ಅಧಿಕಾರ ಇದ್ದಾಗ ಕೆಲಸ ಮಾಡಲಿಲ್ಲ, ಈಗ ಮಾಡೋಕೆ ಕೆಲಸ ಇಲ್ಲ- ಕಾಂಗ್ರೆಸ್‌ಗೆ ಪ್ರತಾಪ್ ಸಿಂಹ ಪ್ರತಿ ಸವಾಲ್!

1 min read

ಅಧಿಕಾರ ಇದ್ದಾಗ ಕೆಲಸ ಮಾಡಲಿಲ್ಲ, ಈಗ ಮಾಡೋಕೆ ಕೆಲಸ ಇಲ್ಲ-

ದಶಪಥ ಕಾಮಗಾರಿ ಹಾಗೂ ಸಂಸದ ಪ್ರತಾಪ್ ಸಿಂಹ ಕೊಡುಗೆ ಬಗ್ಗೆ ಮುಕ್ತ ಸಂವಾದಕ್ಕೆ ಪಂಥಾಹ್ವಾನ ನೀಡಿದ ಕಾಂಗ್ರೆಸ್‌ಗೆ ಸಂಸದ ಪ್ರತಾಪ್ ಸಿಂಹ ಟಾಂಗ್ ನೀಡಿದ್ದಾರೆ. ಮೊದಲು ನೀವು ಮಾಡಿರುವ ಎರಡೇ ಎರಡು ಕೆಲಸದ ದಾಖಲೆ ತನ್ನಿ ನಾನೇ ನೀವಿರುವ ಜಾಗಕ್ಕೆ ಬರ್ತೀವಿ ಎಂದು ಪತ್ರದ ಮೂಲಕ ಟಾಂಗ್ ನೀಡಿದ್ದಾರೆ. ಅಷ್ಟಕ್ಕು ಪ್ರತಾಪ ಸಿಂಹ ಬರೆಸ ಪತ್ರದ ಸಾರಾಂಶ ಇಲ್ಲಿದೆ ನೋಡಿ.

2018 ರ ಚುನಾವಣೆಯ ನಂತರ ಸತತ ಮೂರು ವರ್ಷಗಳ ಕಾಲ ಕಣ್ಮರೆಯಾಗಿದ್ದು, ಕಡೆಗೂ ಜನರಿಗೆ ಮುಖ ತೋರಿಸಲು ಮುಂದಾಗಿರುವ ಮಾನ್ಯ ಡಾ. ಮಹದೇವಪ್ಪ ಸಾಹೇಬರಿಗೆ ಟಿ. ನರಸೀಪುರದ ನತದೃಷ್ಟ ಮತದಾರನ ಪರವಾಗಿ ವಂದನೆಗಳು. ಇನ್ನು 18 ತಿಂಗಳಲ್ಲಿ ಬರಲಿರುವ ವಿಧಾಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಮತ್ತೆ ಜನರೆದು ಬರಲು ನೆಪ ಹುಡುಕಬೇಕಾದ ನಿಮ್ಮ ಅನಿವಾರ್ಯತೆ ನನಗೆ ಅರ್ಥವಾಗುತ್ತದೆ ಸರ್. ನರಸೀಪುರದಲ್ಲಿ ನಿಲ್ಲುವುದೋ, ನಂಜನಗೂಡಿಗೆ ನೆಗೆಯಬೇಕೋ ಎಂಬ ನಿಮ್ಮ ಆತಂಕ, ಭಯ, ದುಗುಡ ಜನಕ್ಕೂ ಗೊತ್ತು.

