ಮೈಸೂರಿನಲ್ಲಿ ಮನೆ ಮನೆ ಸರ್ವೆ ನಡೆಸಲು ಮೇ 31ರ ವರೆಗೆ ಗಡವು ನೀಡಿದ ಜಿಲ್ಲಾ ಉಸ್ತುವಾರಿ ಸಚಿವರು
1 min readಮೈಸೂರು: ಪಿರಿಯಾಪಟ್ಟಣದ 4 ಹೋಬಳಿಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾಗಿ ಆ 4 ಹೋಬಳಿಗಳು ಕೊರೊನಾ ಮುಕ್ತ ಹಳ್ಳಿಗಳಾಗಬೇಕು. ಮೇ 31ರೊಳಗಾಗಿ ಮನೆ ಮನೆ ಸರ್ವೆಯನ್ನು ಮಾಡಿ ಮುಗಿಸಬೇಕು. ಜೂ 1ರಿಂದ ಯಾವಾಗಲಾದರೂ ಆ ಹೋಬಳಿಗಳಿಗೆ ಅನಿರೀಕ್ಷಿತವಾಗಿ ಭೇಟಿ ನೀಡಲಿರುವೆ ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರು ಹೇಳಿದರು.
ಭಾನುವಾರ ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರ, ಹುಣಸೂರು ವಿಧಾನ ಸಭಾ ಕ್ಷೇತ್ರದ ಆರೋಗ್ಯ ಕೇಂದ್ರಗಳಿಗೆ ಹಾಗೂ ಕೋವಿಡ್ ಕೇರ್ ಸೆಂಟರ್ ಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅವರು ಮಾತನಾಡಿದರು.
ಬೈಲುಕುಪ್ಪೆಯಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗಿದ್ದು, ಅಲ್ಲಿನ ಜನರಿಂದ ಮತ್ತಷ್ಟು ಜನರಿಗೆ ಹರಡುವ ಸಂಭವವಿರುವುದರಿಂದ ಅದನ್ನು ಸಂಪೂರ್ಣ ಲಾಕ್ ಡೌನ್ ಮಾಡಿ. ಬೈಲುಕುಪ್ಪೆಗೆ ಹೊರಗಡೆಯಿಂದ ಯಾರು ಬರಬಾರದು. ಇಲ್ಲಿಂದ ಹೊರಗಡೆಗೆ ಯಾರು ಹೋಗಬಾರದು. ಅವರಿಗೆ ಎಲ್ಲಾ ವಸ್ತುಗಳು ಅಲ್ಲಿಯೇ ಸಿಗುವಂತೆ ಕಲ್ಪಿಸಿ ಎಂದು ಸೂಚಿಸಿದರು.
ಮನೆಮನೆ ಸರ್ವೆಯನ್ನು ನಡೆಸಲು ಪಿಡಿಒಗಳಿಗೆ ಒಂದು ಗುರಿಯನ್ನು ನಿಗಧಿಪಡಿಸಿ. ಅವರೂ ಸಹ ಹಳ್ಳಿಗಳಿಗೆ ಭೇಟಿ ನೀಡಿ ಪರಿಶೀಲಿಸಲಿ. ನಂಜನಗೂಡಿನ ಪಿಡಿಒಗಳಂತೆ ಕಾರ್ಯನಿರ್ವಾಹಿಸಲಿ ಎಂದು ಹೇಳಿದರು.
ವ್ಯಾಕ್ಸಿನೇಷನ್ ಹಾಗೂ ಔಷಧದ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. 4 ಹೋಬಳಿಗಲ್ಲಿ ಶೇ.100ರಷ್ಟು ವ್ಯಾಕ್ಸಿನೇಷನ್ ಆಗಿರಬೇಕು. ಸಂಸದ ಪ್ರತಾಪ್ ಸಿಂಹ ಅವರು ಟಾಸ್ಕ್ ಫೋರ್ಸ್ ಅಧ್ಯಕ್ಷರಾದ ಮೇಲೆ ಔಷಧಿಗಾಗಲಿ, ಆಕ್ಸಿಜನ್ ಸಿಲಿಂಡರ್ ಗಳಿಗಾಗಲಿ ಯಾವುದಕ್ಕೂ ಕೊರತೆ ಕಂಡು ಬಂದಿಲ್ಲ. ಇದರಿಂದ ಅವರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.
ಮನೆ ಮನೆ ಸರ್ವೆಯನ್ನು ನಡೆಸಲು ಅಂಗನಾಡಿ ಹಾಗೂ ಆಶಾ ಕಾರ್ಯಕರ್ತರನ್ನು ಬಳಸಿಕೊಳ್ಳಿ. ಅವರಿದ್ದರೆ ಸರ್ವೆಯನ್ನು ಆದಷ್ಟು ಬೇಗ ಮುಗಿಸಬಹುದು. ಅವರಿಗಾಗಿ ಫೇಸ್ ಷಿಯಲ್ಡ್ ಸೇರಿದಂತೆ ಕಿಟ್ ಗಳನ್ನು ಒದಗಿಸಲಾಗುತ್ತದೆ ಎಂದರು.
ಕೋವಿಡ್ ರೋಗಿಗಳು ಇರುವ ಕೇಂದ್ರಗಳಿಗೆ ತೆರಳಿ ಅಲ್ಲಿನ ಕುಂದು ಕೊರತೆಗಳನ್ನು ಆಲಿಸಿದರು. ಅವರಿಗೆ ಆರೋಗ್ಯದಲ್ಲಾಗಲಿ, ಆಹಾರದಲ್ಲಾಗಲಿ ಯಾವುದೇ ಸಮಸ್ಯೆಗಳು ಉಂಟಾಗದಂತೆ ನೋಡಿಕೊಳ್ಳಿ ಎಂದು ವೈಧ್ಯಾಧಿಕಾರಿಗೆ ತಿಳಿಸಿದರು.
ಇದೇ ಸಂದರ್ಭದಲ್ಲಿ ಸಂಸದ ಪ್ರತಾಪ್ ಸಿಂಹ, ಶಾಸಕ ಕೆ.ಮಹದೇವ್, ಹೆಚ್.ಪಿ.ಮಂಜುನಾಥ್, ಜಿಲ್ಲಾ ಪಂಚಾಯತಿಯ ಮುಖಕಾರ್ಯನಿರ್ವಾಣಾಧಿಕಾರಿ ಎ.ಎಂ.ಯೋಗೀಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್, ತಹಶಿಲ್ದಾರ್ ಗಳಾದ ಬಸವರಾಜು ಚಂದ್ರಮೌಳಿ, ತಾಲ್ಲೂಕು ವೈದ್ಯಾಧಿಕಾರಿ ಶರತ್ ಬಾಬು, ಮುಖ್ಯ ವೈದ್ಯಾದಿಕಾರಿ ಡಾ.ಜೆ.ಶ್ರೀನಿವಾಸ್, ಡಾ.ದೇವಿಕ ಸೇರಿದಂತೆ ಇತರರು ಹಾಜರಿದ್ದರು