ರಾಗಿಯನ್ನು ಖರೀದಿಸಲು ವಿಧಿಸಿರುವ ನಿರ್ಬಂಧ ತೆಗೆದುಹಾಕಿ: ಸಿದ್ದರಾಮಯ್ಯ ಆಗ್ರಹ

1 min read

ಬೆಂಗಳೂರು,ಜ.25- ರಾಗಿಯನ್ನು ಬೆಂಬಲ ಬೆಲೆಯಲ್ಲಿ ಖರೀದಿಸಲು ವಿಧಿಸಿರುವ ನಿರ್ಬಂಧಗಳನ್ನು ತೆಗೆದು ಹಾಕಬೇಕು. ರಾಗಿ, ಭತ್ತ ಮುಂತಾದ ಉತ್ಪನ್ನಗಳಿಗೆ ನಿಗಧಿಗೊಳಿಸಿರುವ ಬೆಲೆಯನ್ನು ಹೆಚ್ಚಿಸಬೇಕೆಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಮಳೆಯ ನಡುವೆಯೂ ರೈತರು ರಾಗಿ, ಭತ್ತ ಮುಂತಾದ ಬೆಳೆಗಳನ್ನು ಕೊಯಿಲು ಮಾಡಿ ಮಾರುಕಟ್ಟೆಗೆ ತರುತ್ತಿದ್ದಾರೆ. ಸರ್ಕಾರವು ಈ ವರ್ಷ ಜ.1 ರಿಂದ ರಾಗಿಯನ್ನು ಬೆಂಬಲ ಬೆಲೆ ಯೋಜನೆಯಡಿ ಖರೀದಿಸಲು ನೋಂದಣಿ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ.
ಮಾತೆತ್ತಿದರೆ ರೈತರ ಆದಾಯ ದ್ವಿಗುಣ ಗೊಳಿಸಲಾಗುವುದು ಎಂದು ಮಾತನಾಡುವ ಪ್ರಧಾನಿ ಮೋದಿಯವರ ಸರ್ಕಾರ ಈ ಬಾರಿ ರಾಜ್ಯದ ರೈತರಿಂದ ಕೇವಲ 2.10 ಲಕ್ಷ ಟನ್ ರಾಗಿಯನ್ನು ಮಾತ್ರ ಖರೀದಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ. ಈ ಸೂಚನೆಯನ್ನು ಆಧರಿಸಿ ರಾಜ್ಯದ ಬಿಜೆಪಿ ಸರ್ಕಾರವು ರೈತರಿಂದ ರಾಗಿ ಖರೀದಿಸಲು ವಿಪರೀತ ನಿಬಂಧನೆಗಳನ್ನು ವಿಧಿಸಿದೆ. ಅದರಲ್ಲಿ ಒಬ್ಬ ರೈತರಿಂದ ಕೇವಲ 20 ಕ್ವಿಂಟಾಲ್ ರಾಗಿಯನ್ನು ಮಾತ್ರ ಖರೀದಿ ಮಾಡಲಾಗುವುದೆಂದು ಆದೇಶ ಹೊರಡಿಸಿದೆ.
ಕಳೆದ ವರ್ಷ ಸುಮಾರು 4.7 ಲಕ್ಷ ಟನ್ ಗಳಷ್ಟು ರಾಗಿಯನ್ನು ಬೆಂಬಲ ಬೆಲೆ ಯೋಜನೆಯಡಿ ಖರೀದಿಸಿದರೆ, ಈ ಬಾರಿ ರಾಜ್ಯದಿಂದ ಕೇವಲ 2.10 ಲಕ್ಷ ಟನ್ ರಾಗಿಯನ್ನು ಖರೀದಿಸಲು ಮಾತ್ರ ರಾಜ್ಯಕ್ಕೆ ಅನುಮತಿ ನೀಡಲಾಗಿದೆ.
ರೈತರು 14-15 ಲಕ್ಷ ಟನ್ ರಾಗಿ ಬೆಳೆದರೆ ಅವರು ತಮ್ಮ ಸ್ವಂತ ಬಳಕೆಗೆ ಶೇ.50 ರಷ್ಟನ್ನು ಬಳಸುತ್ತಾರೆಂದರೆ ಉಳಿದದ್ದನ್ನು ಅವರು ಮಾರಲೇಬೇಕು. ಸರ್ಕಾರ ಬೆಂಬಲ ಬೆಲೆ ಯೋಜನೆಯಡಿ ರೈತರ ಉತ್ಪನ್ನಗಳನ್ನು ಖರೀದಿಸದಿದ್ದರೆ ಮುಕ್ತ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಾರೆ.