ಪ್ರತಾಪ್ ಸಿಂಹ, ಸಂಸದ

ಹೋಗಲಿ ಬಿಡಿ ವಿಷಯಕ್ಕೆ ಬರೋಣ, “ಪ್ರದೇಶ ಕಾಂಗ್ರೆಸ್ ಸಮಿತಿ” ಎಂಬ ಲೆಟರ್ ಹೆಡ್ ನಲ್ಲಿ ಸೆಪ್ಟೆಂಬರ್ 5ರ ಬೆಳಗ್ಗೆ 11 ಗಂಟೆಗೆ ಪತ್ರಕರ್ತರ ಭವನದಲ್ಲಿ ಚರ್ಚೆಗೆ ಅಂತ ಸೆಪ್ಟೆಂಬರ್ 4 ರಂದು ಪಂಥಾಹ್ವಾನವೊಂದು ದಿಢೀರನೆ ಬಂದಿದೆ! ಅದರಲ್ಲಿ “ಡಾ. ಮಹದೇವಪ್ಪನವರು ಬರುತ್ತಾರೆ” ಎಂದಿದೆ. ನಿಮ್ಮ ಹೆಸರು ಇದ್ದ ಕಾರಣಕ್ಕೆ, ಮೈಸೂರು ಭಾಗದ ಒಬ್ಬ ಹಿರಿಯ ರಾಜಕಾರಣಿ ಎಂಬ ನಿಮ್ಮ ಮೇಲಿನ ಗೌರವದ ಸಲುವಾಗಿ ಪ್ರತಿಕ್ರಿಯೆ ಕಳುಹಿಸುತ್ತಿದ್ದೇನೆ. ಅಧಿಕಾರ ಇದ್ದಾಗ ಕೆಲಸ ಮಾಡಲಿಲ್ಲ, ಈಗ ಮಾಡೋಕೆ ಕೆಲಸ ಇಲ್ಲ. ಇಂಥ ಪರಿಸ್ಥಿತಿ ಯಾಕೆ ಬರುತ್ತೆ ಅಂಥ ಇನ್ನೂ ಗೊತ್ತಾಗಿಲ್ವಾ ಸಾಹೇಬರೇ? ನನ್ನ ಮೇಲೆ ಸದಾ ಟೀಕೆ ಮಾಡುತ್ತಾ, ಮಾಧ್ಯಮಗಳಲ್ಲಿ ಪ್ರಚಾರ ಪಡೆಯುತ್ತಾ, ಜನರಿಂದ ಪದೇ ಪದೆ ತಿರಸ್ಕೃತಗೊಂಡು ನಿರ್ನಾಮವಾಗಿದ್ದರೂ ತಾನಿನ್ನೂ ಬದುಕಿದ್ದೇನೆಂದು ತೋರಿಸಿಕೊಳ್ಳಬೇಕಾದ ಅನಿವಾರ್ಯತೆ ನಿಮ್ಮ ಪಕ್ಷದಲ್ಲಿ ಕೆಲವರಿಗಿದೆ ಅಂತ ಗೊತ್ತು ಸರ್. ಆದರೆ ನೀವೇಕೆ ಅಂತಹ ಕ್ಷುಲ್ಲಕ ವ್ಯಕ್ತಿಗಳ ಜೊತೆ ಚರ್ಚೆಗೆ ಬರುತ್ತೀರಿ? ಆ ವ್ಯಕ್ತಿಯ ಜೊತೆ ಸೇರಿ ವಾರಕ್ಕೆರಡು ಪತ್ರಿಕಾಗೋಷ್ಠಿ ಮಾಡಿ ಹಾಳಾದ ಹಿರಿಯ ನಾಯಕರೊಬ್ಬರ ಕಥೆ ಗೊತ್ತಲ್ವಾ? ನಾನು ಮೈಸೂರಲ್ಲಿ ಇಲ್ಲದ ಸಂದರ್ಭದಲ್ಲಿ ನಾಳೆ ಬೆಳಗ್ಗೆ 11 ಗಂಟೆಗೆ ಪತ್ರಕರ್ತರ ಭವನಕ್ಕೆ ಬಾ ಅನ್ನೋದು ರಣಹೇಡಿಗಳು ಮಾಡುವ ಕೆಲಸ. ಅಂಥ ಪುಕ್ಕಲರ ಜೊತೆ ನೀವೇಕೆ ಸೇರಿಕೊಂಡಿದ್ದೀರಿ? ಸಾಹೇಬರೇ ನೀವೊಬ್ಬರು ಮಾಜಿ ಸಚಿವರು, ಮೈಸೂರಿನ ಉಸ್ತುವಾರಿ ನಿಭಾಯಿಸಿದವರು. ಈ ಪತ್ರ, ಫಾರ್ಮಾಲಿಟಿಸ್ ಏನೂ ಬೇಡ. ಫೋನ್ ತೆಗೆದು, ನನಗೆ ಡಯಲ್ ಮಾಡಿ, ಪ್ರತಾಪ್ … ಯಾವತ್ತೂ ಫ್ರೀ ಇದೀಯಾ, ಚರ್ಚೆ ಮಾಡೋಣ ಬಾ ಎನ್ನಿ ಸಾಕು. ಅದಕ್ಕಿಂತ ಮೊದಲು ನಾನು ನಿಮಗೆ ಎರಡು ಪ್ರಶ್ನೆ ಕೇಳಿದ್ದೆ. ಅದಕ್ಕೆ ದಾಖಲೆ ಸಮೇತ ಉತ್ತರ ಕೊಡುತ್ತೀರಾ?

