ಮೂರನೇ ಅಲೆ ತಡೆಗೆ ಮುಂಜಾಗ್ರತಾ ಕ್ರಮಕೈಗೊಳ್ಳಲಾಗುವುದು: ಎಸ್.ಟಿ ಸೋಮಶೇಖರ್
1 min readಮೈಸೂರು: ಕೋವಿಡ್-೧೯ ಮೂರನೇ ಅಲೆಯು ಮಕ್ಕಳ ಮೇಲೆ ಪರಿಣಾಮ ಬೀರಲಿರುವ ಬಗ್ಗೆ ತಜ್ಞರು ಎಚ್ಚರಿಸಿರುವ ಹಿನ್ನೆಲೆಯಲ್ಲಿ ಪೂರ್ವಭಾವಿಯಾಗಿ ಮೈಸೂರಿನ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗಳ ಮಕ್ಕಳ ತಜ್ಞರಿಂದ ಸಲಹೆ ಸೂಚನೆ ಸ್ವೀಕರಿಸುವ ಮೂಲಕ ಮುಂಬರುವ ಅಪಾಯವನ್ನು ಸಮರ್ಥವಾಗಿ ಎದುರಿಸಲು ಗಂಭೀರವಾದ ಸಭೆ ನಡೆಯಿತು.
ಹೆಬ್ಬಾಳು ಕೈಗಾರಿಕಾ ಪ್ರದೇಶದಲ್ಲಿರುವ ಸ್ಕ್ಯಾನ್ರೆ ಪ್ರೈವೇಟ್ ಕಂಪನಿಯಲ್ಲಿ ಭಾನುವಾರ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಮೂರನೇ ಅಲೆ ನಿಯಂತ್ರಣಕ್ಕೆ ಏನೇನು ಕ್ರಮಗಳನ್ನು ಕೈಗೊಳ್ಳಬೇಕೆಂಬ ಮಹತ್ವದ ಸಲಹೆ ಸೂಚನೆಗಳನ್ನು ವೈದ್ಯರು ನೀಡಿದರು.
ಕೊಲಂಬಿಯಾ ಏಷಿಯಾ ಆಸ್ಪತ್ರೆಯ ಡಾ.ಭುವನೇಶ್ವರ್ ಮಾತನಾಡಿ, ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿರುವುದರಿಂದ ವೈರಾಣು ಎದುರಿಸುವ ಸಾಮರ್ಥ್ಯವಿದೆ. ಮೂರನೇ ಅಲೆ ಬರುವ ಬಗ್ಗೆ ಎಚ್ಚರಿಕೆಯಿದೆ. ಶಾಲೆ ಆರಂಭದ ಬಗ್ಗೆ ಸರ್ಕಾರ ಗಂಭೀರವಾಗಿ ಚಿಂತಿಸಬೇಕು. ಹಿಮೋಗ್ಲೋಬಿನ್ ಕೊರತೆಯನ್ನು ನಿವಾರಿಸಬೇಕು ಎಂದು ಸಲಹೆ ನೀಡಿದರು.
ಬೃಂದಾವನ ಆಸ್ಪತ್ರೆ ಡಾ.ಮಧು ಪಟೇಲ್ ಮಾತನಾಡಿ, ಪೋಷಕರಿಗೆ ಅಗತ್ಯ ಅರಿವು ಮೂಡಿಸಬೇಕು. ಸರ್ಕಾರಿ, ಖಾಸಗಿ ಆಸ್ಪತ್ರೆಗಳು ಒಟ್ಟಾಗಿ ಕೆಲಸ ಮಾಡುವ ವ್ಯವಸ್ಥೆ ನಿರ್ಮಿಸಬೇಕು. ಯಾವಾಗ ಪರೀಕ್ಷೆ ಮಾಡಿಸಬೇಕು. ಬೇಗ ವರದಿ ತಲುಪಿಸಬೇಕು. ಟ್ರಯೇಜಿಂಗ್ ಬಹಳ ಮುಖ್ಯ ಎಂದು ಹೇಳಿದರು.
