ವಶಕ್ಕೆ

1 min read

ಬೆಂಗಳೂರು,ಜ.19-ನಗರದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ನಾಲ್ವರನ್ನು ವಿ.ವಿ.ಪುರಂ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು ನಗರ ನ್ಯೂ ಟಿಂಬರ್‌ಯಾರ್ಡ್ ಲೇಔಟ್ ನಿವಾಸಿ ಪುರುಷೋತ್ತಮ್ ಎನ್. ಯಾನೆ ಮಂಜ (26), ಶ್ರೀನಗರ ನಿವಾಸಿ ಕಿರಣ್ ಆರ್. (21), ಕಾಟನ್‌ಪೇಟೆ ನಿವಾಸಿ ಕಾರ್ತಿಕ್ ವಿ. (21) ಮತ್ತು ಕನಕನಪಾಳ್ಯ ನಿವಾಸಿ ರಾಹುಲ್ ಯಾನೆ ಅರ್ಜುನ್ ಅಲಿಯಾಸ್ ತೊಡೆ (28) ಬಂಧಿತ ಆರೋಪಿಗಳು.
ಬಂಧಿತ ಆರೋಪಿಗಳಿಂದ 6 ಲಕ್ಷ ರೂ. ಮೌಲ್ಯದ 20.600 ಕಿಲೋ ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ. ಅಲ್ಲದೆ, ಕೃತ್ಯಕ್ಕೆ ಬಳಸಿದ ಹೋಂಡಾ ಸಿಟಿ ಕಾರು, ಒಂದು ಉದ್ದನೆಯ ಮಚ್ಚು, ನಗದು ಹಣ, ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳು ಈ ಹಿಂದೆ ಕೊಲೆ ಯತ್ನ, ಹಲ್ಲೆಯಂಥ ಹಲವಾರು ಪ್ರಕರಣಗಳಲ್ಲಿ ಆರೋಪಿಯಾಗಿರುವ ಕುಳ್ಳು ರಿಜ್ವಾನ್, ಸ್ಟಾರ್‌ರಾಹುಲ್, ಭರತನ ಸಹಚರರಾಗಿದ್ದಾರೆ. ಇವರು ಗಾಂಜಾ ಖರೀದಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಾರೆ. ಹನುಮಂತನಗರ ಪೊಲೀಸ್‌ ಠಾಣೆಯ ರೌಡಿಶೀಟರ್ ಸ್ಟಾರ್ ರಾಹುಲ್‌ನನ್ನು ಬಂಧಿಸಿದ್ದರಿಂದ ಅವನನ್ನು ಬಿಡಿಸುವ ಹಿನ್ನೆಲೆಯಲ್ಲಿ ಬಂಧಿತ ಆರೋಪಿಗಳು ಹಾಗೂ ತಲೆಮರೆಸಿಕೊಂಡಿರುವ ಕುಳ್ಳು ರಿಜ್ವಾನ್, ಭರತ, ಆಟೋವಿಜಿ ಹಣ ಹೊಂದಿಸಲು ಗಾಂಜಾ ಮಾರಾಟಕ್ಕೆ ಖರೀದಿಸಿ ತಂದಿಟ್ಟಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಈ ಪೈಕಿ ರಾಹುಲ್ ಯಾನೆ ಅರ್ಜುನ್ ಅಲಿಯಾಸ್ ತೊಡೆ ಈ ಹಿಂದೆ ಕೊಲೆ ಯತ್ನ ಹಾಗೂ ಇತರೆ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ. ಈತನ ವಿರುದ್ಧ ಸಿದ್ದಾಪುರ, ಬನಶಂಕರಿ ಮತ್ತು ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ರೌಡಿ ಶೀಟ್ ತೆರೆಯಲಾಗಿದೆ.
ಆರೋಪಿ ಸ್ಟಾರ್‌ರಾಹುಲ್‌ ನನ್ನು ಜ. 17ರಂದು ಬಂಧಿಸಲು ಹೋದಾಗ ಪೊಲೀಸರ ಮೇಲೆ ಹಲ್ಲೆ ಯತ್ನಿಸಿದ್ದು, ಆತನ ಕಾಲಿಗೆ ಗುಂಡು ಹೊಡೆದು ಬಂಧಿಸಲಾಗಿದೆ. ತಲೆ ಮರೆಸಿಕೊಂಡಿರುವ ಕುಳ್ಳುರಿಜ್ವಾನ್, ಭರತ ಮತ್ತು ಆಟೋ ವಿಜಿ ಪತ್ತೆಗೆ ಕಾರ್ಯಾಚರಣೆ ಮುಂದುವರಿಸಲಾಗಿದೆ.
ಕಾರ್ಯಾಚರಣೆಯಲ್ಲಿ ವಿ.ವಿ.ಪುರಂ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಕಿರಣ್‌ಕುಮಾರ್ ಎಸ್. ನೀಲಗಾರ್, ಪಿಎಸ್‌ಐ ಮಂಜುನಾಥ, ಎಎಸ್‌ಐ ಸತೀಶ್, ಸಿಬ್ಬಂದಿಯವರಾದ ನನ, ಶ್ರೀನಿವಾಸಮೂರ್ತಿ, ಲೋಕೇಶ್, ಗಿರೀಶ, ಸಂಜೀವ ಮ. ಬೆನ್ನೂರ ಭಾಗವಹಿಸಿದ್ದರು.

About Author

Leave a Reply

Your email address will not be published. Required fields are marked *