ರೈತರು ಎಷ್ಟು ಕ್ವಿಂಟಾಲ್ ಖರೀದಿ ಕೇಂದ್ರಗಳಿಗೆ ತರುತ್ತಾರೊ ಅಷ್ಟನ್ನೂ ಖರೀದಿಸಬೇಕು. ಇಂದೇ ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು ಕೇವಲ 2.10 ಲಕ್ಷ ಟನ್ ಖರೀದಿಸಲು ವಿಧಿಸಿರುವ ನಿರ್ಬಂಧವನ್ನು ತೆಗೆದು ಹಾಕಬೇಕೆಂದು ಒತ್ತಾಯಿಸಬೇಕು. ಸ್ಥಗಿತಗೊಳಿಸಿರುವ ನೋಂದಣಿ ಕೇಂದ್ರಗಳನ್ನು ಕೂಡಲೇ ಪುನರಾರಂಭಿಸಬೇಕು ಎಂದು ಸಿದ್ದರಾಮಯ್ಯ ಅವರು ಆಗ್ರಹಿಸಿದ್ದಾರೆ.
ರಾಗಿಗೆ ನೀಡುತ್ತಿರುವ ಬೆಂಬಲ ಬೆಲೆ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಒಂದು ಕ್ವಿಂಟಾಲಿಗೆ ಕೇವಲ 82 ರೂಪಾಯಿಗಳಷ್ಟು ಮಾತ್ರ ಏರಿಕೆ ಮಾಡಲಾಗಿದೆ. ಕಳೆದ ವರ್ಷ ಒಂದು ಕ್ವಿಂಟಾಲಿಗೆ 3295 ರೂ. ನೀಡುತ್ತಿದ್ದರೆ ಈ ವರ್ಷ 3377 ಗಳಿಗೆ ಏರಿಕೆ ಮಾಡಲಾಗಿದೆ. ಆದರೆ ರೈತರು 2019-20 ರಲ್ಲಿ ಟ್ರಾಕ್ಟರ್ನಲ್ಲಿ ಒಂದು ಗಂಟೆ ಹೊಲ ಉಳಲು 750 ರೂ. ನೀಡುತ್ತಿದ್ದರೆ ಈ ವರ್ಷ 1250-1300 ರೂ. ನೀಡಬೇಕಾಗಿದೆ ಎಂದರು.
ಬೆಳೆಯನ್ನು ಕಟಾವು ಮಾಡುವ ಯಂತ್ರಕ್ಕೆ ಕೂಡ ಗಂಟೆಗೆ ಸುಮಾರು 750 ರೂ.ಗಳಷ್ಟು ಹೆಚ್ಚಾಗಿದೆ. ಪೆಟ್ರೋಲ್, ಡೀಸೆಲ್ ಸೇರಿದಂತೆ ಎಲ್ಲ ಅವಶ್ಯ ವಸ್ತುಗಳ ಬೆಲೆ ಏರಿಕೆಯಾಗಿವೆ. ರೈತರು ಬಳಸುವ ಪ್ಲಾಸ್ಟಿಕ್ ಮುಂತಾದ ಉತ್ಪನ್ನಗಳ ಮೇಲಿನ ಜಿಎಸ್ಟಿಯನ್ನು ಹೆಚ್ಚಿಸಲಾಗಿದೆ. ಇದೆಲ್ಲದರಿಂದಾಗಿ ರೈತರು ಬೆಳೆ ಬೆಳೆಯಲು ಉತ್ಪಾದನಾ ವೆಚ್ಚ ಸಿಕ್ಕಾಪಟ್ಟೆ ಹೆಚ್ಚಾಗಿದೆ. ಡಾ.ಸ್ವಾಮಿನಾಥನ್ ಅವರ ವರದಿಯಲ್ಲಿನ ಸೂತ್ರಗಳನ್ನು ಪೂರ್ತಿಯಾಗಿ ಅಳವಡಿಸಿದರೆ ಒಂದು ಕ್ವಿಂಟಾಲ್ ರಾಗಿಗೆ ಈಗ ನಿಗಧಿಪಡಿಸಿರುವ ಬೆಂಬಲ ಬೆಲೆಯ ಎರಡರಷ್ಟನ್ನು ರೈತರಿಗೆ ನೀಡಬೇಕಾಗುತ್ತದೆ ಎಂದಿದ್ದಾರೆ.
ಕೃಷಿ ಇಲಾಖೆಯ ಅಂದಾಜಿನ ಪ್ರಕಾರ ನಮ್ಮ ರೈತರು ಈ ವರ್ಷ ಸುಮಾರು 17.5 ಲಕ್ಷ ಎಕರೆ ಪ್ರದೇಶದಲ್ಲಿ ಬೆಳೆದಿದ್ದಾರೆ. ಕೃಷಿ ಇಲಾಖೆಯ ದಾಖಲೆಗಳ ಪ್ರಕಾರ ಈ ಬಾರಿ ಕನಿಷ್ಟ ಅಂದರೂ 14-15 ಲಕ್ಷ ಟನ್ ಇಳುವರಿಯ ನಿರೀಕ್ಷೆ ಮಾಡಲಾಗಿದೆ. ಆದರೆ, ಅತಿವೃಷ್ಟಿಯ ಕಾರಣದಿಂದ ದೊಡ್ಡ ಮಟ್ಟದ ಬೆಳೆ ನಷ್ಟವಾಗಿತ್ತು. ಆದರೂ ರೈತರು ಬೆಂಬಲ ಬೆಲೆಯಡಿ ರಾಗಿಯನ್ನು ಮಾರಾಟ ಮಾಡಲು ಉತ್ಸಾಹ ತೋರಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

About Author

Leave a Reply

Your email address will not be published. Required fields are marked *