ಮತ್ತೊಬ್ಬರಿಗೆ ಕೆಡುಕನ್ನು ಬಯಸದಿರುವುದೇ ಧರ್ಮ: ಸಿದ್ದರಾಮಯ್ಯ
1 min readಮೈಸೂರು,ಅ.9 –ಮತ್ತೊಬ್ಬರಿಗೆ ಕೆಡುಕನ್ನು ಬಯಸದಿರುವುದೇ ಧರ್ಮ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.
ನಗರದ ಗಾನಭಾರತಿ ವೀಣೆಶೇಷಣ್ಣ ಭವನದಲ್ಲಿ ಪ್ರೊ.ಎಚ್.ಜೆ.ಲಕ್ಕಪ್ಪಗೌಡ ಅವರಿಗೆ ನುಡಿನಮನ, ಲಕ್ಕಪ್ಪಗೌಡ ಬದುಕು-ಬರೆಹ ಒಂದು ಮೆಲುಕು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬಸವಾದಿ ಶರಣರು ವಚನವನ್ನ ಬಾಯಲ್ಲಿ ಹೇಳ್ತಾರೆ. ಇವನಾರವ ಇವನಾರವ ಎಂದೆನಿಸದಿರಯ್ಯ ಅಂತ ವಚನದ ಬಗ್ಗೆ ಮಾತನಾಡ್ತಾರೆ. ಕೊನೆಯಲ್ಲಿ ನೀನು ನಮ್ಮ ಜಾತಿಯವನಾ ಅಂತಾ ಕೇಳ್ತಾರೆ. ದೇವರು ಮಾನಸ ಸರೋವರದಲ್ಲಿದ್ದಾನೆ ಅಂತ ಹುಡುಕಿ ಹೋಗ್ತಾರೆ. ದೇವರು ಇದ್ದಾನೆ ಅನ್ನೊ ನಂಬಿಕೆ ಇದ್ರೆ ನಮ್ಮಲ್ಲೇ ಇರ್ತಾನೆ. ಅದನ್ನ ಅರ್ಥೈಸಿಕೊಳ್ಳಬೇಕು. ಇದನ್ನ ಬಿಟ್ಟು ಇನ್ನೊಂದು ಧರ್ಮದ ಬಗ್ಗೆ ಕೆಟ್ಟದಾಗಿ ಮಾತನಾಡಬಾರದು. ಇನ್ನೊಬ್ಬರಿಗೆ ಕೆಡುಕನ್ನ ಬಯಸದಿರೋದೆ ಧರ್ಮ. ಅದರಲ್ಲಿ ನಂಬಿಕೆ ಇದ್ದರೆ ಸಾಕು ಒಳ್ಳೆಯ ವ್ಯಕ್ತಿ ಆಗಿ ಬದುಕಬಹುದು. ಒಳ್ಳೆಯ ಸಮಾಜ ನಿರ್ಮಾಣ ಆಗೋದು ಎಂದರು.
ನಾವು ಹುಟ್ಟುವಾಗ ಇದೇ ಜಾತಿಯಲ್ಲಿ ಹುಟ್ಟಬೇಕು ಅಂತಾ ಅರ್ಜಿ ಹಾಕಿಲ್ಲ. ಆಪರೇಷನ್ ಮಾಡೋವಾಗ ನನಗೆ ನಮ್ಮ ಜಾತಿ ರಕ್ತವೇ ಬೇಕು ಅನ್ನೊಕಾಗುತ್ತಾ? ನಾನೂ ಹಿಂದೂ ಧರ್ಮದಲ್ಲಿ ಹುಟ್ಟಿದ್ದೀನಿ. ಆದರೆ ಮನುಷ್ಯತ್ವ ಧರ್ಮ ಮುಖ್ಯ ಎಂದು ಹೇಳಿದರು.
ಕುವೆಂಪು ರವರ ಸಾಹಿತ್ಯ ವೈಚಾರಿಕವಾದ ಸಾಹಿತ್ಯ. ವೈಚಾರಿಕತೆ ಇಲ್ಲದಿದ್ದರೆ ಸಮಾಜದಲ್ಲಿ ಬದಲಾವಣೆ ತರಲಿಕ್ಕೆ ಆಗಲ್ಲ. ವ್ಯವಸ್ಥೆಗೆ ರಾಜಿ ಮಾಡ್ಕೊಂಡು ಹೋದರೆ ಬದಲಾವಣೆ ಆಗಲ್ಲ. ನಮ್ಮ ಸರ್ಕಾರದ ಮೇಲೆ ಬಹಳ ಟೀಕೆಗಳು ಬಂದಿದ್ದವು. ಮೌಢ್ಯ ನಿಷೇಧ ಕಾಯ್ದೆ ಜಾರಿಗೆ ಮುಂದಾಗಿದ್ದೆವು. ಆದರೆ ಅದಕ್ಕೆ ಬಹಳ ವಿರೋಧ ವ್ಯಕ್ತವಾಗಿತ್ತು. ಈ ಮೌಢ್ಯಗಳಿಗೆ ಇತಿಶ್ರೀ ಹಾಡುವ ಚಿಂತನೆ ಮಾಡಿದ್ದೆ ಎಂದು ಹೇಳಿದರು.
ಲಕ್ಕಪ್ಪಗೌಡರು, ಜನಪದ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ. ಜನಪದ ಕ್ಷೇತ್ರ ಅವರಿಗೆ ಬಹಳ ಪ್ರಿಯವಾದ ಕ್ಷೇತ್ರ. ಅವರ ಹೆಸರಿನಲ್ಲಿ ಪ್ರಶಸ್ತಿ ನೀಡಲು ಮುಂದಾಗಿರುವುದು ಸಂತಸದ ವಿಚಾರ. ಲಕ್ಕಪ್ಪಗೌಡರು ನನ್ನ ಜೊತೆ ಬಹಳ ವರ್ಷ ಒಡನಾಟ ಹೊಂದಿದ್ದವರು. ಸರಳ ಸಜ್ಜನಿಕೆಯ ವ್ಯಕ್ತಿ. ಆತ ಪ್ರತಿಭಟನಾ ಸೌಜನ್ಯದ ವ್ಯಕ್ತಿ ಅಲ್ಲ ಅಜಾತಶತ್ರು. ಅವರು ಯಾರ ಮನಸ್ಸನ್ನೂ ನೋಯಿಸಿ ಮಾತನಾಡುತ್ತಿರಲಿಲ್ಲ. ಅಚ್ಚುಕಟ್ಟಾಗಿ ಕೆಲಸಕ್ಕೆ ನ್ಯಾಯ ಕೊಡ್ತಿದ್ದವರು. ಹಳ್ಳಿಯಿಂದ ಬಂದ ಅವರು ಸಾಹಿತ್ಯ ಹಾಗೂ ಜನಪದ ಕ್ಷೇತ್ರದಲ್ಲಿ ಆಶಕ್ತಿ ಹೊಂದಿದ್ದವರು ಎಂದು ಅವರನ್ನು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಜನಪದ ವಿದ್ವಾಂಸ ಪ್ರೊ.ಹಿ.ಶಿ.ರಾಮಚಂದ್ರೇಗೌಡ, ವಿಶ್ರಾಂತ ಕುಲಪತಿ ಡಾ.ನೀಲಗಿರಿ ಎಂ.ತಳವಾರ, ಶಾಸಕ ಹೆಚ್.ಪಿ.ಮಂಜುನಾಥ್ ಇತರರು ಉಪಸ್ಥಿತರಿದ್ದರು.