ಗ್ಯಾಸ್ ಪೈಪ್ ಲೈನ್ ಅಳವಡಿಕೆ ಯೋಜನೆಯಲ್ಲಿ ಪ್ರತಾಪ್ ಸಿಂಹಗೆ ಶೇ.10 ರಷ್ಟು ಕಮಿಷನ್: ಎಂ.ಲಕ್ಷ್ಮಣ್ ಆರೋಪ

1 min read

ಮೈಸೂರು,ಜ.31-ನಗರದ ಕಾಂಗ್ರೆಸ್ ಭವನದಲ್ಲಿಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಸುದ್ದಿಗೋಷ್ಠಿ ನಡೆಸಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಹರಿಹಾಯ್ದಿದ್ದಾರೆ.
ಗ್ಯಾಸ್ ಪೈಪ್ ಲೈನ್ ಅಳವಡಿಕೆ ವಿಚಾರವಾಗಿ ಮಾತನಾಡಿದ ಅವರು, ಪ್ರತಾಪ್ ಸಿಂಹ ಯಾರ ಕಿವಿಗೆ ಹೂವು ಮುಡಿಸುತ್ತಿದ್ದಾರೆ? ಅವರಿಗೆ ಶೇ.10 ರಷ್ಟು ಕಮಿಷನ್ ಹೋಗಿದೆ. ಹೀಗಾಗಿ ಯೋಜನೆ ಪರವಾಗಿ ಮಾತನಾಡುತ್ತಿದ್ದಾರೆ ಎಂದು ಆರೋಪಿದರು.
ನಗರದಲ್ಲಿ ಗ್ಯಾಸ್ ಪೈಪ್ ಲೈನ್ ಅಳವಡಿಕೆ ಯೋಜನೆಗೆ 700 ಕೋಟಿ ರೂ. ವಿನಿಯೋಗಿಸಲಾಗುತ್ತಿದೆ. ಗ್ಯಾಸ್ ದರವನ್ನು ಖಾಸಗಿಯವರೇ ನಿಗದಿ ಮಾಡಲಿದ್ದಾರೆ. ಪರಿಣಾಮ ಗ್ಯಾಸ್ ಬೆಲೆ ದುಬಾರಿಯಾಗಿ ಪರಿಣಮಿಸಲಿದೆ. ಖಾಸಗಿಯವರು ಬಡ ಬಗ್ಗರನ್ನು ಸುಲಿಗೆ ಮಾಡಲಿದ್ದಾರೆ. ಪ್ರತಾಪ್ ಸಿಂಹ ಅವರು ಖಾಸಗಿಯವರ ಪರ ಹೆಚ್ಚಿನ ಒಲವು ಏಕೆ ತೋರಿಸುತ್ತಿದ್ದೀರಾ? ಪ್ರತಾಪ್ ಸಿಂಹಗೆ 10% ಪರ್ಸೆಂಟ್ ಕಮೀಷನ್ ಹೋಗಿದೆ. ಹೀಗಂತಾ ಜನರು ಮಾತನಾಡಿಕೊಳ್ಳುತ್ತಿದ್ದಾರೆ. ಹಾಗಾಗಿಯೇ ಈ ಯೋಜನೆ ಪರವಾಗಿ ಸಂಸದ ಪ್ರತಾಪ್ ಸಿಂಹ ಹೆಚ್ಚಿನ ಮುತುವರ್ಜಿ ವಹಿಸುತ್ತಿದ್ದಾರೆ. ಈ ಬಗ್ಗೆ ಸಾರ್ವಜನಿಕವಾಗಿ ಚರ್ಚೆಯಾಗಬೇಕಿದೆ ಎಂದು ಹೇಳಿದರು.
ಈ ವಿಚಾರವಾಗಿ ಬಿಜೆಪಿ ಪಕ್ಷದ ಶಾಸಕರು ಸಂಸದರ ನಡುವೆ ವಾಕ್ಸಮರ ನಡೆಯುತ್ತಿದೆ. ಇದರ ಹಿಂದೆ ಗ್ಯಾಸ್ ವಿತರಣೆಯನ್ನು ಖಾಸಗೀಕರಣ ಮಾಡುವ ಹುನ್ನಾರ ಅಡಗಿದೆ. ಈಗಾಗಲೇ ಅಡುಗೆ ಅನಿಲ ಸಿಲಿಂಡರ್ ಬೆಲೆ ಒಂದು ಸಾವಿರ ರೂಪಾಯಿ ಹತ್ತಿರ ಇದೆ. ಮುಂಬರುವ ದಿನಗಳಲ್ಲಿ ಗ್ಯಾಸ್ ವಿತರಣೆ ಸಂಪೂರ್ಣವಾಗಿ ಖಾಸಗಿಯವರ ಪಾಲಾಗಲಿದೆ. ಮುಂದಿನ ಆರು ತಿಂಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆಯನ್ನು ಖಾಸಗಿಯವರಿಗೆ ವಹಿಸಲಿದ್ದಾರೆ. 500 ರೂಪಾಯಿಗೆ ಗ್ಯಾಸ್ ಸಿಲಿಂಡರ್ ನೀಡುವುದು ಸುಳ್ಳು ಆಶ್ವಾಸನೆ. ಈ ವಿಚಾರದಲ್ಲಿ ಸಂಸದ ಪ್ರತಾಪ್ ಸಿಂಹ ಹಲವು ವಿಚಾರಗಳನ್ನು ಮುಚ್ಚಿಟ್ಟಿದ್ದಾರೆ ಎಂದು ಆಪಾದಿಸಿದರು.