ಪ್ರತಾಪ್ ಸಿಂಹ ಬರೆದ ಪತ್ರ
  1. ಎಂಟು ಸಾವಿರ ಕೋಟಿಯ ಈ 10 ಪಥದ ಯೋಜನೆಗೆ 2014 ಕ್ಕಿಂತ ಮೊದಲು ಸಂಸದರಾಗಿದ್ದ ಕೆಆರ್ ನಗರದ ಹಳ್ಳಿ ಹಕ್ಕಿಯಾಗಲಿ, 2018 ರವರೆಗೂ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರಾಗಲಿ, ಅವರ ಸಂಪುಟದಲ್ಲಿ ಲೋಕೋಪಯೋಗಿ ಸಚಿವರಾಗಿದ್ದ ಡಾ. ಮಹಾದೇವಪ್ಪನವರಾದ ನೀವಾಗಲಿ ಕನಿಷ್ಠ 8 ಪೈಸಾ ಕೊಟ್ಟಿದ್ದರೆ ಮೊದಲು ತೋರಿಸಿ.
  2. ಜಲದರ್ಶಿನಿ ಗೇಟ್ ನಿಂದ ಪಡುವಾರಳ್ಳಿ ಸರ್ಕಲ್ವರೆಗೂ 6 ಪಥದ ರಸ್ತೆ ಮಾಡುತ್ತೀನಿ ಅಂತ ಗಡ್ಕರಿಯವರಿಂದ CRFನಡಿ 12 ಕೋಟಿ ದುಡ್ಡು ತಂದು ಕೆಲಸ ಮಾಡಿದಿರಾ? ಎಲ್ಲಿದೆ 6 ಪಥದ ರಸ್ತೆ ತೋರಿಸಿ? (ಈ ಮೋಸವನ್ನು ಪತ್ತೆಹಚ್ಚಿ ಅದೇ ದುಡ್ಡಿಗೆ ಹಿನಕಲ್ ಸಿಗ್ನಲ್ ವರೆಗೂ ಡಾಂಬರೀಕರಣವನ್ನು ಮಾಡಿಸಿದ್ದು, ಜಲದರ್ಶಿನಿ ಪಕ್ಕದಲ್ಲಿರುವ PWD ಕಾಂಪೌಂಡ್ ಒಡೆಸಿ ಫುಟ್ಪಾಥ್ ಮಾಡಿಸಿದ್ದು ನಾನು ಎಂಬುದು ನೆನಪಿರಲಿ).

ಈ ಎರಡು ಪ್ರಶ್ನೆಗಳಿಗೆ ನೀವು ಮೊದಲು ದಾಖಲೆ ಸಮೇತ ನನಗೆ ಉತ್ತರ ಕಳಿಸಿ. ಆ ಉತ್ತರದ ಜೊತೆ ನಿಮ್ಮ ಮೊಬೈಲ್ ನಂಬರ್ ಕೂಡ ಕೊಡಿ. ನಾನೇ ನಿಮಗೆ ಕರೆ ಮಾಡಿ ನಮ್ಮಿಬ್ಬರ ಸಂವಾದದ ದಿನಾಂಕ ನಿಗದಿ ಮಾಡೋಣಾ. ನಾನು ಒಬ್ಬನೇ ಬರುತ್ತೇನೆ, ನೀವು ಜನರಿಂದ ಆಯ್ಕೆಯಾದ ಹಾಗು ಆಯ್ಕೆಯಾಗಿದ್ದ ನಿಮ್ಮ ಪಕ್ಷದ ಎಲ್ಲ ಹಾಲಿ, ಮಾಜಿ ಜನಪ್ರತಿನಿಧಿಗಳ ಜೊತೆ ಬನ್ನಿ. ದಾಖಲೆ ಆಧಾರಿತ ನಿಮ್ಮ ಉತ್ತರಕ್ಕಾಗಿ ಕಾಯುತ್ತಿರುತ್ತೇನೆ.

