ನನಗೆ ಸಚಿವ ಸ್ಥಾನ ಸಿಗದಂತೆ ಮಾಡಿದ್ದು ಆ ಒಂದು ಫೋನ್ ಕಾಲ್- ರಾಮದಾಸ್!
1 min readನನಗೆ ಹೆಚ್ಚಿನ ಅವಕಾಶ ಸಿಗೋದು ಬಿಡೋದು ಪಕ್ಷಕ್ಕೇ ಸೇರಿದ್ದು ಅಂತ ಮೈಸೂರಿನಲ್ಲಿ ಶಾಸಕ ಎಸ್ ಎ ರಾಮದಾಸ್ ಹೇಳಿದ್ದಾರೆ. ಮೈಸೂರಿನಲ್ಲಿ ಬೃಹತ್ ಕೌಶಲ್ಯಾಭಿವೃದ್ದಿ, ಉದ್ಯೋಗ ನೋಂದಣಿ ಕಾರ್ಯಕ್ರಮ ಆಯೋಜನೆ ಕುರಿತ ಸುದ್ದಿಗೋಷ್ಠಿ ನಡೆಸಿದ ಅವರು ಜನವರಿ 4 ರಿಂದ 8 ರವರೆಗೆ ಕಾರ್ಯಕ್ರಮ ಆಯೋಜನೆಯಾಗಿದ್ದು, ಸರ್ಕಾರಿ ಹಾಗೂ ಖಾಸಗಿ ಕಂಪನಿಗಳ ಸಹಯೋಗದೊಂದಿಗೆ ಕಾರ್ಯಕ್ರಮ ನಡೆಯುತ್ತಿದೆ. ಉದ್ಯೋಗ ಸೃಷ್ಟಿಗಾಗಿ ಆಯೋಜಿಸುತ್ತಿರುವ ಕಾರ್ಯಕ್ರಮ ಇದಾಗಿದ್ದು ಯುವಕರು ಸದುಪಯೋಗಪಡಿಸಿಕೊಳ್ಳಿ ಎಂದರು.
ಈ ವೇಳೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಶಾಸಕರು, ಮಂತ್ರಿಗೂ, ಶಾಸಕನಿಗೂ ಯಾವುದೇ ವ್ಯತ್ಯಾಸವಿಲ್ಲ. ಕಾರಣ ಶಾಸಕನಾಗಿದ್ದುಕೊಂಡು ಸಹ ಅಭಿವೃದ್ಧಿ ಕಾರ್ಯಗಳನ್ನು ಮಾಡಬಹುದಾಗಿದೆ. ನನಗೆ ಸಚಿವ ಸ್ಥಾನ ನೀಡೋದು ಬಿಡೋದು ಪಕ್ಷಕ್ಕೆ ಸೇರಿದ ವಿಚಾರವಾಗಿದ್ದು ಕಳೆದ ಬಾರಿ ನನಗೆ ಸಚಿವ ಸ್ಥಾನ ಸಿಗದಂತೆ ಮಾಡಿದ ಆ ಒಂದು ದೂರವಾಣಿ ಕರೆಯೇ ಇವತ್ತು ನನಗೆ ಮತ್ತಷ್ಟು ಹುರುಪಿನಿಂದ ಕೆಲಸ ಮಾಡಲು ಉತ್ತೇಜನ ನೀಡಿತು ಎಂದರು.
ಇನ್ನು ಹಿಂದೂ ದೇವಾಲಯ ಮುಜರಾಯಿ ವ್ಯಾಪ್ತಿಯಿಂದ ಹೊರಗಿಡುವ ನಿರ್ಧಾರ ವಿಚಾರವಾಗಿ ಮಾತನಾಡಿದ ಅವರು, ಸರ್ಕಾರದ ನಿಲುವು ಸ್ವಾಗತಾರ್ಹ, ಆಯಾ ಪ್ರದೇಶದ ದೇಗುಲಗಳ ಆದಾಯವನ್ನು ಅದೇ ಪ್ರದೇಶದ ಅಭಿವೃದ್ಧಿಗೆ ಬಳಸಿಕೊಳ್ಳಬೇಕೆಂಬ ಉದ್ದೇಶದಿಂದ ನಮ್ಮ ಸರ್ಕಾರ ಮುಂದಾಗಿದೆ. ಕಾಂಗ್ರೆಸ್ ನವರು ರಾಜಕೀಯ ಕಾರಣಗಳಿಗಾಗಿ ವಿರೋಧ ಮಾಡ್ತಿದು, ಮುಂದೆ ಕಾಂಗ್ರೆಸ್ ನವರು ಅಧಿಕಾರಕ್ಕೆ ಬರುವ ಕನಸು ಕಾಣ್ತಿದಾರೆ. ಆದರೆ ಕಾಂಗ್ರೆಸ್ ನವರ ಕನಸು ನನಸಾಗುವುದಿಲ್ಲ. ಮುಂದಿನ ಚುನಾವಣೆಯಲ್ಲೂ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಶಾಸಕ ಎಸ್ ಎ ರಾಮದಾಸ್ ಹೇಳಿಕೆ ನೀಡಿದ್ದರು.
ಅಲ್ಲದೆ, ವಿಧಾನ ಪರಿಷತ್ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯ ಸೋಲು ನಮಗೆಲ್ಲಾ ಪಾಠವಾಗಿದೆ. ಗೆದ್ದೇ ಗೆಲ್ಲುತ್ತೇವೆಂಬ ಅತಿಯಾದ ಆತ್ಮ ವಿಶ್ವಾಸವೂ ಸೋಲಿಗೆ ಕಾರಣವಿರಬಹುದು. ಮೊದಲ ಮತ್ತು ಎರಡನೇ ಪ್ರಾಶಸ್ತ್ಯದ ಮತಗಳ ಮಹತ್ವ ನಾವು ಸರಿಯಾಗಿ ಅರಿಯದೇ ಹೋದದ್ದೂ ಸಹ ಸೋಲಿಗೆ ಕಾರಣವಿರಬಹುದು. ಬಿಜೆಪಿ ಅಭ್ಯರ್ಥಿಯ ಸೋಲಿನ ಹೊಣೆಯನ್ನು ಎಲ್ಲರೂ ಹೊರುತ್ತೇವೆ ಎಂದು ಇದೇವೇಳೆ ತಿಳಿಸಿದರು.