ಜೆಎಸ್ ಎಸ್ ಆಸ್ಪತ್ರೆ ಡಾ.ಎಂ.ಡಿ.ರವಿ ಮಾತನಾಡಿ, ಐಎಂಎ ಈಗಾಗಲೇ ಸೂಕ್ತವಾದ ಗೈಡ್ಲೈನ್ಸ್ ಇದೆ ಅದನ್ನು ಎಲ್ಲರೂ ಅನುಸರಿಸಬೇಕು. ಪ್ರತ್ಯೇಕ ಓಪಿಡಿ ತೆರೆಯಬೇಕು. ಆಸ್ಪತ್ರೆಗೆ ತಡವಾಗಿ ಬರದಂತೆ ಅರಿವು ಮೂಡಿಸಬೇಕು ಎಂದರು.
ಕೊಲಂಬಿಯಾ ಏಷಿಯಾ ಆಸ್ಪತ್ರೆ ಡಾ.ಶೆಣೈ ಅವರು ೧೮ರಿಂದ ೪೫ ವರ್ಷದ ಎಲ್ಲರಿಗೂ ವ್ಯಾಕ್ಸಿನ್ ಕೊಡಬೇಕು. ಮೂರನೇ ಅಲೆಯಲ್ಲಿ ಟ್ರಯೇಜಿಂಗ್ ಬಹಳ ಮುಖ್ಯ ಎಂದರು.
ಚೆಲುವಾಂಬ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕಿ ಡಾ.ಸುಧಾ ರುದ್ರಪ್ಪ ಮಾತನಾಡಿ, ಕೋವಿಡ್ ಸಾಂಕ್ರಾಮಿಕದ ವೇಳೆ ೫ ವರ್ಷದೊಳಗಿನ ಐದು ಮಕ್ಕಳು ಮೃತಪಟ್ಟಿವೆ. ಬೇರೆ ಬೇರೆ ಅನಾರೋಗ್ಯದ ಸಮಸ್ಯೆಗಳಿಂದ ನಿಧನ ಸಂಭವಿಸಿದೆ. ವಯಸ್ಕರ ಆಕ್ಸಿಮೀಟರ್ ಅನ್ನು ಮಕ್ಕಳಿಗೆ ಬಳಸಲಾಗುವುದಿಲ್ಲ ಎಂದು ಸಲಹೆ ನೀಡಿದರು.
ಶಾಂತವೇರಿ ಗೋಪಾಲಗೌಡ ಆಸ್ಪತ್ರೆ ಡಾ.ಶಿವು ಅವರು, ಮೈಸೂರು ೧೫೦ ಚದರ ಕಿಲೋ ಮೀಟರ್ನಲ್ಲಿ ವ್ಯಾಪಿಸಿದೆ. ಸುಮಾರು ೧೨ ಲಕ್ಷ ಜನರಿದ್ದಾರೆ. ಎಲ್ಲ ಮಕ್ಕಳು ದೊಡ್ಡ ಆಸ್ಪತ್ರೆಗಳಿಗೆ ಹೋಗಿ ಚಿಕಿತ್ಸೆ ಪಡೆಯಲಾಗುವುದಿಲ್ಲ. ಹಾಗಾಗಿ ೪೦ ಕಡೆ ಕೋವಿಡ್ ಫ್ರೆಂಡ್ಲಿ ಸೆಂಟರ್ ಆರಂಭಿಸಬೇಕು. ಇದಕ್ಕೆ ಶಾಲೆಗಳನ್ನು ಬಳಸಿಕೊಳ್ಳಬಹುದು ಎಂದು ನುಡಿದರು.