ಆರು ತಿಂಗಳ ಆಡಳಿತದ ಬಗ್ಗೆ ಸಿಎಂ ಪಟ್ಟಿ ಬಿಡುಗಡೆ ವಿಚಾರವಾಗಿ ಮಾತನಾಡಿದ ಲಕ್ಷ್ಮಣ್ ಅವರು, ಜಿಲ್ಲಾ ಉಸ್ತುವಾರಿ ಸಚಿವರನ್ನು ಬದಲಾಯಿಸಿದ್ದೇ ಇವರ ಸಾಧನೆ. ಭ್ರಷ್ಟಾಚಾರವನ್ನು ತುತ್ತತುದಿಗೆ ತೆಗದುಕೊಂಡು ಹೋಗಿರುವುದು ನಿಮ್ಮ ಸಾಧನೆ. ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ತರುವಲ್ಲಿ ವಿಫಲರಾಗಿದ್ದಾರೆ. ಕೊರೊನಾ ಹೆಸರಿನಲ್ಲಿ ಲೂಟಿ ಮಾಡುತ್ತಿದ್ದಾರೆ. ಬಿಜೆಪಿಯ ಜನಪ್ರತಿನಿಧಿಗಳು ಹಾದಿ ಬೀದಿಯಲ್ಲಿ ಆರೋಪ ಪ್ರತ್ಯಾರೋಪಗಳಲ್ಲಿ ತೊಡಗಿದ್ದಾರೆ. ಇದು ಬಸವರಾಜ ಬೊಮ್ಮಾಯಿಯವರ ಸರ್ಕಾರದ ಸಾಧನೆ ಎಂದು ವ್ಯಂಗ್ಯವಾಡಿದರು.
ಕೆಪಿಸಿಸಿ ವಕ್ತಾರೆ ಮಂಜುಳಾ ಮಾನಸ ಮಾತನಾಡಿ, ಗ್ಯಾಸ್ ಪೈಪ್ ಲೈನ್ ಬಗ್ಗೆ ಸಂಸದ ಪ್ರತಾಪಸಿಂಹ ಅವರು ಸಾಕಷ್ಟು ಮುತುವರ್ಜಿ ವಹಿಸುತ್ತಿದ್ದಾರೆ. ಜನಪ್ರತಿನಿಧಿಗಳು ಶಾಸಕ ಪಾಲಿಕೆ ಸದಸ್ಯರ ಬಗ್ಗೆ ಅವಹೇಳನಕಾರಿ ಮಾತನಾಡಿದ್ದಾರೆ. ಒಂದು ರೀತಿ ನಾಚಿಕೆಗೇಡಿನ ಸಂಗತಿ. ಇವರ ಕಮಿಷನ್ ದಂಧೆಯನ್ನು ಮಾಧ್ಯಮದ ಮೂಲಕ ಹೇಳುತ್ತಿದ್ದಾರೆ. ಇದು ಸರಿಯಲ್ಲ ಇದನ್ನು ಯಾರು ಒಪ್ಪುವುದಿಲ್ಲ. ಎರಡು ಬಾರಿ ಗೆದ್ದ ತಕ್ಷಣ ಗೆಲುವನ್ನು ಮಹಾರಾಜರಿಗೆ ಹೋಲಿಸಿಕೊಳ್ಳಬಾರದು. ಈ ಮೂಲಕ ಮೈಸೂರು ಭಾಗದ ಜನಪ್ರತಿನಿಧಿಗಳಿಗೆ ಅವಮಾನ ಮಾಡಿದ್ದಾರೆ. ಅವರು ಗೆದ್ದ ಸಂದರ್ಭಗಳು ಕಾರಣಗಳು ಬೇರೆ ಇದೆ. ಗ್ಯಾಸ್ ಪೈಪ್ ವಿಚಾರ ಕಮಿಷನ್ಗಾಗಿ ದೊಡ್ಡ ನಾಟಕ. ಕಮಿಷನ್ ಗಾಗಿ ಬೀದಿ ನಾಟಕ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

About Author

Leave a Reply

Your email address will not be published. Required fields are marked *