ಪ್ರತಾಪ್ ಸಿಂಹ ಬರೆದ ಪತ್ತ

ಅಂದಹಾಗೆ, ಕರ್ನಾಟಕದಲ್ಲಿ ನಡೆಯುತ್ತಿರುವ ಹೆದ್ದಾರಿ ಕಾಮಗಾರಿಗಳ ಪರಾಮರ್ಶೆ ಮತ್ತು ವೀಕ್ಷಣೆಗಾಗಿ ಆರ್.ಕೆ. ಪಾಂಡೆ (ಮೆಂಬರ್ ಪ್ರಾಜೆಕ್ಟ್ಸ್ , NHAI) ಬಂದಿದ್ದಾರೆ. ಇವತ್ತು ಚಿತ್ರದುರ್ಗಕ್ಕೆ ಹೋಗಿದ್ದಾರೆ. ನಾಳೆ ಬೆಂಗಳೂರಿನಲ್ಲಿ ಸಿಗುತ್ತಾರೆ. ಬಿಡುವಿದ್ದರೆ ನೀವೂ ಬನ್ನಿ , ಪತ್ರಕರ್ತರ ಭವನದಲ್ಲಿ ಪುಕ್ಕಟೆ ಪ್ರಚಾರಕ್ಕಾಗಿ ಕಾಲಹರಣ ಮಾಡುವುದಕ್ಕಿಂತ ಮೈಸೂರು ರಿಂಗ್ ರಸ್ತೆಯಲ್ಲಿ ಬರುವ ನರಸೀಪುರ ಜಂಕ್ಷನ್ ನಲ್ಲಿ ಗ್ರೇಡ್ ಸೆಪೆರೇಟರ್ ನಿರ್ಮಾಣ ಮಾಡಬೇಕೆಂಬ ನನ್ನ ಪ್ರಸ್ತಾವಕ್ಕೆ ಮಂಜೂರಾತಿ ಕೊಟ್ಟಿರುವ ಪಾಂಡೆಯವರಿಗೊಂದು ಧನ್ಯವಾದ ಹೇಳಿ, ನರಸೀಪುರ ರಸ್ತೆಯನ್ನು ೪ ಲೇನ್ ಮಾಡಬೇಕೆಂದು ಈಗಾಗಲೇ ನಿತಿನ್ ಗಡ್ಕರಿಯವರಿಗೆ ಮನವಿ ಕೊಟ್ಟಿದ್ದೇನೆ, ಪಾಂಡೆಯವರಿಗೂ ಮನವರಿಕೆ ಮಾಡಿಕೊಟ್ಟು ಬರೋಣ

ಮತ್ತೆ ಹೇಳುತ್ತಿದ್ದೇನೆ. ನನ್ನ ಎರಡು ಸವಾಲಿನ ರೂಪದ ಪ್ರಶ್ನೆಗೆ ‘ದಾಖಲೆ’ ಸಮೇತ ಉತ್ತರ ಕಳಿಸಿ.‌ ಆ ನಂತರ ಪತ್ರಕರ್ತರ ಮುಂದೆಯೆ ಸಂವಾದ ಮಾಡೋಣಾ. ಪತ್ರದಲ್ಲಿ ನಿಮ್ಮಂಥ ಹಿರಿಯರ ಹೆಸರಿದ್ದ ಕಾರಣ ಈ ಉತ್ತರ ನೀಡುತ್ತಿದ್ದೇನೆ. ಇಲ್ಲದಿದ್ದರೆ, ನನ್ನಿಂದ ಈ ಉತ್ತರ ಕೂಡ ಲಭ್ಯವಾಗುತ್ತಿರಲಿಲ್ಲ. ನಿಮಗೆ ನೆನಪಿರಲಿ, ನಾನು ಟಿವಿಯಲ್ಲಿನ ಡಿಬೇಟ್ ಗಳಿಗೆ ಹೋಗುವುದನ್ನು ನಿಲ್ಲಿಸಿ 3 ವರ್ಷವಾಯ್ತು. ಇನ್ನೂ ನಿಮ್ಮ ಪ್ರಚಾರದ ಗೀಳಿಗೆ ನನ್ನ ಸಮಯವನ್ನು ನಾನು ಕೊಡುವುದಿಲ್ಲ. ನನ್ನ ಮೇಲೆ ನಂಬಿಕೆ – ವಿಶ್ವಾಸವಿಟ್ಟು ಮತ ನೀಡಿದ ಮತದಾರರ ಕೆಲಸ ಮಾಡಲು ನನಗೆ ಸಮಯ ಸಾಕಾಗುತ್ತಿಲ್ಲ. ಇಂಥಹದರಲ್ಲಿ ಕೆಲಸ ಇಲ್ಲದೆ ಕುಳಿತವರು ಕರೆಯುವ ಸಂವಾದದಲ್ಲಿ ಭಾಗವಹಿಸಲು ಸಾಧ್ಯನಾ? ಮೈಸೂರಿನಲ್ಲಿ ಕೆಲವು ರಾಜಕಾರಣಿಗಳು ವರ್ಷವಿಡೀ ಮಾತನಾಡುತ್ತಿರುತ್ತಾರೆ, ಆದರೆ ಮೈಸೂರಿನ ಜನ ಐದು ವರ್ಷ ತಾಳ್ಮೆಯಿಂದ ಕಾದು ಮತಪೆಟ್ಟಿಗೆ ಮೂಲಕ ಒಮ್ಮೆಲೇ ತೀರ್ಪುಕೊಡುತ್ತಾರೆ. ಇದು ನಿಮ್ಮ ಅನುಭವಕ್ಕೂ ಬಂದಿದೆ.

ಧನ್ಯವಾದಗಳು

ಪ್ರತಾಪ್ ಸಿಂಹ

About Author

Leave a Reply

Your email address will not be published. Required fields are marked *