ಡಾ.ಮಹದೇವ್ ಅವರು, ಮಕ್ಕಳ ಅಳತೆಗೆ ಅನುಗುಣವಾಗಿ ಎನ್೯೫ ಮಾಸ್ಕ್ ಅವಶ್ಯವಾಗಿ ಎಲ್ಲರಿಗೂ ಸಿಗುವಂತಾಗಬೇಕು ಎಂದು ಹೇಳಿದರು. ಡಾ.ಅಯ್ಯಪ್ಪ ಅವರು, ಹುಟ್ಟುಹಬ್ಬದ ಸಂಭ್ರಮಾಚರಣೆ, ವಿವಾಹಗಳಿಗೆ ಮಕ್ಕಳಿಗೆ ಕಡ್ಡಾಯವಾಗಿ ನಿರ್ಬಂಧ ವಿಧಿಸಬೇಕು ಎಂದರು. ಡಾ.ಗಿರೀಶ್ ಅವರು ೩ನೇ ಅಲೆಗೂ ಮುನ್ನವೇ ಒಂದೇ ಮಾದರಿಯ ನಿಯಮ ಜಾರಿಗೆ ತರಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಮಾತನಾಡಿ, ಸತತ ಮೂರು ಗಂಟೆಗಳು ನಡೆದ ಸಭೆಯಲ್ಲಿ ಅಮೂಲ್ಯವಾದ ಸಲಹೆ ಸೂಚನೆಗಳನ್ನು ವೈದ್ಯರು ನೀಡಿದ್ದಾರೆ. ಮೂರರಿಂದ ನಾಲ್ಕು ಸಭೆಗಳನ್ನು ನಡೆಸಿ ೩ನೇ ಅಲೆ ನಿಯಂತ್ರಣಕ್ಕೆ ಅಗತ್ಯ ಕ್ರಮವಹಿಸುತ್ತೇವೆ ಎಂದು ನುಡಿದರು.
ಸಂಸದ ಪ್ರತಾಪ್ ಸಿಂಹ ಮಾತನಾಡಿ, ಭಾರತ ಬಯೋಟೆಕ್ ಅಧ್ಯಕ್ಷ ಕೃಷ್ಣ ಎಲ್ಲಾ ಅವರು ೩ನೇ ಅಲೆ ಮಕ್ಕಳ ಮೇಲೆ ಪರಿಣಾಮ ಬೀರಲಿದೆ ಎಂದಿದ್ದಾರೆ. ೨ನೇ ಅಲೆಯಲ್ಲಿ ನಿಭಾಯಿಸುವುದು ಕಷ್ಟವಾಯಿತು. ೩ನೇ ಅಲೆಗೆ ನೆಪ ಹೇಳಲು ಆಗುವುದಿಲ್ಲ. ೩ನೇ ಅಲೆ ನಿಯಂತ್ರಣಕ್ಕೆ ಯಾವ ರೀತಿ ಸಿದ್ಧತೆ ಕೈಗೊಳ್ಳಬೇಕೆಂದು ನಡೆಯುತ್ತಿರುವ ಮೊದಲನೇ ಸಭೆ ಇದಾಗಿದೆ ಎಂದರು.
ಸಂಸದ ಪ್ರತಾಪ್ ಸಿಂಹ, ಶಾಸಕರಾದ ತನ್ವೀರ್ ಸೇಠ್, ಎಲ್.ನಾಗೇಂದ್ರ, ಮುಡಾ ಅಧ್ಯಕ್ಷ ಎಚ್.ವಿ.ರಾಜೀವ್, ಮೇಯರ್ ರುಕ್ಮಿಣಿ ಮಾದೇಗೌಡ, ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್, ನಿಗಮ ಮಂಡಲಿ ಅಧ್ಯಕ್ಷರಾದ ಅಪ್ಪಣ್ಣ, ಮಹದೇವಸ್ವಾಮಿ ಮುಂತಾದವರು ಭಾಗವಹಿಸಿದ್ದರು.